ಕಾಲಾದಿಗಳು ಜಗತ್ಕಾರಣವಾಗಿರಬಹುದೆ ?

Spread the love

ಕಾಲಾದಿಗಳು ಜಗತ್ಕಾರಣವಾಗಿರಬಹುದೆ ?

ಋಷಿಗಳ ಜಿಜ್ಞಾಸಾಗೋಷ್ಠಿಯನ್ನು ಕುರಿತು ಹಿಂದೆ ಪ್ರಸ್ತಾಪಿಸಲಾಗಿದೆ. ಅವರುಗಳು ಜಗತ್ಕಾರಣವನ್ನು ಕಂಡುಕೊಳ್ಳಲು ವಿಚಾರಮಾಡಲಾರಂಭಿಸಿದಾಗ ಹೊಳೆದ ಕೆಲವು ತತ್ತ್ವಗಳನ್ನು ಈಗ ಪ್ರಸ್ತಾಪಿಸಲಾಗುವದು. ಮೊದಲನೆಯದಾಗಿ ಕಾಲವು ಜಗತ್ಕಾರಣವಾಗಿರಬಹುದು-ಎಂದು ಒಬ್ಬರು ತಮ್ಮ ವಾದವನ್ನು ಮುಂದಿಟ್ಟರು. ಕಾಲವೆಂದರೇನು? ಅದು ಅತೀಂದ್ರಿಯವಸ್ತುವೇ ಸರಿ. ಆದರೂ ನಾವು ವ್ಯವಹಾರವನ್ನು ಕಾಲಾಧೀನವಾಗಿಯೇ ಮಾಡುವೆವು. ದೇಶ-ಕಾಲಗಳೇ ನಮ್ಮ ಜೀವನದ ಪ್ರವೃತ್ತಿನಿವೃತ್ತಿಗಳಿಗೂ ಜಗತ್ತಿನ ಆಗುಹೋಗುಗಳಿಗೂ ಆಧಾರವಾಗಿವೆ. ಒಬ್ಬಾನೊಬ್ಬ ರಾಜನಿದ್ದನು-ಎಂದು ಒಂದು ಕತೆಯನ್ನು ಹೇಳಬೇಕಾದರೂ ಇಂಥ ದೇಶದಲ್ಲಿ ಇಂಥ ಕಾಲದಲ್ಲಿದ್ದನು-ಎಂದೇ ಹೇಳಬೇಕಾಗಿದೆ. ಕಾಲವು ಭೂತ, ವರ್ತಮಾನ, ಭವಿಷ್ಯತ್ತು-ಎಂದು ವಿಂಗಡವಾಗಿದೆ. ಹಿಂದೆ ಕಳೆದು ಹೋಗಿರುವದು-ಭೂತಕಾಲವು.

ಈಗ ನಡೆಯುತ್ತಿರುವದು ವರ್ತಮಾನವೆನಿಸುವದು. ಮುಂದೆ ಬರಲಿರುವದು ಭವಿಷ್ಯತ್ಕಾಲವೆನಿಸುವದು. ಜಗತ್ತಿನ ಎಲ್ಲಾ ಘಟನೆಗಳೂ ಈ ಮೂರರಲ್ಲಿ ಒಂದು ಕಾಲಕ್ಕೆ ಒಳಪಟ್ಟೇ ಇವೆ. ಇನ್ನು ಕಾಲವನ್ನು ದಿನ-ಮಾಸ-ಋತು-ಸಂವತ್ಸರಾದಿ ಹೆಸರುಗಳಿಂದಲೂ ಅಳೆದು ವ್ಯವಹರಿಸುವವು. ಸೃಷ್ಟಿಯಲ್ಲಿರುವ ಪದಾರ್ಥಗಳೆಲ್ಲವೂ ಕಾಲಾಧೀನವಾಗಿಯೇ ತೋರಿಮರೆಯಾಗುವವು. ಕೆಲವು ವೇಳೆ ಕಾಲವು ಅತಿ ಸೂಕ್ಷ್ಮವಾಗಿಯೂ ಅಳೆಯಲ್ಪಡುವದು. ಕಾಲಮನವು ಮನುಷ್ಯರಂತೆಯೇ ದೇವತೆಗಳಿಗೂ ಚತುರ್ಮುಖಬ್ರಹ್ಮನಿಗೂ ಅನ್ವಯಿಸುವದು. ಬ್ರಹ್ಮನ ಕಾಲಮಾನಕ್ಕೂ ನಮ್ಮ ಕಾಲಮಾನಕ್ಕೂ ಅಜ-ಗಜಾಂತರ ವ್ಯತ್ಯಾಸವಿದ್ದರೂ ಬ್ರಹ್ಮನೂ ಕಾಲಾಧೀನನೇ-ಎಂಬ ತತ್ತ್ವವಂತೂ ನಿಜ. ಹೀಗೆ ಎಲ್ಲಾ ಭೂತಗಳನ್ನೂ ತನ್ನ ಗರ್ಭದಲ್ಲಿ ಅಡಗಿಸಿಕೊಂಡು ಪಚನಮಾಡುತ್ತಿರುವ ಕಾಲವು ಜಗತ್ತಿಗೆ ಕಾರಣವಿರಬಹುದೆ? ಎಂಬಿದೊಂದು ಪಕ್ಷವು. ಕಾಲಾಯ ತಸ್ಯೆ ನಮಃ’ ಎಂದು ಬಲ್ಲವರು ಹೇಳುವರು. ಆದರೆ ಅದರಂತೆಯೇ ಮತ್ತೊಂದು ಜಗತ್ಕಾರಣವಾಗಿರಬಾರದೇಕೆ? ಎಂಬ ತರ್ಕವು ಎದ್ದುಕೊಂಡಾಗ ಕಾಲವು ಜಗತ್ಕಾರಣವೆಂಬುದು ಸಿದ್ಧಾಂತವಾಗದೆ ಹೋಗುವದು. ಈಗ ಎರಡನೆಯ ಪಕ್ಷವನ್ನು ನೋಡೋಣ.

ಸ್ವಭಾವವು ಜಗತ್ಕಾರಣವಾಗಿರಬಹುದೆ? ಎಂಬದು ಇನ್ನೊಂದು ವಾದವು. ಸ್ವಭಾವವೆಂದರೆ ಪದಾರ್ಥಗಳಲ್ಲಿ ಶಾಶ್ವತವಾಗಿದ್ದುಕೊಂಡಿರುವ ಧರ್ಮವು. ಇದು ಎಂದೆಂದಿಗೂ ಬದಲಾಗತಕ್ಕದ್ದಲ್ಲ. ಉದಾಹರಣೆಗೆ ಬೆಂಕಿಯಲ್ಲಿರುವ ಬಿಸಿಯು, ಬಿಸಿ ಎಂದರೂ ಬೆಂಕಿಯೆಂದರೂ ಒಂದೇ ಅಲ್ಲವೆ? ಹಾಗೆಯೇ ಕಬ್ಬಿನಲ್ಲಿರುವ ಸಿಹಿಯು, ಇದು ಕಬ್ಬನ್ನು ಹಿಂಡಿದರೂ ಆ ನೀರನ್ನು ಕುದಿಸಿದರೂ ನಾಶವಾಗುವದಿಲ್ಲ. ಇದೇ ಸ್ವಭಾವವು. ಹೀಗೆ ಪ್ರತಿಯೊಂದು ಪದಾರ್ಥವೂ ತನ್ನ ಅಸಾಧಾರಣವಾದ ಸ್ವಭಾವವನ್ನು ಹೊಂದಿರುವದರಿಂದಲೇ ಅದು ತಾನೇ ತಾನಾಗಿರುವದು. ಅದು ಇನ್ನೊಂದಾಗಲಾರದು. ಜಗತ್ತಿನಲ್ಲಿರುವ ವಸ್ತುಗಳ ಸ್ವಭಾವವನ್ನು ಕಂಡುಹಿಡಿದು ಅವುಗಳನ್ನು ಬಳಸಿ ಕೊಳ್ಳುವದಕ್ಕಾಗಿ ಭೌತಿಕವಿಜ್ಞಾನಶಾಸ್ತ್ರವು ಹುಟ್ಟಿರುತ್ತದೆ. ಈ ವಸ್ತುಸ್ವಭಾವಪ್ರತಿಪಾದಕ ಶಾಸ್ತ್ರವು ಉಳಿದ ಸಂಶೋಧನೆಗಳಿಗೆ ಆಧಾರವಾಗಿದೆ. ಆದರೆ ಜಗತ್ತಿನ ವೈಚಿತ್ರ್ಯವನ್ನು ಮನಗಂಡಾಗ ಸೃಷ್ಟಿಯಲ್ಲಿ ಅಡಗಿರುವ ನಾನಾ ವಸ್ತುಗಳನ್ನೂ ಅವುಗಳ ಸ್ವಭಾವವನ್ನೂ ಯಾವನೊಬ್ಬನೂ ಪೂರ್ಣವಾಗಿ ಅರಿತುಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ. ಹೀಗೆ ಸೃಷ್ಟವಾದ ವಸ್ತುಗಳ ಸ್ವಭಾವ ವಿಜ್ಞಾನವೇ ಅಪರಿಪೂರ್ಣವಾಗಿರುವಲ್ಲಿ ಇಡಿಯ ಜಗತ್ತಿನ ಮೂಲವಸ್ತುವಿನ ವಿಜ್ಞಾನವಾಗಲಿ, ಸ್ವಭಾವವಾಗಲಿ ಮನುಷ್ಯನಿಗೆ ತಿಳಿಯಲು ಹೇಗೆ ಸಾಧ್ಯ? ಆದ್ದರಿಂದಲೇ ಸ್ವಭಾವವು ಜಗತ್ಕಾರಣವಾಗಿರಬಹುದೆಂದು ಮೇಲು ನೋಟಕ್ಕೆ ತೋರಿದರೂ ಭಿನ್ನಭಿನ್ನ ಸ್ವಭಾವವುಳ್ಳ ವಸ್ತುಗಳಲ್ಲಿ ಯಾವದು ಜಗತ್ಕಾರಣವೆಂಬುದು ಸಿದ್ಧಾಂತವಾಗುವದಿಲ್ಲ, ಹೀಗೆ ಸ್ವಭಾವವಾದವೂ ಒಪ್ಪಾಗುವಂತಿಲ್ಲ. ಕೆಲವರು ಜಗತ್ಕಾರಣವಿನ್ನೇನಿದ್ದೀತು? ವಸ್ತುಸ್ವಭಾವವೇ ಸತ್ಯವು-ಎಂದು ತೃಪ್ತರಾಗಿ ಯಾವದಾದರೂ ಹೀಗೇಕೆ ಆಗಿದೆ? ಎಂದು ಕೇಳಿದರೆ ಅದು ಸ್ವಭಾವ (Nature) ಎಂದುಬಿಡುವರು. ಉದಾಹರಣೆಗೆ ಹುಟ್ಟಿದ ಕೂಡಲೇ ಮಗುವು ಏಕೆ ಅಳುತ್ತದೆ? ಅನಂತರ ನಿದ್ರೆಯನ್ನೇಕೆ ಮಾಡುತ್ತದೆ? ಎಂದರೆ ಅದು ಮನುಷ್ಯ ಸ್ವಭಾವ ಎಂದುಬಿಡುವರು.

ಈಗ ನಿಯತಿವಾದವನ್ನು ನೋಡೋಣ, ನಿಯತಿ ಎಂದರೆ ಪಾಪಪುಣ್ಯಗಳ ಸಮಾನತೆಯೆಂಬ ಕರ್ಮವೆಂದು ಭಾಷ್ಯಕಾರರು ಅರ್ಥಮಾಡಿದ್ದಾರೆ. ಇದು ತಕ್ಕಮಟ್ಟಿಗೆ ಹೊಂದುತ್ತದೆ. ಜಗತ್ತಿನ ಹುಟ್ಟುವಿಕೆಯು ಅದು ಹಿಂದಿನ ಸೃಷ್ಟಿಯಲ್ಲಿ ಜೀವರು ಮಾಡಿದ್ದ ಪಾಪಪುಣ್ಯಗಳ ಫಲವು-ಎಂದು ಬಲ್ಲವರು ಅಭಿಪ್ರಾಯಪಡುತ್ತಾರೆ. ಪಾಪಪುಣ್ಯಗಳ ವೈಷಮ್ಯವು ದೇವತಿರ್ಯಗಾದಿಗಳ ಸೃಷ್ಟಿಗೂ ಅವುಗಳ ಸಮಾನತೆಯು ಮನುಷ್ಯರ ಸೃಷ್ಟಿಗೂ ಕಾರಣವೆಂಬುದು ಯುಕ್ತವಾಗಿತೋರುತ್ತದೆ. ಆದರೆ ಪುಣ್ಯವಾಗಲಿ ಪಾಪವಾಗಲಿ-ಕರ್ಮಕೋಟಿಗೇ ಸೇರಿರುವದರಿಂದ ಒಟ್ಟಿನಲ್ಲಿ ನಿಯತಿಯೆಂದರೆ ಅದೃಷ್ಟಕರ್ಮವೆಂದರ್ಥಮಾಡಬೇಕು. ಹೀಗೆ ಕರ್ಮವೂ ಜನ್ಮವೂ ಒಂದಕ್ಕೊಂದು ಕಾರಣವಾಗಿದ್ದು ಯಾವದು ಮೊದಲೆಂಬುದು ತಿಳಿಯದ್ದರಿಂದ ಈ ಸಂಸಾರವು ಅನಾದಿಯೆಂದೂ ನಿರೂಪಿಸಲ್ಪಟ್ಟಿದೆ. ಜಗತ್ತು ಕೂಡ ಪ್ರಲಯಕಾಲದಲ್ಲಿ ಅವ್ಯಕ್ತವಾಗಿ ಅಡಗಿಕೊಂಡಿದ್ದು ಮುಂದೆ ಸೃಷ್ಟಿಕಾಲಕ್ಕೆ ಆಯಾ ಪ್ರಾಣಿಗಳು ಅನುಭವಿಸಬೇಕಾಗಿರುವ ಕರ್ಮಫಲಗಳ ನಿಮಿತ್ತವಾಗಿ ಹೊರತೋರಿಕೊಳ್ಳುತ್ತದೆ ಎಂಬ ವಾದವನ್ನು ಅವಿದ್ಯಾದೃಷ್ಟಿಯಲ್ಲಿ ಸರಿಯೆಂದೇ ವೇದಾಂತದರ್ಶನದಲ್ಲಿಯೂ ಒಪ್ಪಲಾಗಿದೆ. ಆದ್ದರಿಂದ ಈಗಲೂ ಕರ್ಮವಾದಕ್ಕೆ ಹೆಚ್ಚಿನ ಬೆಂಬಲವಿದೆ.

ಮಹಾಭಾರತದಲ್ಲಿರುವ ಒಂದು ಕಥೆ ಹೀಗಿದೆ: ಒಬ್ಬ ಬಡಹೆಂಗಸಿನ ಮಗುವನ್ನು ಒಂದು ಹಾವು ಕಡಿದಾಗ ಅದು ಮೃತಪಟ್ಟಿತು. ಕೂಡಲೆ ಒಬ್ಬ ಬೇಡರವನು ಆ ಹಾವನ್ನು ಕೊಲ್ಲಲು ಹೋದಾಗ ಅದು ನಾನು ಬೇಕಂತ ಕಡಿಯಲಿಲ್ಲ. ಆ ವ್ಯಕ್ತಿಯು ಸಾಯುವಕಾಲ ಬಂದಿತು; ಅದಕ್ಕಾಗಿ ಕಡಿದೆನು. ನನ್ನದೇನೂ ತಪ್ಪಿಲ್ಲ; ಬೇಕಾದರೆ ಕಾಲನನ್ನು ಕೇಳು’ ಎಂದಿತು. ಆಗ ಕಾಲದೇವತೆಯು ಪ್ರತ್ಯಕ್ಷನಾಗಿ “ನನ್ನದೂ ತಪ್ಪಿಲ್ಲ ; ಈ ಹುಡುಗನ ಆಯುಸ್ಸು ಪೂರೈಸಿತು. ಆದ್ದರಿಂದ ಹಾವನ್ನು ಪ್ರೇರಿಸಿದೆನು” ಎಂದನು. ಕೂಡಲೆ ಆಯುರ್ದೇವತೆಯೂ ಪ್ರತ್ಯಕ್ಷನಾಗಿ “ನಾನೂ ತಪ್ಪಿತಸ್ಥನಲ್ಲ ; ಈ ಬಾಲಕನು ಮಾಡಿದ್ದ ಕರ್ಮವು ಪೂರ್ಣಬದುಕಿಗೆ ಸಾಕಾಗುವಷ್ಟಿರಲಿಲ್ಲ. ಆದ್ದರಿಂದ ಕರ್ಮವು ಪೂರೈಸಿದ್ದರಿಂದಲೇ ಇವನು ನಿಧನನಾದನು” ಎಂದನು. ಆ ವೇಳೆಗೆ ಅಲ್ಲೊಬ್ಬ ಋಷಿಯು ಕಾಣಿಸಿಕೊಂಡು ಆ ಮಗುವಿನ ತಾಯಿಯನ್ನು ಸಮಾಧಾನಗೊಳಿಸಿ “ಅಮ್ಮಾ, ಜಗತ್ತೆಲ್ಲ ಹೀಗೆಯೇ; ಅವರವರುಮಾಡಿದ ಪಾಪಪುಣ್ಯಗಳ ಫಲವು ಪೂರೈಸಿದ ಕೂಡಲೆ ದೇಹವನ್ನು ಬಿಡಲೇಬೇಕು. ಎಣ್ಣೆ ಪೂರೈಸಿದಲ್ಲಿ ದೀಪವು ಆರುವಂತೆ ಕರ್ಮವು ಪೂರೈಸಿದಲ್ಲಿ ಜನ್ಮವು ಕೊನೆಗಾಣುವದು. ಅಂತೂ ಈ ಬಾಲಕನ ಸಾವಿಗೆ ಕಾಲನೇ ಮೊದಲಾದವರು ಯಾರೂ ಕಾರಣರಲ್ಲ; ಇವನ ಕರ್ಮವೇ ಕಾರಣ; ನೀನು ದುಃಖಿಸಬೇಡ”ಎಂದು ಉಪದೇಶಮಾಡಿದನು.

ಈ ಕಥೆಯಿಂದ ತಿಳಿದುಬರುವುದೇನೆಂದರೆ: ಆಯಾ ಮಾನವನ ಕರ್ಮವು ಅವನವನ ಜೀವನವನ್ನು ರೂಪಿಸುತ್ತದೆ. ಆ ಕರ್ಮವೆಂಬುದು ಎಂದು, ಯಾವ ಜನ್ಮದಲ್ಲಿ ಮಾಡಿದ್ದಾದರೂ ಕಾಯ್ದುಕೊಂಡಿದ್ದು ಸಮಯದಲ್ಲಿ ತನ್ನ ಫಲವನ್ನು ಕೊಡುತ್ತದೆ. ಕೋಟಿಕಲ್ಪಗಳಾದರೂ ಮಾಡಿದ್ದ ಕರ್ಮವು ಫಲವನ್ನೀಯದೆ ನಾಶವಾಗುವದಿಲ್ಲ’ ಎಂಬ ಸೂಕ್ತಿಗೆ ಇದೇ ಅಭಿಪ್ರಾಯ. ಹೀಗೆ ಜಗತ್ತು ಕರ್ಮಬದ್ಧವಾಗಿದೆ. ಶ್ರುತಿಯಲ್ಲಿಯೂ ಬೃಹದಾರಣ್ಯಕದಲ್ಲಿ ಯಾಜ್ಞವಲ್ಯ-ಆರ್ತಭಾಗಸಂವಾದದಲ್ಲಿ ಈ ಕರ್ಮರಹಸ್ಯವನ್ನು ಜಿಜ್ಞಾಸಮಾಡಿ ನಿರ್ಧರಿಸಲಾಗಿದೆ. ಆದ್ದರಿಂದ ಕರ್ಮವೇ ಜಗತ್ಕಾರಣವೆಂಬ ವಾದವೂ ಈ ಸಂದರ್ಭದಲ್ಲಿ ವಿಚಾರಣೀಯವಾಗಿದೆ.

ಈಗ ಯದೃಚ್ಛಾವಾದವನ್ನು ನೋಡೋಣ. ಯದೃಚ್ಛೆಯೆಂದರೆ ಆಕಸ್ಮಿಕವಾಗಿ ಸಂಭವಿಸುವದು ಅಥವಾ ಬಂದೊದಗುವದು-ಎಂದರ್ಥ. ಜಗತ್ತು ಆಕಸ್ಮಿಕವಾಗಿ ಹುಟ್ಟಿರಬೇಕು; ಇದಕ್ಕೆ ಕಾರಣವೇನೂ ಇರಲಾರದು-ಎಂಬ ವಾದವೂ ಇದೆ. ಏಕೆಂದರೆ ವ್ಯವಹಾರದಲ್ಲಿಯೂ ನಾವು ನಿರೀಕ್ಷಿಸದೇ ಇದ್ದ ಕೆಲವು ಆಕಸ್ಮಿಕ ಘಟನೆಗಳು ಸಂಭವಿಸುತ್ತವೆ. ನಾನು ಕಂಡ ಒಂದು ಉದಾಹರಣೆ ಹೀಗಿದೆ: ಒಂದು ಮದುವೆ  ಸಂದರ್ಭದಲ್ಲಿ ಆ ದಿನ ಬೆಳಿಗ್ಗೆ ಅನಿರೀಕ್ಷಿತವಾಗಿ ವರನಿಗೆ ಅಶೌಚ ಬಂದದ್ದರಿಂದ ಬರಲಾಗುವದಿಲ್ಲವೆಂದೂ ಅದನ್ನು ಬೇರೊಂದುದಿನಕ್ಕೆ ಗೊತ್ತುಮಾಡಬೇಕೆಂದೂ ಸಂದೇಶವು ಬಂದಿತು. ವಧುವಿನ ಕಡೆಯವರು ಬಹಳ ಆತಂಕಗೊಂಡರು. ಏಕೆಂದರೆ ವಿವಾಹ ಸಿದ್ಧತೆಗಳೆಲ್ಲ ಪೂರೈಸಿತ್ತು. ಕೂಡಲೇ ಒಬ್ಬ ಹಿರಿಯರು ಮನಸ್ಸುಮಾಡಿ ವಧುವಿನ ತಂಗಿಗೆ ಅಲ್ಲಿ ಓಡಾಡಲು ಬಂದಿದ್ದ ಅವಳ ಸೋದರಮಾವನನ್ನೇ ವರನನ್ನಾಗಿ ಒಪ್ಪಿಸಿ ಇಬ್ಬರಿಗೂ ಅದೇ ಸಿದ್ಧತೆಯಲ್ಲೇ ಅದೇ ಸಮಯಕ್ಕೇ ವಿವಾಹಮಾಡಿಸಿಬಿಟ್ಟರು. ಈ ಸಂದರ್ಭದಲ್ಲಿ ಆ ಹೊಸ ವಧೂವರರಿಬ್ಬರಿಗೂ ತಮ್ಮ ಮದುವೆಯ ಕಲ್ಪನೆಯೇ ಇರಲಿಲ್ಲ. ಆದರು ಅದು ಅನಿರೀಕ್ಷಿತವಾಗಿ ಸಂಘಟಿಸಿದ್ದರಿಂದ ಇಬ್ಬರೂ ಒಪ್ಪಿ ಮದುವೆಯಾಗಿ ಈಗ ಚೆನ್ನಾಗಿಯೇ ಇದ್ದಾರೆ. ಹೀಗೆ ಯದೃಚ್ಛಾವಾದಿಗಳು ಜಗತ್ತಿನ ಅನೇಕ ಅನಿರೀಕ್ಷಿತ-ಕಾಕತಾಳೀಯ ಘಟನೆಗಳನ್ನು ನೋಡಿ ಜಗತ್ತು ಸಹ ಯಾವಾಗಲೂ, ಆಕಸ್ಮಿಕವಾಗಿ ಹೊರಬಂದಿರಬೇಕು; ಇಂಥ ಆಕಸ್ಮಿಕ ಘಟನೆಗಳಿಗೆ ಕಾರಣವೇನೂ ಇರಲಾರದು-ಎಂದೇ ನಂಬಿ ತಮ್ಮ ವಾದವನ್ನು ಮಂಡಿಸುತ್ತಾರೆ. ಇದು ಕೂಡ ವಿಮರ್ಶನೀಯವಾಗಿದೆ.

ಈಗ ಭೂತವಾದವನ್ನು ವಿಚಾರಿಸೋಣ. ಭೂತಗಳೆಂದರೆ ಪಂಚಮಹಾಭೂತ ಗಳೆಂದರ್ಥ. ಈ ವಾದವು ಎಲ್ಲರಿಗೂ ಅರ್ಥವಾಗುವಂತಿದೆ. ಏಕೆಂದರೆ ಪಂಚಮಹಾ ಭೂತಗಳು ಎಲ್ಲರಿಗೂ ಅನುಭವಗಮ್ಯವಾಗಿವೆ. ಪಂಚಭೂತಾತ್ಮಕವಾದ ಜಗತ್ತು ಎಲ್ಲೆಲ್ಲಿಯೂ ಇದ್ದುಕೊಂಡಿದೆ. ನಾನಾ ವೈಚಿತ್ರ್ಯಗಳಿಂದ ಕೂಡಿದೆ. ಭೌತಿಕವಿಜ್ಞಾನಿಗಳಿಗೂ ಈ ವಾದವು ಒಪ್ಪಾಗಿದೆ. ಏಕೆಂದರೆ ಅವರು ಸತ್ಕಾರ್ಯವಾದಿಗಳು. ಇರತಕ್ಕ ವಸ್ತುವಿನಿಂದಲೇ ಮತ್ತೊಂದು ಹುಟ್ಟುವದೇ ಹೊರತು ಶೂನ್ಯದಿಂದಲ್ಲ-ಎಂದು ಅವರು ಪ್ರತಿಪಾದಿಸುತ್ತಾರೆ. ಆದ್ದರಿಂದಲೇ ಪವಾಡಗಳನ್ನೂ ಖಂಡಿಸುತ್ತಾರೆ. ಹೀಗೆ ಭೂತವಾದವು ಪರೀಕ್ಷಣ-ಸಂವಾದೀಕರಣಗಳಿಂದ ಸಿದ್ಧವಾಗಿದೆ. ಆದರೆ ಈ ಭೂತಗಳ ಮೂಲವಸ್ತುವು ಯಾವದು? ಅದು ಒಂದೊ, ಅನೇಕವೊ? ಎಂಬ ವಿಷಯಗಳು ಇನ್ನೂ ನಿರ್ಧಾರವಾಗಬೇಕಾಗಿದೆ. ಆದರೂ ಸಾಮಾನ್ಯ ಜನರು ಮೆಚ್ಚುವಂತೆ ಈ ವಾದವನ್ನು ಮಂಡಿಸಿ ಸಮರ್ಥಿಸುವದು ಈಗ ಸಾಧ್ಯವಾಗಿದೆ. ಬಹಳ ಜನರಿಗೆ ಪ್ರಪಂಚದ ವಿಕಾರಗಳಲ್ಲಿಯೇ ಆಸಕ್ತಿಯಿರುವದರಿಂದ ಮೂಲಾನ್ವೇಷಣೆಗೆ ಯಾರೂ ತಲೆಕೆಡಿಸಿಕೊಳ್ಳುವದೇ ಇಲ್ಲ. ಆದ್ದರಿಂದಲೇ ಭೂತವಾದವನ್ನು ಹಿಂದೆ ನಮ್ಮಲ್ಲಿ ಅಸತ್ಕಾರ್ಯವಾದಿಗಳಾದ ವೈಶೇಷಿಕದರ್ಶನಕಾರರು ಮುಂದಿಟ್ಟಿದ್ದರು. ಅವರು ಮೂಲವಸ್ತುವನ್ನು ಪರಮಾಣು” ಎನ್ನುತ್ತಿದ್ದರು. ಇಂಥ ಪರಮಾಣುಗಳು ಜಗತ್ಕಾರಣ ವೆಂಬುದು ಅವರ ವಾದ. ಈಗಿನ ವಿಜ್ಞಾನಿಗಳಿಗೂ ವೈಶೇಷಿಕದರ್ಶನಕಾರರಿಗೂ ಬಹಳ ಮಟ್ಟಿಗೆ ಕಾರಣವಸ್ತು ವಿಷಯದಲ್ಲಿ ಏಕ್ಯವಾಕ್ಯತೆ-ಎನ್ನಬಹುದು.

ಈಗ ಪ್ರಕೃತಿವಾದವನ್ನು ನೋಡೋಣ. ಸಾಂಖ್ಯರು ಜಗತ್ಕಾರಣವನ್ನು ಮೂಲಪ್ರಕೃತಿಯೆಂದು ಕರೆಯುವರು. ಇವರೂ ಸತ್ಕಾರ್ಯವಾದಿಗಳು, ಮೂಲ ಪ್ರಕೃತಿಯು ತ್ರಿಗುಣಾತ್ಮಕವಾಗಿದ್ದು ಅದು ಸಾಮ್ಯಾವಸ್ಥೆಯಲ್ಲಿದ್ದಾಗ ಪ್ರಲಯವೆಂದೂ ವೈಷಮ್ಯಾವಸ್ಥೆಯನ್ನು ಪಡೆದಾಗ ಸೃಷ್ಟಿಯೆಂದೂ ಇವರ ವಾದ. ಮೂಲಪ್ರಕೃತಿಯಿಂದ ಮಹತ್ತು ಅಹಂಕಾರಗಳೇ ಮುಂತಾದ ಪ್ರಕೃತಿವಿಕೃತಿಗಳುಂಟಾಗಿ ಜಗತ್ತಾಗಿದೆ. ಆದರೆ ಇದು ಅಚೇತನವು. ಪುರುಷನು ಪ್ರಕೃತಿಗಿಂತ ಭಿನ್ನನು, ಚೇತನನು. ಹೀಗೆ ಪ್ರಕೃತಿಪುರುಷರೆಂಬ ತತ್ತ್ವಗಳೇ ಜಗತ್ತಿನ ಉತ್ಪತ್ಯಾದಿಗಳಿಗೆ ಕಾರಣರು-ಎಂದು ಇವರು ತಿಳಿಸಿರುತ್ತಾರೆ. ಈ ವಾದವನ್ನು ಇಲ್ಲಿ ಯೋನಿ”ಎಂಬ ಶಬ್ದದಿಂದ ಸೂಚಿಸಿದೆ. ಯೋನಿ ಶಬ್ದಕ್ಕೆ ಕಾರಣವೆಂದರ್ಥ. ಜಗತ್ಕಾರಣವು ತ್ರಿಗುಣಾತ್ಮಕವಾಗಿರುವದರಿಂದ ಕಾರ್ಯವಾದ ಜಗತ್ತೂ ತ್ರಿಗುಣಾತ್ಮಕವಾಗಿದೆ. ಸುಖದುಃಖಮೋಹಗಳು ಎಲ್ಲರ ಅನುಭವದಲ್ಲಿಯೂ ಇವೆ. ಇದರಿಂದಲೇ ನಾವು ಜಗತ್ಕಾರಣವು ಪ್ರಕೃತಿಯೆಂದು ತಿಳಿಯಬಹುದು-ಎಂಬ ವಾದವೂ ಈಗ ವಿಚಾರಣೀಯವಾಗಿದೆ.

ಈಗ ಪುರುಷಕಾರಣವಾದವನ್ನು ನೋಡೋಣ. ಸುಖದುಃಖಭೋಗ್ಯವಾಗಿ ಈ ದೇಹದಲ್ಲಿದ್ದುಕೊಂಡಿರುವ ಚೈತನ್ಯನೇ ಪುರುಷನು. ಪುರುಷನಿಲ್ಲದೆ ಅಚೇತನವಾದ ಕೇವಲ ಪ್ರಕೃತಿಯು ಪ್ರವರ್ತಿಸಲಾರದು. ಆದ್ದರಿಂದ ಅವನೇ ಜಗತ್ಕಾರಣನೆನಿಸಬೇಕಲ್ಲವೆ? ಎಂಬಿದೂ ಒಂದು ವಾದವು. ಪುರುಷನನ್ನು ಜೀವನೆಂದೂ ವಿಜ್ಞಾನಾತ್ಮನೆಂದೂ ಕರೆಯುತ್ತಾರೆ. ಆದರೆ ಇವನನ್ನು ಜಗತ್ಕಾರಣನೆನ್ನುವದಕ್ಕೆ ಮಾತ್ರ ಆಗುವಂತಿಲ್ಲ. ಏಕೆಂದರೆ ಇವನು ಕಿಂಚಿಜ್ಜನು. ಅಲ್ಪನು. ಸುಖದುಃಖಗಳ ಅನುಭವವುಳ್ಳವನು. ನಿಜವಾಗಿ ನೋಡಿದರೆ ಇವನು ಸ್ವತಂತ್ರನೂ ಅಲ್ಲ. ತನ್ನದೆನಿಸಿಕೊಂಡ ಶರೀರೇಂದ್ರಿಯಮನೋ ಬುದ್ಧಿಗಳನ್ನೇ ಸ್ವಾಧೀನದಲ್ಲಿಟ್ಟುಕೊಳ್ಳಲಾಗದ ಈತನು ಜಗತ್ತನ್ನು ಹೇಗೆ ತಾನೆ ಅಧೀನದಲ್ಲಿರಿಸಿಕೊಂಡಾನು? ಇವನುಅನೀಶನೂ ಆಗಿರುವನು. ಏಕೆಂದರೆ ಇವನು ಬಂದದ್ದನ್ನು ಅನುಭವಿಸುವನೇ ಹೊರತು ತನಗಾಗಿ ಏನನ್ನೂ ಸೃಷ್ಟಿಮಾಡಿಕೊಳ್ಳಲಾರನು. ಅಥವಾ ಬೇಡದ್ದನ್ನು ಪರಿಹರಿಸಿಕೊಳ್ಳಲಾರನು. ಆದ್ದರಿಂದ ಅನೇಕಕರ್ತೃಭೋಕ್ಷ್ಯಗಳಿಂದ ತುಂಬಿರುವ ಈ ಬ್ರಹ್ಮಾಂಡವನ್ನು ಈತನು ಸೃಷ್ಟಿಸಿರಲಾರನು. ಇವನನ್ನು ಜಗತ್ಕಾರಣನೆಂದು ತಿಳಿಯುವದು ಹೇಗಾದೀತು?-ಎಂಬ ವಾದವೂ ವಿಚಾರ್ಯವಾಗಿದೆ.

ಕಡೆಗೆ ಋಷಿಗಳೆಲ್ಲ ಹೀಗೆಂದರು? “ಈವರೆಗೆ ಪ್ರಸ್ತಾಪಿಸಿರುವ ವಸ್ತುಗಳಲ್ಲಿ ಯಾವದೊಂದೂ ಸ್ವತಂತ್ರವಾಗಿ ಕಾರಣವಲ್ಲವೆಂದಾದರೆ ಎಲ್ಲವೂ ಒಟ್ಟುಗೂಡಿ ಏಕೆ ಜಗತ್ಕಾರಣವಾಗಿರಬಾರದು? ಸದಸ್ಯರೆಲ್ಲ ಸೇರಿ ಪರಿಷತ್ ಆಗುವಂತೆ ಹಾಗೂ ಆ ಪರಿಷತ್ ಕೆಲಸ ಮಾಡುವಂತೆ ಇವೆಲ್ಲದರ ಸಂಯೋಗವೇ ಜಗತ್ಕಾರಣವಾಗಿರಬಹುದೆ?” ಎಂದು ಆಲೋಚಿಸಿದರು. ಅದೂ ಅವರಿಗೆ ಸರಿಯನಿಸಲಿಲ್ಲ. ಏಕೆಂದರೆ ‘ಸಂಹತವಾದವುಗಳು ಪರಾರ್ಥವಾಗಿರುವವು. ಅಂದರೆ ಯಾವದಕ್ಕೂ ಪ್ರಾಧಾನ್ಯತೆಯಿರುವದಿಲ್ಲ. ಅವೆಲ್ಲವೂ ಬೇರೊಂದಕ್ಕಾಗಿ ಕೆಲಸ ಮಾಡುತ್ತವೆ.

ಹೀಗಿರುವಲ್ಲಿ ಸರ್ವಜ್ಞವೂ ಸರ್ವಶಕ್ತವೂ ಸ್ವತಂತ್ರವೂ ಅದ್ವಿತೀಯವೂ ಜ್ಞಾನಬಲಕ್ರಿಯಾದಿಗಳುಳ್ಳದ್ದೂ ಆದ ಜಗತ್ಕಾರಣವು ಯಾವದಿರಬಹುದು? ಈಗ ಪ್ರಸ್ತಾಪಿಸಲ್ಪಟ್ಟಿರುವ ಯಾವ ಪದಾರ್ಥವೂ ಈ ಎಲ್ಲಾ ಗುಣಗಳುಳ್ಳದ್ದಾಗಿಲ್ಲ, ಹಾಗಾದರೆ ಮತ್ತೆ ಏಕಾಗ್ರತೆಯಿಂದ ವಿಚಾರಮಾಡೋಣ” ಎಂದು ತಪೋನಿಷ್ಠರಾಗಿ ಕುಳಿತರು. ಋಷಿಗಳು ಮಾಡಿದ ತಪಸ್ಸೆಂದರೆ ಏಕಾಗ್ರತಾರೂಪವಾದ ಚಿಂತನೆಯು, ಈ ತಪಸ್ಸಿನ ಫಲಿತಾಂಶ ವೇನಾಯಿತೆಂಬುದನ್ನು ಮುಂದೆ ನೋಡೋಣ.


Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *