Story of Sant Pundalika and Lord Vitthal – ಪುಂಡಲೀಕ

Spread the love

Story of Sant Pundalika and Lord Vitthal – ಪುಂಡಲೀಕ.

ಜಗತ್ತಿನಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಗಳು, ಮೌಲ್ಯಗಳು ಕಾಲ ಕಾಲಕ್ಕೆ ಬದಲಾಗುತ್ತಿವೆ. ಈಗ ಜನರಿಗೆ ಸಾಮಾಜಿಕ ಮೌಲ್ಯಗಳಿಗಿಂತ ಸಂಪತ್ತಿನ ಹುಚ್ಚೇ ಹೆಚ್ಚು. ಈಗ ದುಡಿಯಬೇಕು, ದುಡಿದು ಸಾಕಷ್ಟು ಕೂಡಿಡಬೇಕು ಎನ್ನುವ ಸ್ವಾರ್ಥ ಚಿಂತನೆಗಳು ಹೆಚ್ಚಾಗಿವೆ. ಆದರೆ ಈ ದುಡಿಯುವ, ಕೂಡಿಡುವ ಓಟದಲ್ಲಿ ನೈತಿಕ ಮೌಲ್ಯಗಳು ಕಡಮೆಯಾಗುತ್ತಿವೆ. ವಿಜ್ಞಾನ ಯುಗದಲ್ಲಿ ವಿತಂಡವಾದ ಹೆಚ್ಚಾಗಿ ದೇವರ ಅಸ್ತಿತ್ವವನ್ನು ಪ್ರಶ್ನಿಸುವ ಪರಿಪಾಟ ಜನರಲ್ಲಿ ಹೆಚ್ಚಾಗಿದೆ. ದೇವರು ನಿಜವಾಗಿಯೂ ಇದ್ದಾನೆಯೇ? ಇದ್ದರೆ ಹೇಗಿದ್ದಾನೆ? ಎಲ್ಲಿದ್ದಾನೆ? ಎಂದು ಅಣಕಿಸುವ ಪ್ರವೃತ್ತಿ ಬೆಳೆಯುತ್ತಿದೆ.

ಪರಿಣಾಮವಾಗಿ ಸಮಾಜದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಜನರು ಸಮಾಜದಲ್ಲಿ ಸರ್ಕಾರ ರೂಪಿಸಿರುವ ಶಿಕ್ಷೆ ವಿಧಿಸುವ ಕಾನೂನಿಗಿಂತ, ದೇವರು, ಸ್ವರ್ಗ ಮತ್ತು ನರಕ ಎಂಬ ನಂಬಿಕೆಗೆ ಭಯಪಡುತ್ತಿದ್ದದ್ದೇ ಜಾಸ್ತಿ.

ಆದರೆ ಈಗ ಜಗತ್ತಿನಲ್ಲಿ ನಾಸ್ತಿಕತೆ ಹೆಚ್ಚಾಗಿ ನಾವು ಏನು ಮಾಡಿದರೂ ದಂಡಿಸುವವರು ಯಾವ ದೇವರೂ ಇಲ್ಲ ಎಂಬ ಅಹಂಕಾರ ಮನುಷ್ಯನಿಗೆ ಬಂದು ಮನುಷ್ಯ ಸ್ವಭಾವತಃ ಶ್ವೇಚ್ಛಾಚಾರಿಯಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾನೆ. ಇದನ್ನು ದೃಢೀಕರಿಸುವಂತೆ ಒಂದು ಸಂಶೋಧನೆಯ ವರದಿ ಹೇಳುತ್ತದೆ:

ಕೇರಳದಲ್ಲಿ ಶ್ವೇಚ್ಛಾಚಾರ ಹಾಗೂ ಹೆಚ್ಚು ಅಪರಾಧ ಕೃತ್ಯಕ್ಕೆ ನಾಸ್ತಿಕತ್ವವೇ ಕಾರಣ ಎಂದು. ಹೀಗೆ ಸಮಾಜದಲ್ಲಿ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳು ಕುಸಿಯಲು ನಾವು ನಮ್ಮ ಇತಿಹಾಸವನ್ನು ಮರೆಯುತ್ತಿರುವುದು ಹಾಗೂ ಸಾಧು ಸಂತರ ಜೀವನ ಆದರ್ಶಗಳನ್ನು ಮರೆಯುತ್ತಿರುವುದು ಕಾರಣವಾಗಿದೆ.

ಈ ನಾಸ್ತಿಕತೆ ಬೇರೂರಲು ಮೂಲ ಕಾರಣ ನಮ್ಮ ಸನಾತನ ಧರ್ಮದ ಸಂಸ್ಕೃತಿ ಮತ್ತು ಆದರ್ಶಗಳನ್ನು ಬದಿಗೆ ಸರಿಸುತ್ತಿರುವುದು. ಈಗ ಜನ ಇತಿಹಾಸ, ಪುರಾಣಗಳನ್ನು ಓದುವ ಪರಿಪಾಟವನ್ನು ಕಡಿಮೆ ಮಾಡಿದ್ದಾರೆ. ದೇವರು ಎಂದರೇನು? ನಿಜವಾಗಿಯೂ ದೇವರು ಇದ್ದಾನೆಯೇ? ಇದ್ದರೆ ಕಂಡವರು ಯಾರು? ಎಂಬ ವಿತಂಡವಾದ ಮಾಡುವವರು ಹೆಚ್ಚಾಗಿದ್ದಾರೆ. ಇಷ್ಟಕ್ಕೆಲ್ಲ ಕಾರಣ ದೇವರನ್ನು ಕಂಡ ಮಹಾನ್ ಸಾಧು ಸಂತರ ಜೀವನ ಚರಿತ್ರೆಗಳನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸದೇ ಇರುವುದೇ ಆಗಿದೆ.

ಆದರೆ ಈ ಕಲಿಯುಗದಲ್ಲಿ ತನ್ನ ಮಹಾನ್ ಭಕ್ತಿಯಿಂದ ದೇವರನ್ನು ಧರೆಗಿಳಿಸಿ, ಇಲ್ಲಿಯೇ ನೆಲೆನಿಲ್ಲುವಂತೆ ಮಾಡಿದ ಮಹಾನ್ ಭಕ್ತ ಪುಂಡಲೀಕ. ಈಗಿನ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಚಂದ್ರಭಾಗಾ ನದಿಯ ತೀರದಲ್ಲಿ ಪ್ರಸಿದ್ಧವಾಗಿರುವ ಪಂಢರಾಪುರದಲ್ಲಿ ನೆಲೆಸಿರುವ ಪಾಂಡುರಂಗ ವಿಟ್ಠಲನ ಪರಮ ಭಕ್ತ ಪುಂಡಲೀಕ. ಈತನ ಜೀವನ ಮತ್ತು ಸಾಧನೆ ಇಂದಿನ ಪೀಳಿಗೆ ಓದಿ ತಿಳಿದುಕೊಳ್ಳಲೇಬೇಕಾದ ಮಹಾನ್ ಜೀವನ ಚರಿತ್ರೆ.

ಸದ್ಗುರು ඵල ಯೋಗಿನಾರೇಯಣ ತಾತಯ್ಯನವರು ಒಂದು ಕಡೆ ಹೇಳುತ್ತಾರೆ, “ತಲ್ಲಿ ತಂಡುಲು ಪ್ರತ್ಯಕ್ಷ ದೈವಾಲು” ಅಂದರೆ ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿದ ತಂದೆತಾಯಿಗಳೇ ನಮಗೆ ಪ್ರತ್ಯಕ್ಷ ದೈವ ಎಂದು. ಇದನ್ನೇ ನಮ್ಮ ಸನಾತನ ಧರ್ಮದಲ್ಲಿ “ಮಾತೃದೇವೋಭವ” “ಪಿತೃದೇವೋಭವ” ಎಂದು ಹೇಳಿರುವುದು.

ಆದರೆ ಕಣ್ಣಿಗೆ ಕಾಣುವ ದೇವರಾದ ಪೋಷಕರನ್ನು ಸಾಕಲು ಹೊರೆ ಎಂದು ಈಗ ವೃದ್ಧರನ್ನು ಅನಾಥಾಶ್ರಮದಲ್ಲಿ ಬಿಟ್ಟು ಬರುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಶ್ರವಣಕುಮಾರನ ಕಥೆಯನ್ನು ಸಮಾಜ ಮರೆತಿದೆ. ಹೀಗೆ ಬಹಳ ಪೂರ್ವದಲ್ಲಿ ತನ್ನ ತಂದೆತಾಯಿಯನ್ನು ನಿರ್ಲಕ್ಷ್ಯ ಮಾಡಿ ಅನಂತರ ಜ್ಞಾನೋದಯವಾದಾಗ ಹೇಗೆ ಭಗವಂತನನ್ನು ಧರೆಗಿಳಿಸಿದ ಎಂಬ ಪುಂಡಲೀಕ ಎಂಬ ಮಹಾಭಕ್ತನ ಕಥೆ ಇಂದಿನ ಸಮಾಜಕ್ಕೆ ಬಹಳಷ್ಟು ಪ್ರಸ್ತುತವಾಗಿದೆ.

ಬಹಳ ಪೂರ್ವದಲ್ಲಿ ಪುಂಡಲೀಕ ಎಂಬುವವನಿದ್ದ.

ಪುಂಡಲೀಕನ ತಂದೆ ಜನುದೇವ ಹಾಗೂ ಆತನ ತಾಯಿ ಸತ್ಯವತಿ. ಪುಂಡಲೀಕ ತನ್ನ ಸುತ್ತಮುತ್ತಲಿನ ಜನರಲ್ಲಿ ದುರ್ವತ್ರನೆ ತೋರುವುದಲ್ಲದೆ ತನ್ನ ತಂದೆತಾಯಿಯನ್ನು ಹಿಂಸಿಸುತ್ತಿದ್ದ, కందకాయగి కనివా గౌరవ నిండడిపి నాయవాగి ನೋಡಿಕೊಳ್ಳುತ್ತಿದ್ದ. ಹೆಂಡತಿಯಿಂದ ಮೋಹಿತನಾದ ಆತ ಹೆಂಡತಿಯನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇದರಿಂದ ಮನನೊಂದ ಆತನ ತಂದೆ ತಾಯಿ ತಾವು ತಮ್ಮ ಶೇಷ ಜೀವನವನ್ನು ಕಾಶಿಯಲ್ಲಿ ಕಳೆದು ಮುಕ್ತಿ ಪಡೆಯಬೇಕು ಎಂಬ ನಿರ್ಧಾರ ಮಾಡಿ ಕಾಶಿಗೆ ಹೋಗಲು ಮಗನನ್ನು ಕೇಳುತ್ತಾರೆ.

ಈ ವಿಚಾರ ತಿಳಿದ ಸೊಸೆ ತಾನು ಅವರ ಜೊತೆ ಹೋಗಿ ದೇವರ ದರ್ಶನ ಪಡೆಯಲು ಬಯಸುತ್ತಾಳೆ, ಹೆಂಡತಿಯ ಮಾತಿನಂತೆ ಕಾಶಿಗೆ ಹೊರಟ ಪುಂಡಲೀಕ ತಂದೆ ತಾಯಿಯನ್ನು ಕಾಲ್ನಡಿಗೆಯಲ್ಲಿ ನಡೆಸಿಕೊಂಡು ಹೆಂಡತಿಯನ್ನು ಮಾತ್ರ ಕುದುರೆಯ ಮೇಲೆ ಕೂರಿಸಿಕೊಂಡು ಕಾಶಿಯ ಕಡೆಗೆ ತೀರ್ಥಯಾತ್ರೆ ಹೊರಡುತ್ತಾನೆ.

ಬಹಳ ದೂರ ಹೋದ ಮೇಲೆ ನಡೆಯಲಾಗದೆ ಬಸವಳಿದ ತಂದೆ ತಾಯಿ ತಮ್ಮ ನೋವನ್ನು ಮಗನಿಗೆ ಹೇಳಿದಾಗ ಕುದುರೆಯ ಮೇಲೆ ಕೂರಿಸಿಕೊಳ್ಳುವ ಬದಲು ಕುದುರೆಯ ಕಾಲಿಗೆ ಅವರನ್ನು ಕಟ್ಟಿ ದರದರನೆ ಕಾಡಿನಲ್ಲಿ ಎಳೆದುಕೊಂಡು ಹೋಗುತ್ತಾನೆ. ಇದನ್ನು ದಾರಿಯಲ್ಲಿ ಕಂಡ ಕುಕ್ಕುಟ ಮಹರ್ಷಿಗಳು ಈತನಿಗೆ ಸರಿಯಾದ ಜ್ಞಾನ ಬೋಧಿಸಬೇಕು ಎಂದು ತನ್ನ ಆಶ್ರಮದಲ್ಲಿ ಆ ರಾತ್ರಿ ತಂಗಲು ಹೇಳುತ್ತಾನೆ.

ಆಶ್ರಮದಲ್ಲಿ ತಂಗಿದ ಆತನಿಗೆ ರಾತ್ರಿ ಕೊಳಕು ಬಟ್ಟೆ ಧರಿಸಿದ ಮೂರು ಜನ ಅಪ್ಸರೆಯಂತೆ ಕಾಣುವ ಹೆಂಗಸರು ಆಶ್ರಮಕ್ಕೆ ಬರುವುದನ್ನು ಕಂಡು, “ನೀವು ಯಾರು” ಎಂದು ಕೇಳಿದಾಗ, “ನಾವು ಗಂಗಾ ಯಮುನಾ ಸರಸ್ವತಿ ನದಿ ದೇವತೆಯರು. ನಾವು ಕಾಶಿ ಯಾತ್ರೆಗೆ ಹೊರಟು ಇಲ್ಲಿ ತಂಗುವ ಭಕ್ತರ ಪಾಪ ತೊಳೆಯುತ್ತೇವೆ. ಅವರ ಪಾಪ ನಮ್ಮ ಬಟ್ಟೆಗೆ ಅಂಟಿ ನಮ್ಮ ಬಟ್ಟೆ ಕೊಳೆಯಾಗಿದೆ” ಎಂದು ಹೇಳುತ್ತಾರೆ. ಆಗ ಪುಂಡಲೀಕನು, “ಹಾಗಾದರೆ ನನ್ನ ಪಾಪವನ್ನು ತೊಳೆಯುತ್ತೀರಾ?” ಎಮದು ಕೇಳಿದಾಗ, ಆ ನದಿ ದೇವತೆಯರು, “ತಂದೆ ತಾಯಿಯ ಸೇವೆ ಮಾಡದ ನೀನು ಮಾಡಿರುವ ಪಾಪ ಕಾಶಿಗೆ ಹೋದರೂ ಕಳೆಯುವುದಿಲ್ಲ” ಎಂದು ಹೇಳುತ್ತಾರೆ. ಆಗ ತನ್ನ ತಪ್ಪಿನ ಅರಿವಾಗಿ, “ತಾನು ಈಗ ಏನು ಮಾಡಬೇಕು” ಎಂದು ಪುಂಡಲೀಕ ಕೇಳಿದಾಗ, ಪುಂಡಲೀಕನಿಗೆ, “ನಿಮ್ಮ ತಂದೆ ತಾಯಿ ಸೇವೆ ಮಾಡು, ಅವರ ಆಶೀರ್ವಾದದಿಂದ ಕಾಶಿ ಯಾತ್ರೆ ಮಾಡಿದ್ದಕ್ಕಿಂತ ಹೆಚ್ಚು ಪುಣ್ಯ ಸಿಗುತ್ತದೆ” ಎಂದು ಹೇಳುತ್ತಾರೆ.

ಕುಕ್ಕುಟ ಮಹರ್ಷಿಗಳ ಆಶ್ರಮದಲ್ಲಿ ಜ್ಞಾನೋದಯ ಪಡೆದ ಪುಂಡಲೀಕ ಕಾಶಿಗೆ ಹೋಗದೆ ತನ್ನ ತಂದೆತಾಯಿಯೊಂದಿಗೆ ಊರಿಗೆ ಬಂದು ತನ್ನ ತಂದೆ ತಾಯಿಯೇ ಪ್ರತ್ಯಕ್ಷ ದೈವ ಎಂದು ಅವರ ಸೇವೆ ನಿರಂತರ ಮಾಡಲು ಪ್ರಾರಂಭಿಸುತ್ತಾನೆ. ತನ್ನ ತಂದೆ ತಾಯಿಯ ಮೇಲೆ ಎಷ್ಟು ಅನನ್ಯ ಭಕ್ತಿ ಇತ್ತು ಎಂದರೆ ಈತನ ಮಾತಾ ಪಿತೃ ಭಕ್ತಿ ಪರೀಕ್ಷಿಸಲು ಕೃಷ್ಣ ಈತನ ಮನೆಗೆ ಒಮ್ಮೆ ಬರುತ್ತಾನೆ, ಹೊಸ್ತಿಲಲ್ಲಿ ನಿಂತು. “ಪುಂಡಲೀಕ ನಾನು ನಿನ್ನ ಕಾಣಲು ಬಂದಿದ್ದೇನೆ” ಎಂದರೆ, ತಂದೆ ತಾಯಿಯ ಸೇವೆ ಮಾಡುತ್ತಿದ್ದ ಪುಂಡಲೀಕ, “ನೀನು ಯಾರಾದರೂ ಸರಿ, ಈಗ ನಾನು ನನ್ನ ತಂದೆ ತಾಯಿಯ ಸೇವೆ ಮಾಡುವ ಸಮಯ.

ನಾನು ಬರುವವರೆಗೆ ನೀನು ಕಾಯಬೇಕು” ಎಂದು ಹೇಳಿ ಒಂದು ಇಟ್ಟಿಗೆಯನ್ನು ಎಸೆದು, “ಇದರ ಮೇಲೆ ನಿಂತು ಕಾದಿರು” ಎಂದು ಹೇಳುತ್ತಾನೆ. ಹೀಗೆ ಭಗವಂತನಿಗಿಂತ ಶ್ರೇಷ್ಠ ತನ್ನ ಹೆತ್ತ ತಂದೆ ತಾಯಿ ಎಂದು ಅರಿತ ಪುಂಡಲೀಕನ ಭಕ್ತಿಗೆ ಮೆಚ್ಚಿ, ಆತನು ತಂದೆ ತಾಯಿಗೆ ಮಾಡುತ್ತಿರುವ ಸೇವೆಗೆ ಭಂಗ ಮಾಡುವುದು ಬೇಡ ಎಂದು ಪಾಂಡುರಂಗನು ಆ ಇಟ್ಟಿಗೆಯ ಮೇಲೆ ನಿಲ್ಲುತ್ತಾನೆ.

ತಂದೆ ತಾಯಿಯ ಸೇವೆಯ ಅನಂತರ ಪುಂಡಲೀಕ ಬಂದು ದೇವರನ್ನು ಕಾಯಿಸಿದ್ದಕ್ಕೆ ದೇವರ ಬಳಿ ಕ್ಷಮೆ ಕೇಳುತ್ತಾನೆ, ತನ್ನಿಂದ ತಪ್ಪಾಯಿತು ಎಂದು ಕೇಳಿಕೊಳ್ಳುತ್ತಾನೆ. ಆದರೆ ಭಗವಂತನು, “ತಂದೆ ತಾಯಿಗಿಂತ ಬೇರೆ ದೇವರಿಲ್ಲ, ‘ನಿನ್ನ ಮಾತಾ ಪಿತೃ ಭಕ್ತಿಗೆ ಮೆಚ್ಚಿದ್ದೇನೆ’ ಎಂದು ಹೇಳಿ ಏನು ವರ ಬೇಕು ಕೇಳು” ಎಂದು ಕೇಳಿದಾಗ, ಪುಂಡಲೀಕ ಭಗವಂತನನ್ನು ಇಲ್ಲಿಯೇ ನೆಲೆಸಿ ಬಂದ ಭಕ್ತರನ್ನು ಹರಸಬೇಕು ಎಂದು ಕೇಳಿದಾಗ, ಭಗವಂತನು ಪಾಂಡುರಂಗ ವಿಟ್ಠಲನಾಗಿ ಪುಂಡಲೀಕನು ಕೊಟ್ಟ ಇಟ್ಟಿಗೆಯ ಮೇಲೆ ನೆಲೆಸುತ್ತಾನೆ.

ಹೀಗೆ ಪಂಢರಾಪುರದಲ್ಲಿ ನೆಲೆಸಿರುವ ಪಾಂಡುರಂಗನನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶದಿಂದ ಸಾವಿರಾರು “ವಾರಕರಿ”ಗಳು (ಅಂದರೆ ಮತ್ತೆ ಮತ್ತೆ ಪಾದಯಾತ್ರೆ ಮಾಡುವವರು ಎಂದು ಅರ್ಥ.) ನೂರಾರು ಕಿಲೋಮೀಟರ್ ದೂರದಿಂದ ನಡೆದುಕೊಂಡು ಬಂದು ವಿಠೋಭನ ದರ್ಶನವನ್ನು ಪಡೆಯುತ್ತಾರೆ.

ಹೀಗೆ ಪುಂಡಲೀಕನ ಭಕ್ತಿಗೆ ಮೆಚ್ಚಿ ಭಗವಂತ ಪಂಢರಾಪುರದಲ್ಲಿ ನೆಲೆಸಿದ್ದು, ಈತನನ್ನು ಸೇವಿಸಿದ ಮಹಾರಾಷ್ಟ್ರದ ನಾಮದೇವ, ತುಕಾರಾಮ, ಏಕನಾಥ, ಸತಿ ಸಕ್ಕೂಬಾಯಿ, ಕರ್ನಾಟಕದ ಹರಿದಾಸರಾದ ಪುರಂದರದಾಸ, ಹರಿದಾಸ, ವಿಜಯದಾಸ, ಗೋಪಾಲದಾಸ, ಹೀಗೆ ಹಲವಾರು ಭಕ್ತರು ವಿಟ್ಠಲನ ಮಹಿಮೆಯನ್ನು ಸಾರಿದ್ದಾರೆ ಹಾಗೂ ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ.

ಹೀಗೆ ಭಗವಂತನನ್ನು ಕಾಣಲು ಘೋರ ತಪಸ್ಸಿಗಿಂತ ತಂದೆ ತಾಯಿಯನ್ನು ಶ್ರದ್ಧಾ ಭಕ್ತಿಯಿಂದ ಸೇವಿಸಿದರೆ ಸಾಕು, ಅದು ಕಲಿಯುಗವಾದರೂ ಸರಿ ಭಗವಂತನನ್ನು ಧರೆಗಿಳಿಸಬಹುದು ಎಂದು ತೋರಿಸಿದವನು ಪುಂಡಲೀಕ. ಇಂತಹ ಮಹಾನ್ ಭಕ್ತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನೀವೆಲ್ಲರೂ ಸಾಗಿದಾಗ ಸಮಾಜ ಒಂದು ಸ್ವಾಸ್ಥ್ಯ ಸಮಾಜವಾಗಿ ರೂಪುಗೊಳ್ಳುತ್ತದೆ.


Spread the love

Leave a Comment

error: Content is protected !!