Realization of divine power – ದೇವಾತ್ಮಶಕ್ತಿಯ ಸಾಕ್ಷಾತ್ಕಾರ

Realization of divine power – ದೇವಾತ್ಮಶಕ್ತಿಯ ಸಾಕ್ಷಾತ್ಕಾರ

Spread the love

ದೇವಾತ್ಮಶಕ್ತಿಯ ಸಾಕ್ಷಾತ್ಕಾರ


        ಹಿಂದಿನ ವಿವರಣೆಯಲ್ಲಿ ತಿಳಿಸಿರುವಂತೆ ಋಷಿಗಳು ಜಗತ್ಕಾರಣದ ಅನ್ವೇಷಣೆಗೆ
ಈವರೆಗೆ ತಾವು ಬೌದ್ಧಿಕವಾಗಿ ಚಿಂತಿಸಿದ ಪ್ರಯತ್ನದಲ್ಲಿ ಐಕಮತ್ಯವನ್ನು ಸಾಧಿಸಲಾಗದೆ
ಹೋದದ್ದರಿಂದ ಆ ಮಾರ್ಗವನ್ನು ಕೈಬಿಟ್ಟರು. ಹಾಗಾದರೆ ಮನುಷ್ಯನಿಗೆ ದೇವರು ದಯಪಾಲಿಸಿರುವ ಜ್ಞಾನದ್ವಾರಗಳಾದ ಕರಣಗಳಲ್ಲಿ ಅಂತಃಕರಣವೆನಿಸಿದ ಬುದ್ಧಿಯನ್ನು
ಬಿಟ್ಟರೆ ಬೇರೆ ಯಾವದೂ ಕರಣವಿಲ್ಲ, ಅದು ಕೂಡ ಉಪಯೋಗವಾಗಲಿಲ್ಲವೆಂದಾಗ ಮಾಡುವದೇನು? ಈ ಜಿಜ್ಞಾಸೆಯನ್ನೇ ಕೈಬಿಡುವದೇ ಮೇಲಲ್ಲವೆ? ಎಂದು ಕೆಲವರಿಗೆ
ಅನಿಸಬಹುದು. ಅಥವಾ ಈಗ ತಿಳಿದಷ್ಟರಿಂದಲೇ ತೃಪ್ತರಾಗಿ ತಮತಮಗೆ ಒಪ್ಪಾದದ್ದನ್ನು
ಜಗತ್ಕಾರಣವೆಂದು ನಂಬಿ ಸುಮ್ಮನಾಗಬಹುದಲ್ಲವೆ? ಎಂದೂ ಮತ್ತೆ ಕೆಲವರಿಗೆತೋರಿರಬಹುದು. ಆದರೆ ಇಂಥ ನಿರಾಶೆಯನ್ನು ಋಷಿಗಳು ಹೊಂದಲಿಲ್ಲ. ಅವರು
ಮುಂದುವರೆದು ಚಿಂತಿಸಿದ್ದೇನೆಂದರೆ: ಬುದ್ಧಿಯು ಜ್ಞಾನಕ್ಕೆ ಸಾಧನವೆಂಬುದು ಸರಿ, ಅದು ವಸ್ತುವು ಹೊರಗಿದ್ದು ಅನಾತ್ಮವಾಗಿದ್ದರೆ ಹೇಗೆ ತಿಳಿಸುತ್ತದೆಯೋ ಹಾಗೆಯೇ ಅದು
ಆತ್ಮನಾಗಿಯೂ ಎಲ್ಲಕ್ಕೂ ಆಧಾರವಾಗಿ ಒಳಗೇ ಇದ್ದುಕೊಂಡು ಯಾವಾಗಲೂ ದೃಶ್ಯವಾಗದೆ, ಪ್ರಮೇಯವಾಗದೆ-ತನಗೂ ಮೂಲವಾಗಿರುವ ವಸ್ತುವನ್ನು ಕಾಣಲೇಬೇಕಾದಲ್ಲಿ ಬುದ್ದಿಯನ್ನುಪಯೋಗಿಸುವವನು ಒಳಮುಖವಾಗಿ ಅದನ್ನು ಬಳಸಬೇಕಲ್ಲವೆ? ಹೇಗೆ ವಾಹನವು ಮುಂದಕ್ಕೆ ಓಡುವಂತೆ ಹಿಂದಕ್ಕೂ (Reverse)
ಸರಿಯುತ್ತದೆಯೋ ಆದರೆ ಹಿಂದಕ್ಕೆ ಬಹಳ ನಿಧಾನವಾಗಿಯೇ ಚಲಿಸುವದೋ
ಹಾಗೆಯೇ ಈ ಬುದ್ಧಿಯನ್ನು ಅದರ ಹೊರಮುಖವಾದ ಪ್ರವೃತ್ತಿಗಳಿಂದ ಹಿಂತೆಗೆದು
ಒಳಮುಖವಾಗಿ ನೋಡುವಂತೆ ಪ್ರಯತ್ನಿಸಿದರೆ ಹೇಗಾದೀತು? ಇದರ ಫಲಿತಾಂಶ
ವೇನಾದೀತು? ಮೆಲ್ಲ ಮೆಲ್ಲನೆ ಬುದ್ದಿಯನ್ನು ಅದರ ವೃತ್ತಿಗಳಿಂದ ಬಿಡಿಸೋಣ. ಹಾಗೂ ಅದು ಎಚ್ಚರತಪ್ಪದಂತೆ ಕಾಯೋಣ ಎಂದು ಆಲೋಚಿಸಿ ಒಳಕ್ಕೆ ಅದು ಸರಿಯುವಂತೆ ಪ್ರಯತ್ನವನ್ನು ಆರಂಭಿಸಿದರು. ಹೀಗೆ ಮಾಡಬೇಕೆಂಬುದು ಅವರಿಗೆ ಉಪನಿಷತ್ತುಗಳ ಅವಲೋಕನದಿಂದ ತಿಳಿದಿತ್ತು. ‘ಧೀರನಾದವನು ಅಮೃತತ್ವವನ್ನು ಬಯಸಿದವನಾಗಿ ತನ್ನ ಇಂದ್ರಿಯಮನೋಬುದ್ಧಿಗಳನ್ನು ಹಿಂದಿರುಗಿಸಿ ಪ್ರಯತ್ನಿಸುವನು”ಎಂಬ ಯಮದೇವನ
ಉಪದೇಶವು ಸೂರ್ತಿಯನ್ನು ನೀಡಿತು. ಈ ಪ್ರಯತ್ನವನ್ನೇ ಇಲ್ಲಿ ಧ್ಯಾನಯೋಗವೆಂದು
ಕರೆದಿದೆ. ಧ್ಯಾನವೆಂದರೆ ಚಿಂತನೆ; ಯೋಗವೆಂದರೆ ಆತ್ಮಸ್ವರೂಪಕ್ಕೆ ಸಮೀಸುವಂತೆ ಆ
ಚಿಂತನೆಯನ್ನು ಅಂತರ್ಮುಖಗೊಳಿಸುವದು. ನಿಜವಾಗಿ ಈ ಚಿಂತನೆಯಲ್ಲಿ
ಚಿಂತ್ಯವಾದದ್ದೇನೂ ಇರುವದೇ ಇಲ್ಲ, ಇದನ್ನೇ ಗೀತೆಯಲ್ಲಿ ಹೀಗೆಂದಿದೆ: “ಧ್ಯಾನ
ಯೋಗಿಯು ತನ್ನನ್ನೇ ತಾನೇ ಅವಲಂಬಿಸಿ ಏನನ್ನೂ ಚಿಂತಿಸದೆ ಇರಬೇಕು.” ಇಂಥ
ಆತ್ಮಚಿಂತನೆಯು ಬುದ್ದಿಯನ್ನೇ ಲಯಮಾಡಿಬಿಡುತ್ತದೆ. ಹೀಗೆ ಸರ್ವಸಾಕ್ಷಿಯಾದ
ಸ್ವಸ್ವರೂಪದಲ್ಲಿಯೇ ನೆಲೆಗೊಳಿಸುತ್ತದೆ. ಇದನ್ನೇ ಧ್ಯಾನಯೋಗವೆನ್ನುವರು.


ಹೀಗೆ ಧ್ಯಾನಯೋಗವೆಂದರೆ ವಸ್ತುವನ್ನು ಕಂಡುಹಿಡಿಯುವ ಪ್ರಯತ್ನರೂಪವಾದ
ಸಾಧನವಿಶೇಷದಿಂದ ಋಷಿಗಳು ದೀರ್ಘಕಾಲದವರೆಗೆ ಆಲಸ್ಯವಿಲ್ಲದೆ ಔದಾಸೀನ್ಯವಿಲ್ಲದೆ, ವಿಷಾದವಿಲ್ಲದೆ ಮುಂದುವರೆದರು. ಪ್ರಾಯಶಃ ಅವರುಗಳು ಕೈಗೊಂಡ ಸಾಧನವು ಫಲಪರ್ಯಂತವಾಗಿಯೂ ನಿಲ್ಲದೆ ಸಾಗಿತ್ತು. ಆಗ ಅವರಿಗೆ ಸರಿಸಮಾನವಾಗಿ ಎಂದರೆ ಎಲ್ಲರ ಹೃದಯದಲ್ಲಿಯೂ ಒಂದೇ ಅನುಭವರೂಪವಾಗಿ ಜಗತ್ಕಾರಣತತ್ತ್ವದ ಅರಿವು
ಮೂಡಿತು. ಅದನ್ನು ಅವರುಗಳು ದೇವಾತ್ಮಶಕ್ತಿಯೆಂದು ಹೆಸರಿಸಿ ನಮಗೆಲ್ಲರಿಗೂ
ತಿಳಿಸಿದರು. ಇದೇ ಋಷಿಗಳ ವೈಶಿಷ್ಟ್ಯವು. ಅವರುಗಳಿಗೆ ಏನು ಹೊಳೆಯಿತೋ ಆ ಜ್ಞಾನವನ್ನು ಅವರು ಗೋಪ್ಯವಾಗಿಟ್ಟುಕೊಳ್ಳಲಿಲ್ಲ. ಎಲ್ಲರಿಗೂ ಅದು ಲಭ್ಯವಾಗಲೆಂದು ಉಪದೇಶಿಸಿದರು. ಆ ದೇವಾತ್ಮಶಕ್ತಿಯು ಏನು? ಅದರ ಸ್ವರೂಪವೇನು? ಎಂಬಿದನ್ನು ಈಗ ವಿಚಾರಮಾಡೋಣ.

ಆತ್ಮಶಕ್ತಿಯೆಂದರೆ ಇಲ್ಲಿ ಆತ್ಮನೇ ಶಕ್ತಿಯು; ಶಕ್ತಿಯೇ ಆತ್ಮನು ಎಂದರ್ಥ. ಇದು ಸಹಜವೂ ಸ್ವಾಭಾವಿಕವೂ ಆಗಿದ್ದು ಹೇಗೆ ಸೂರ್ಯನ ಪ್ರಕಾಶ, ಬೆಂಕಿಯ ಬಿಸಿ ಎಂದರೆ ಸೂರ್ಯನಿಗಿಂತ ಎರಡನೆಯದಾದ ಬೆಳಕಾಗಲಿ, ಬೆಂಕಿಗಿಂತ ಭಿನ್ನವಾದ ಬಿಸಿಯಾಗಲಿ, ಇಲ್ಲವೋ ಹಾಗೆಯೇ ಆತ್ಮನಿಗಿಂತ ಬೇರೆಯಾದ ಶಕ್ತಿಯು ಇರುವದಿಲ್ಲ. ಆದರೆ ಆ ಶಕ್ತಿಯು ತನ್ನ ಸ್ವಮಹಿಮೆಯಿಂದ ನಾನಾ ಪ್ರಭೇದಗಳಾಗಿ ತೋರುತ್ತದೆ. ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳು ಕಾಣುತ್ತವೆಯಷ್ಟೆ? ಆದರೆ ಅವು ಯಾವವೂ ಸ್ವತಂತ್ರಪದಾರ್ಥಗಳಲ್ಲ.
ಪ್ರಕಾಶವೇ ಹಾಗೆ ಏಳಾಗಿ ನಮ್ಮ ಕಣ್ಣುಗಳಿಗೆ ಕಾಣಿಸುತ್ತದೆಯೋ ಅದರಂತೆಯೇ ಆತ್ಮಶಕ್ತಿಯೇ ನಾನಾ ಆಕಾರಗಳಿಂದ ಹೊರಸೂಸಿದಾಗ ಜಗತ್ತಿನಲ್ಲಿರುವ ವಿವಿಧವಾದ ದೇವಾಸುರಮನುಷ್ಯ ಪಶುಪಕ್ಷಿಕ್ರಿಮಿಕೀಟಾದಿಗಳ ರೂಪದಿಂದಲೂ ಪೃಥಿವ್ಯಾದಿಪಂಚ
ಮಹಾಭೂತಗಳ ರೂಪದಿಂದಲೂ ಇಂದ್ರಿಯಮನೋಬುದ್ಧಾದಿ ಆಧ್ಯಾತ್ಮಿಕಕರಣಗಳ
ರೂಪದಿಂದಲೂ ಕರ್ತೃಭೋಗ್ಯವಾದ ಜೀವರೂಪದಿಂದಲೂ ಪ್ರಕಟವಾಗುತ್ತದೆ.
ಇದೆಲ್ಲವೂ ತನ್ನತನ್ನ ಆತ್ಮರೂಪದಿಂದ ಒಂದೇ ವಸ್ತುವಾಗಿರುವದು. ಹೇಗೆ ಮಣ್ಣಿನಿಂದಾದ
ಘಟ-ಪಟ-ಕರಕಾದಿಗಳೆಲ್ಲವೂ ಮಣ್ಣೆ ಆಗಿರುವವೋ ಹಾಗೆಯೇ ಶಕ್ತಿಯೊಂದೇ ಎಲ್ಲಾ
ಜಗತ್ತಾಗಿರುವದು. ಅದನ್ನು ಆತ್ಮಶಕ್ತಿಯೆಂದು ಕರೆದಿರುವದೇಕೆಂದರೆ ಅನಾತ್ಮವಾದ
ಶಕ್ತಿಗಳಂತೆ ಅಲ್ಲ-ಎಂದು ತಿಳಿಸುವದಕ್ಕಾಗಿ, ಉದಾಹರಣೆಗೆ ಕಾದ ಕಬ್ಬಿಣವು
ಸುಡುತ್ತದೆಯಾದರೂ ಆ ದಹನಶಕ್ತಿಯು ಕಬ್ಬಿಣದ್ದಲ್ಲ. ಹಾಗೆ ಜಗತ್ಕಾರಣಶಕ್ತಿಯು
ತಾನಲ್ಲದ ಏನನ್ನೂ ಉಂಟು ಮಾಡಿಲ್ಲ ತಾನೇ ಎಲ್ಲವೂ ಆಗಿದೆ ಎಂದು ತಿಳಿಸುವದಕ್ಕಾಗಿ
ಆತ್ಮಶಕ್ತಿ ಎಂದಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಆ ಬ್ರಹ್ಮಶಕ್ತಿಯು ತಾನೇ ತನ್ನನ್ನೇ ಉಂಟು
ಮಾಡಿಕೊಂಡಿತು” ಎಂದೇ ಇದೆ. ಇದರಿಂದ ತಿಳಿಯಬರುವದೇನೆಂದರೆ ಜಗತ್ತು ಬ್ರಹ್ಮಕ್ಕಿಂತ
ಬೇರೆಯ ವಸ್ತುವಲ್ಲ, ಅಷ್ಟೇ ಅಲ್ಲ, ಬ್ರಹ್ಮದ ಆಧಾರವಿಲ್ಲದೆ ಅದು ಕಾಣಿಸಿಕೊಳ್ಳುವದೇ
ಇಲ್ಲ, ಹಾಗಾದರೆ ಬ್ರಹ್ಮಕ್ಕೆ ಜಗತ್ತು-ಎಂಬ ಹೆಸರನ್ನು ಇಟ್ಟಂತಾಯಿತಲ್ಲವೆ? ಎಂದರೆ ಹೌದು-ಅಜ್ಞಾನಿಗಳು ಜಗತ್ತು ಎಂದು ಏನನ್ನು ವ್ಯವಹರಿಸುವರೋ ಅದು ಜ್ಞಾನಿಗಳ
ದೃಷ್ಟಿಯಿಂದ ಬ್ರಹ್ಮವೇ-ಎಂಬಿದೇ ಸಿದ್ದಾಂತವು, ಹಿರಣ್ಯಕಶಿಪುವು ಕಂಬವೆಂದು
ಕರೆದದ್ದನ್ನೇ ಪ್ರಹ್ಲಾದನು ನರಸಿಂಹನೆಂದು ಕಂಡುಕೊಂಡನು. ಇದು ಅವನ ಅಂತರ್ದೃಷ್ಟಿ
ವಿಶೇಷದ ಫಲವೇ ಹೊರತು ಕಲ್ಪನೆಯೇನೂ ಅಲ್ಲ. ಆದ್ದರಿಂದ ಆತ್ಮಶಕ್ತಿಯು ಋಷಿಗಳಿಗೆ
ಅವರ ಅಂತರಾತ್ಮ ಸ್ವರೂಪದಲ್ಲಿಯೇ ತಾನೇ ಹೊಳೆದಾಗ ಅದಕ್ಕಿಂತ ಬೇರೊಂದು
ಜಗತ್ಕಾರಣವಿರಲಾರದು-ಎಂಬ ದರ್ಶನವಾಯಿತು. ಇದನ್ನು ಅವರು ಹೇಗೆ
ನಿರ್ಧರಿಸಿದರೆಂಬುದನ್ನು ಈಗ ಮತ್ತೆ ವಿಚಾರಿಸೋಣ.

ಋಷಿಗಳ ಚಿಂತನಾಕ್ರಮವು ಹೀಗಿತ್ತು ಅವರುಗಳು ಮೊದಲು ಒಬ್ಬೊಬ್ಬರೂ ಒಂದೊಂದು ಕಾರಣವನ್ನು ಬುದ್ಧಿಮಟ್ಟದಿಂದ ನಿರ್ಧರಿಸಿದಾಗ ಫಲಿತಾಂಶವು ಭಿನ್ನಭಿನ್ನವಾಗಿತ್ತು, ಒಂದು ರೀತಿಯಿಂದ ಆಯಾ ತೀರ್ಮಾನಗಳನ್ನು ತಳ್ಳಿಹಾಕುವಂತೆಯೂ ಇರಲಿಲ್ಲ. ಈಗ ಅವರಿಗೆ ಹೊಳೆದದ್ದೇನೆಂದರೆ: ಯಾವ ಕಾರಣವೂ ಆತ್ಮಶಕ್ತಿಗಿಂತ ಅನ್ಯವಾಗಿಲ್ಲ, ಏಕೆಂದರೆ ಪ್ರತಿಯೊಂದು ವಸ್ತುವೂ ‘ತಾನು’-ಎನಿಸಬೇಕಾದರೆ
ಅದಕ್ಕೊಂದು ಸ್ವರೂಪವಿರಬೇಕು-ಹಾಗೂ ಇದೆ-ಎನಿಸಿಕೊಳ್ಳಬೇಕು. ಹೀಗೆ ‘ಅಸ್ತಿ
ಎನಿಸಿಕೊಳ್ಳಬೇಕಾದರೆ ಅದು ‘ಸತ್’ ಆಗಿರಬೇಕು. ಇರತಕ್ಕದ್ದನ್ನಲ್ಲವೆ-ಜನರು ಅಸ್ತಿ-ಎನ್ನುವರು? ಇಲ್ಲದ್ದಾದರೆ ‘ನಾಸ್ತಿ’ ಎನ್ನುತ್ತಾರಲ್ಲವೆ? ಆದ್ದರಿಂದ ಎಲ್ಲಾ ಕಾರಣಗಳೂ ಸದನುಗತವಾಗಿಯೇ ತೋರುತ್ತಿರುವದರಿಂದ ಸತ್ತೊಂದೇ ಹೀಗೆ ಬೇರೆ ಬೇರೆಯ ಕಾರಣವಸ್ತುಗಳಾಗಿ ಪ್ರತಿಭಾಸವಾಗುತ್ತಿದೆ ಎಂದು ನಿಶ್ಚಯಿಸಿದರು. ಈ ಸತ್ತೆಂಬುದು ಅನಾತ್ಮವಂತೂ ಆಗಲಾರದು. ಏಕೆಂದರೆ ಅನಾತ್ಮವನ್ನು ಗುರುತಿಸಲು ಸತ್ತು ತಾನು
ಮೊದಲೇ ಇದ್ದುಕೊಂಡಿರಬೇಕಾಗುತ್ತದೆ. ಹಾಗೆ ಇದ್ದುಕೊಂಡು ತಾನೇ ತಾನಾಗಿರುವ ವಸ್ತು ಆತ್ಮನೆನಿಸಿಕೊಂಡೇ ತೀರುತ್ತದೆ ಎಂದು ಅನುಭವದಿಂದ ಕಂಡುಕೊಂಡರು. ಆಗ
ಅವರಿಗೆ ಆತ್ಮಶಕ್ತಿಯ ಅರಿವಾಯಿತು. ಮತ್ತು ಆತ್ಮನೆಂದರೆ ತಮ್ಮತಮ್ಮ ದೇಹಾವಸ್ಪಿನ್ನಚೈತನ್ಯ ಮಾತ್ರವೇ ಎಂಬ ಭ್ರಾಂತಿಯೂ ಹಾರಿಹೋಯಿತು. ಆತ್ಮಶಬ್ದವೇ “ಆಷ್ಟೋತೀತ್ಯಾತ್ಮಾ” ಎಂದಂತೆ ಎಲ್ಲವನ್ನೂ ವ್ಯಾಪಿಸಿಕೊಂಡು ಕಡೆವಡೆಯದೆ ಎಲ್ಲೆಲ್ಲಿಯೂ ಹೆಣೆದುಕೊಂಡಿರುವದಾಗಿ ಎಲ್ಲವನ್ನೂ ತನ್ನೊಳಗೆ ಅಡಗಿಸಿಕೊಂಡಿರುವ
ತತ್ತ್ವವಾಗಿದೆ ಎಂದು ನಿರ್ಧರಿಸಿದರು. ಇಂಥ ಅಖಂಡಚೈತನ್ಯವೊಂದೇ ಉಳಿದ ಎಲ್ಲಾ
ಕಾರಣವಸ್ತುಗಳನ್ನೂ ವ್ಯಾಪಿಸಿಕೊಂಡಿದ್ದು ತಾನೇ ಕಾಲ, ದೇಶ, ನಿಯತಿ, ಸ್ವಭಾವ,
ಭೂತಗಳು-ಮುಂತಾದದ್ದಾಗಿ ಬಾಹ್ಯದೃಷ್ಟಿಗೆ ತೋರಿಕೊಂಡಿತೆಂದೂ ವಾಸ್ತವವಾಗಿ ಆ
ಕಾರಣವಸ್ತುಗಳೆಲ್ಲವನ್ನೂ ತಾನೇ ನಿಯಂತ್ರಿಸುತ್ತಿದೆಯೆಂದೂ ಅರಿತುಕೊಂಡರು.


     ಈಗ ಈ ಆತ್ಮಶಕ್ತಿಯನ್ನು ದೇವಾತ್ಮಶಕ್ತಿಯೆಂದು ಏಕೆ ಕರೆಯಲಾಗಿದೆ? ಎಂಬದನ್ನು ನೋಡೋಣ. ದೇವ-ಎಂದರೆ ದ್ಯೋತನಸ್ವಭಾವದ ವಸ್ತು ಎಂದರ್ಥ. ಯಾವದು ಚೇತನವಾಗಿದ್ದು ಜ್ಞಾನಸ್ವಭಾವವುಳ್ಳದ್ದಾಗಿರುವದೋ ಅದು ದೇವನೆನಿಸುವದು. ಹಾಗಲ್ಲದೆ ಕೇವಲ ಪ್ರಕಾಶಿಸುವ ವಸ್ತು-ಎಂದರ್ಥಮಾಡಿದರೆ ಸಾಮಾನ್ಯರು ಅದನ್ನು ಅಚೇತನವೆಂದು ತಿಳಿದುಬಿಡುತ್ತಾರೆ. ಲೋಕದಲ್ಲಿ ವಿದ್ಯುತ್ತು, ಅನಿಲ-ಮುಂತಾದವು ಪ್ರಕಾಶರೂಪವಾಗಿದ್ದರೂ ಅಚೇತನವಾಗಿವೆಯಲ್ಲವೆ? ಹಾಗಲ್ಲ-ಎಂದು ತಿಳಿಸಲು ದೇವ-ಆತ್ಮ ಎರಡೂ ಶಬ್ದಗಳನ್ನು ಕೂಡಿಸಿ ಪ್ರಯೋಗಿಸಿದೆ. ವ್ಯವಹಾರದಲ್ಲಿ ಬಳಸುವ ಯಾವ ಬೆಳಕೇ ಆಗಲಿ, ಅದು ಎಷ್ಟೇ ಸ್ಪುಟವಾಗಿ ವಸ್ತುವನ್ನು ತೋರಿಸಲಿ-ನೋಡುವವನಿಲ್ಲದೆ ಎಂದಾದರೂ ನೋಟವು ಸಿದ್ಧಿಸಿತೆ? ಹಾಗಾದರೆ
ನೋಡುವವನನ್ನು ಬೆಳಗುವ ಬೆಳಕು ಯಾವದು? ಅದೇನೂ ಸೂರ್ಯಾದಿಗಳಲ್ಲಿ ಒಂದಲ್ಲವಷ್ಟೆ? ಎಂದರೆ ನಿಜ; ಆ ಬೆಳಕೇ ದೇವಾತ್ಮಶಕ್ತಿಯು. ಅದು ಆತ್ಮನಾದ್ದರಿಂದಲೇ ಸ್ವಯಂಪ್ರಕಾಶವು. ಉಳಿದದ್ದೆಲ್ಲವನ್ನೂ ಅದೇ ಬೆಳಗುವದು. ಅಷ್ಟೇ ಅಲ್ಲ ಬೆಳಗುವದು ಎಂಬುದು ಉಪಲಕ್ಷಣವೆಂದಿಟ್ಟುಕೊಳ್ಳಬೇಕು. ಜಗತ್ತಿನಲ್ಲಿ ಕಾಣಬರುವ ಎಲ್ಲಾ ವಿಧವಾದ
ಜ್ಞಾನಬಲಕ್ರಿಯೆಗಳೆಲ್ಲವೂ ಅದರ ವ್ಯಾಪಾರವೇ ಎಂದರ್ಥ. ಹೀಗೆ ಕಂಡುಕೊಂಡಾಗ
ಆ ದೇವಾತ್ಮಶಕ್ತಿಯು ತನ್ನ ಸೃಷ್ಟಿ, ಸ್ಥಿತಿ, ಲಯ-ವ್ಯಾಪಾರಗಳಿಂದ ಬ್ರಹ್ಮವೆಂದೂ,
ವಿಷ್ಣುವೆಂದೂ, ಶಿವನೆಂದೂ ವ್ಯವಹರಿಸಲ್ಪಡುವದು. ಅದಕ್ಕೆ ಕಾರ್ಯಕರಣಗಳ ಹಂಗಿಲ್ಲ. ಅದಕ್ಕೆ ಸಮನಾದದ್ದಾಗಲಿ ಹೆಚ್ಚಿನದಾಗಲಿ ಯಾವದೂ ಇಲ್ಲ. ಅದರ ಮಹಿಮೆಯು ಇಂತಿಷ್ಟು ಎಂದು ವರ್ಣಿಸಲಾಗುವದಿಲ್ಲ . ಅದರ ಆವಿರ್ಭಾವತಿರೋಭಾವಗಳಿಗೆ ಲೆಕ್ಕವಿಲ್ಲ. ಅದು ಕಣ್ಮರೆಯಾಗಿದ್ದಾಗಲೂ ಗೂಢವಾಗಿದ್ದುಕೊಂಡೇ ಇರುವದು. ಏಕೆಂದರೆ ಅದಕ್ಕೆ ನಾಶವೇ ಇಲ್ಲ. ಉತ್ಪತ್ತಿಯೂ ಇಲ್ಲ. ಅದು ಹಿಗ್ಗುವದಿಲ್ಲ, ಕುಗ್ಗುವದಿಲ್ಲ. ಅದನ್ನು ಯಾವ ಹೆಸರಿನಿಂದ ಕರೆದರೂ ಒಪ್ಪುತ್ತದೆ. ಆದರೆ ಅದು ಆತ್ಮನೆಂಬುದನ್ನು ಮರೆಯಬಾರದು. ಹೀಗೆ ಆ ದೇವಾತ್ಮಶಕ್ತಿಯನ್ನು ಸಾಕ್ಷಾತ್ಕಾರಮಾಡಿಕೊಂಡ ಋಷಿಗಳು ಜಿಜ್ಞಾಸೆಯನ್ನು ಪೂರ್ಣಗೊಳಿಸಿ ತತ್ತ್ವನಿಷ್ಠರಾಗಿ ಶಾಂತರಾಗಿ ಅಮೃತರಾಗಿ ಆನಂದ
ಸ್ವರೂಪರಾಗಿ ನೆಲೆನಿಂತರು.


       ವಾಚಕರೆ, ಈ ದೇವಾತ್ಮಶಕ್ತಿಯನ್ನು ಕುರಿತೇ ಮುಂದಿನ ಮಂತ್ರಗಳಲ್ಲಿಯೂ ಬೇರೆ ಬೇರೆಯ ದೃಷ್ಟಿಕೋನಗಳಿಂದ ವಿವರಿಸಲಾಗುವದು. ಈ ಅನ್ವೇಷಣೆಯು ತಪಸ್ವಿಗಳಲ್ಲದವರಿಗೆ ದಕ್ಕಲಾರದು. ಋಷಿಗಳೇನೋ ಜಗತ್ಕಾರಣವನ್ನು ಕಂಡು ಹಿಡಿದಿರುವದು ನಿಜ. ಆದರೆ ಅದನ್ನು ನಾವೂ ಅರಿತುಕೊಳ್ಳಬೇಕಾದರೆ ಧ್ಯಾನಯೋಗವನ್ನೇ ಅವಲಂಬಿಸಬೇಕಾಗುವದು. ಕೇವಲ ತರ್ಕದಿಂದ ದೇವಾತ್ಮಶಕ್ತಿಯನ್ನು ಕಾಣಲಾಗುವದಿಲ್ಲ. ಆದ್ದರಿಂದ ಋಷಿಗಳ ಅನ್ವೇಷಣಕ್ರಮವನ್ನೇ ನಾವೂ ಅನುಸರಿಸೋಣ.


Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *