Children’s meal content – ಮಕ್ಕಳ ಊಟದ ವಿಷಯ.

Spread the love

ಮಕ್ಕಳ ಊಟದ ವಿಷಯ

Mealtime lessons taught by elders - ಹಿರಿಯರು ಹೇಳಿಕೊಟ್ಟ ಊಟದ ಪಾಠ
child care

        ಆರು-ಏಳನೇ ತಿಂಗಳಿನಿಂದ ಮಕ್ಕಳಿಗೆ ನಾವು ಹೊರಗಿನ ಆಹಾರವನ್ನು ಕೊಡಲು ಪ್ರಾರಂಭಿಸುತ್ತೇವೆ. ನಾವು ಈಗಿನಿಂದಲೇ ಮಕ್ಕಳಿಗೆ ವೇಳೆಗೆ ಸರಿಯಾಗಿ ಅಂದರೆ ಒಂದು ಕ್ರಮಬದ್ಧವಾದ ರೀತಿಯಲ್ಲಿ ತಿನ್ನಿಸಲು ಕುಡಿಸಲು ಅಭ್ಯಾಸ ಮಾಡಬೇಕು. ಪದೇ ಪದೇ ತಿನ್ನಿಸುವುದು, ಕುಡಿಸುವುದು ಮಾಡಿದರೆ, ಮಕ್ಕಳಿಗೆ ಅದೇ ರೂಢಿಯಾಗುವುದು ಹೊಟ್ಟೆ ಹಸಿಯದಿದ್ದರೂ ಏನಾದರೂ ತಿನ್ನಲು ಕೇಳುತ್ತಿರುತ್ತಾರೆ. ಮಗು ಸ್ವಲ್ಪ ದೊಡ್ಡದಾದ ಮೇಲೆ ಅಂದರೆ ನಾಲ್ಕು- ಐದನೇ ವಯಸ್ಸಿನಿಂದಲೇ ಊಟ ತಿಂಡಿಗಳನ್ನು ಸ್ವತಃ ತನ್ನ ಕೈಯಿಂದಲೇ ತಿನ್ನಲು ಕಲಿಸಿ ಪ್ರೀತಿಯಿಂದ ನೀವೇ ತಿನ್ನಿಸಿದರು ತಪ್ಪಿಲ್ಲ. ಹಾಗಂತ ಇದೇ ಅಭ್ಯಾಸವಾಗಬಾರದು ಹಾಗೆಯೇ ಮಕ್ಕಳು ತುಂಬಾ ಹಠದ ಸ್ವಭಾವದವರಾಗಿದ್ದು ಊಟದ ವೇಳೆಯಲ್ಲಿ ಕಿರಿಕಿರಿ ಮಾಡುತ್ತಿರುತ್ತಾರೆ. ಕಿರಿಕಿರಿ ಮಾಡದಿರಲೆಂದು ಚಾಕಲೇಟ್ ಬಿಸ್ಕೆಟ್ ಐಸ್ ಕ್ರೀಮ್‌ಗಳನ್ನು ಕೊಡುತ್ತಾ ಹೋದರೆ, ಅವರಿಗೆ ಹಸಿವೇ ಆಗುವುದಿಲ್ಲ. ಊಟವನ್ನು ಸಹ ಸರಿಯಾಗಿ ಮಾಡುವುದಿಲ್ಲ. ಆದಕಾರಣ ಪ್ರಾರಂಭದಿಂದಲೇ ತಿಂಡಿ ವೇಳೆ ತಿಂಡಿ, ಊಟದ ವೇಳೆ ಊಟ, ಮಾಡುವ ಅಭ್ಯಾಸ ಕಲಿಸಲು ಪ್ರಯತ್ನಿಸಿ ಆದಷ್ಟು ಮನೆಯಲ್ಲಿಯೇ ತಯಾರಿಸಿದ ತಿಂಡಿ ಊಟಗಳನ್ನೇ ತಿನ್ನಿಸಿ ಇದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ.

         ಕೆಲವು ತಾಯಂದಿರು ನಮ್ಮ ಮಕ್ಕಳು ಅದು ತಿನ್ನುವುದಿಲ್ಲ ಇದು ತಿನ್ನುವುದಿಲ್ಲ ಎಂದು ಮಕ್ಕಳ ಮುಂದೆ ಹೇಳುತ್ತಾರೆ ಹಾಗೂ ಮಕ್ಕಳು ಹೇಳಿದ ಊಟ ತಿಂಡಿಯನ್ನೇ ಮಾಡಿಕೊಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ, ಇದು ತಪ್ಪಲ್ಲ. ಹಾಗಂತ ಮಕ್ಕಳು ಅದೇ ಪ್ರವೃತ್ತಿಯನ್ನು ದೊಡ್ಡವರಾದ ಮೇಲೂ ರೂಢಿಸಿಕೊಂಡರೆ ಅವರು ವಿದ್ಯಾಭ್ಯಾಸಕ್ಕಾಗಿ ಹೊರಗಡೆ ಹೋಗಬೇಕಾಗಿ ಬಂದಾಗ ಅಥವಾ ಬೇರೆ ಯಾವುದಾದರೂ ಕಾರಣಕ್ಕಾಗಿ ಹೊರಗಡೆ ಹೋಗಬೇಕಾಗಿ ಬಂದಾಗ ಊಟದ ಸಮಸ್ಯೆಯು ತಲೆದೋರುವುದು. ಆದ ಕಾರಣ ಮಕ್ಕಳಿಗೆ ಮನೆಯಲ್ಲಿ ಯಾವ ಅಡುಗೆ ಮಾಡಿದರೂ ತಿನ್ನುವಂತಹ ರೂಢಿ ಮಾಡಿಸಿದರೆ ಒಳಿತು. ಚಿಕ್ಕ ವಯಸ್ಸಿನಿಂದಲೇ ಎಲ್ಲಾ ವಿಧದ ತರಕಾರಿ ಸೊಪ್ಪು ಹಣ್ಣುಗಳನ್ನು ತಿನ್ನಲು ರೂಢಿ ಮಾಡಿಸಿ.

About Training and tutoring – ಶಾಲೆಗೆ ಸೇರಿಸುವ ಹಾಗೂ ಕಲಿಸುವ ಬಗ್ಗೆ.

child care
child care
      ನೀವು ಮಗುವನ್ನು ಶಾಲೆಗೆ ಸೇರಿಸುವ ಸಮಯದಲ್ಲಿ ಮಗುವಿನ ಮುಂದೆ ಯಾವ ಶಾಲೆಗೆ ಸೇರಿಸಬೇಕು, ಎಂಬ ಚರ್ಚೆಗಳನ್ನು ಮಾಡಲು ಹೋಗಬೇಡಿ. ಮಗು ಇಲ್ಲದಿರುವ ವೇಳೆ ಮನೆಯವರೊಡನೆ ಚರ್ಚಿಸಿ ನಿಮ್ಮ ಆದಾಯಕ್ಕೆ ಸರಿಹೊಂದುವ ಶಾಲೆಗೆ ದಾಖಲು ಮಾಡಿ. ಮಗುವಿನ ಮುಂದೆ ಶಾಲೆಗಳ ಬಗ್ಗೆ ಚರ್ಚೆ ಏಕೆ ಬೇಡ ಎಂದರೆ, ಇತ್ತೀಚೆಗೆ ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ ಅಲ್ಲಿಗೆ ನನಗೆ ಪರಿಚಯ ಇರುವವರು ತಮ್ಮ ನಾಲ್ಕು-ಐದು ವರ್ಷದ ಯು.ಕೆ.ಜಿ.ಗೆ ಹೋಗುವ ಮೊಮ್ಮಗಳನ್ನು ಕರೆದುಕೊಂಡು ಬಂದಿದ್ದರು ನಾನು ಆ ಮಗುವಿನೊಂದಿಗೆ ಮಾತನಾಡುತ್ತಾ, ಇಂಗ್ಲಿಷ್ ನಲ್ಲಿ ನಂಬರ್ ಹೇಳು ಎಂದು ಹೇಳಿದಾಗ ಅವಳು 10ರವರೆಗೆ ಹೇಳಿ ಮುಂದಕ್ಕೆ ಹೇಳಲು ತೊಡವರಿಸಿದಳು.

         ನಾನು ಆಗ ನಿನಗೆ ಮುಂದೆ ಹೇಳಲು ಬರುವುದಿಲ್ಲವಾ ಎಂದು ಕೇಳಿದಾಗ ಆ ಮಗು ಹುಸಿ ಕೋಪದಿಂದ ನಮ್ಮಮ್ಮ ಆ ಸ್ಕೂಲ್ ಈ ಸ್ಕೂಲ್ ಅಂತ ಯಾವುದೋ ಸ್ಕೂಲ್‌ಗೆ ಸೇರಿಸಿದ್ದಾರೆ. ನನಗೆ ಸರಿಯಾಗಿ ಹೇಳಲು ಬರುವುದಿಲ್ಲ ಎಂದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಕಾರಣ ಆ ಚಿಕ್ಕ ಮಗುವಿನ ತಲೆಯಲ್ಲಿ ಇಂತಹ ವಿಚಾರ ತುಂಬಿಕೊಂಡರೆ ಹೇಗೆ? ಅದನ್ನು ಸರಿಪಡಿಸಲು ಕಷ್ಟವಾಗುವುದು. ಏಕೆಂದರೆ ಆ ಮಗು ಕಲಿಕೆಯಲ್ಲಿ ಮುಂದೆಯೂ ಸಹ ಹಿಂದುಳಿದಾಗ ಇದೇ ಕಾರಣವನ್ನು ಹೇಳಬಹುದಲ್ಲವೇ ?



    ಹಾಗೆಯೇ ಇನ್ನೂ ಕೆಲವು ಮನೆಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಾಗ, ಗಂಡ ಹೆಂಡತಿಯ ಮೇಲೆ ಹೆಂಡತಿ ಗಂಡನ ಮೇಲೆ, ನಾನು ಹೇಳಿದ ಶಾಲೆಗೆ ಸೇರಿಸಲಿಲ್ಲ ಎಂಬ ಆಪಾದನೆಗಳನ್ನು ಹಾಕುತ್ತಿರುತ್ತಾರೆ.

     ಇವೆಲ್ಲಾ ಕಾರಣಗಳು ಮಕ್ಕಳ ಮೇಲೆ ಬೇರೆ ರೀತಿಯಲ್ಲಿ ಪರಿಣಾಮ ಬೀರಿ ಕೊನೆಗೆ ಮಕ್ಕಳು ಶಾಲೆಯ ಮೇಲೆ ನಮ್ಮ ಮೇಲೆ ತಪ್ಪು ಹೊರಿಸುತ್ತಾರೆ. ಆದ ಕಾರಣ ಮಕ್ಕಳ ಮುಂದೆ ಶಾಲೆಗೆ ಸೇರಿಸುವ ಕುರಿತು ಚರ್ಚೆ ವಾದಗಳನ್ನು ಮಾಡದೆ ಇರಿ. ತಂದೆ ತಾಯಿಗಳ ಮಧ್ಯೆಯೂ ಈ ವಿಷಯದಲ್ಲಿ ಹೊಂದಾಣಿಕೆ ಇರಲಿ ಕಿತ್ತಾಟ ಬೇಡ.



    ಈಗ ನಿಮ್ಮ ಮಗ/ಮಗಳು ಶಾಲೆಗೆ ಸೇರಿ ಪ್ರತಿನಿತ್ಯ ಶಾಲೆಗೆ ಹೋಗಿ ಬರುವಂತಾಗಿದೆ ಪ್ರತಿನಿತ್ಯ ಪಾಠ ಹೇಳಿಕೊಡುವ ಹೋಂವರ್ಕ್ ಮಾಡಿಸುವ ಕೆಲಸ ನಿಮ್ಮದಾಗಿದೆ. ಪಾಠ ಹೇಳಿಕೊಡುವ ವೇಳೆಯಲ್ಲಿ ಮಗು ತುಂಬಾ ಚಿಕ್ಕದಾಗಿರುವ ಕಾರಣ ನಾಲ್ಕು ಐದು ವರ್ಷದ ಮಗು ಮೊದಮೊದಲು ಬರೆಯಲು ಹೇಳಿಕೊಟ್ಟಿದ್ದನ್ನು ಹೇಳಲು ಕಿರಿಕಿರಿ ಮಾಡಬಹುದು. ಆಗ ನೀವು ತುಂಬಾ ಬಲವಂತದಿಂದ ಹೇಳಿಕೊಡುವುದು ಬಯ್ಯುವುದು ಹೊಡೆಯುವುದು ಮಾಡದೆ ಸಮಾಧಾನದಿಂದ ರಮಿಸುತ್ತಾ ನಿಮ್ಮ ದಾರಿಗೆ ತಂದುಕೊಳ್ಳಬೇಕು. ಹಾಗೆಯೇ ಕಲಿಸುವ ವಿಚಾರದಲ್ಲಿಯೂ ಸಹ ಒಬ್ಬರು ಕಲಿಸುವ ವಿಚಾರದಲ್ಲಿ ಮತ್ತೊಬ್ಬರು ಅಂದರೆ ತಂದೆ ಕಲಿಸುವಾಗ ತಾಯಿ ಅಡ್ಡ ಬರುವುದು, ತಾಯಿ ಕಲಿಸುವಾಗ ತಂದೆ ಅಡ್ಡ ಬರುವುದು, ಇಲ್ಲವೇ ತಾತ ಅಡ್ಡ ಬರುವುದು. ಈ ರೀತಿಯಾಗಿ ಬರೆಸು, ಈ ರೀತಿಯಾಗಿ ಕಲಿಸು ಹೀಗೆ ಮಾಡು ಹಾಗೆ ಮಾಡು ಹಾಗಾದರೆ ಚೆನ್ನಾಗಿ ಕಲಿಯುತ್ತಾನೆ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯಗಳನ್ನು ನೀಡುತ್ತಾ ಹೋದರೆ ಕಲಿಸುವವರಿಗೂ ಗೊಂದಲ ಮಗುವಿಗೂ ಗೊಂದಲ ಉಂಟಾಗುವುದು ಈ ರೀತಿಯ ಗೊಂದಲ ಬೇಡ ಆದಷ್ಟು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರ ಬುದ್ಧಿ ಶಕ್ತಿಗನುಗುಣವಾಗಿ ಕಲಿಸೋಣ ಇಲ್ಲವಾದರೆ ಮಕ್ಕಳು ಕಲಿಕೆಯ ಬಗ್ಗೆ ಆಸಕ್ತಿ ತಾಳದೆ ಭಯಗೊಂಡು ಶಾಲೆ ಬೇಡ ಎಂಬ ರೀತಿ ಆಗಬಾರದು.

About your child’s behavior at school | ಶಾಲೆಯಲ್ಲಿ ನಿಮ್ಮ ಮಗುವಿನ ವರ್ತನೆ ಬಗ್ಗೆ.

child care
child care

 ಈಗ ನಿಮ್ಮ ಮಗು ಶಾಲೆಗೆ ಹೋಗಲು ಪ್ರಾರಂಭಿಸಿದೆ ನೀವು ಮಗುವಿಗೆ ಶಾಲೆಯಲ್ಲಿರುವ ಎಲ್ಲಾ ಶಿಕ್ಷಕರಿಗೆ ಹಾಗೂ ಇತರೆ ಸಿಬ್ಬಂದಿಯವರೊಂದಿಗೆ ಗೌರವದಿಂದ ನಡೆದುಕೊಳ್ಳಲು ತಿಳಿಸಿ. ಹಾಗೆಯೇ ಶಾಲೆಯ ಇತರೆ ಸಹಪಾಠಿಗಳ ಜೊತೆಯೂ ಪ್ರೀತಿ ಸಹಕಾರದಿಂದ ಇರಲು ತಿಳಿಸಿ ಮಗು ಶಾಲೆಯಿಂದ ಮನೆಗೆ ಬಂದ ಮೇಲೆ ಅದು ಶಾಲೆಯಲ್ಲಿನ ಶಿಕ್ಷಕರ ಬಗ್ಗೆ ಹೇಳುವ ವಿಚಾರ ಗಮನಿಸಿ. ಮಗು ಹೇಳುವುದರಲ್ಲಿ ನಕಾರಾತ್ಮಕ ಭಾವನೆಗಳು ತುಂಬಿದರೆ, ಅಂದರೆ ಉದಾಹರಣೆಗೆ ನನಗೆ ಆ ಮಿಸ್ ಇಷ್ಟ ಆಗಲಿಲ್ಲ, ಅವರು ನೋಡಲು ಚೆನ್ನಾಗಿದ್ದಾರೆ, ಇವರು ನೋಡಲು ಚೆನ್ನಾಗಿಲ್ಲ, ನನಗೆ ಚೆನ್ನಾಗಿ ಮಾತನಾಡಿಸುವುದಿಲ್ಲ, ಹಾಗೆ ಹೀಗೆ ಎಂದು ದೂರುಗಳನ್ನು ಹೇಳಲು ಪ್ರಾರಂಭಿಸಿದರೆ ನೀವು ಅದಕ್ಕೆ ತಲೆದೂಗುತ್ತಾ, ಹೌದಾ ಎಂದು ಮಗುವಿಗೆ ಮತ್ತಷ್ಟು ವಿಚಾರಗಳನ್ನು ಕೆದುಕಿ ಕೇಳಿ ನಕ್ಕು ಸುಮ್ಮನಾಗುವ ಬದಲು, ಮೊದಲ ದಿನವೇ ನೀವು ನಿನಗೆ ಆ ಮಿಸ್ ಏಕೆ ಇಷ್ಟವಾಗುವುದಿಲ್ಲ, ಅವರು ತುಂಬಾ ಒಳ್ಳೆಯವರು ನೀನು ಅವರಿಗೆ ಇಷ್ಟವಾಗುವ ಹಾಗೆ ನಡೆದುಕೊಂಡರೆ ನೀನು ಅವರಿಗೆ ತುಂಬಾ ಇಷ್ಟವಾಗುತ್ತೀಯ.

ಹಾಗೆ ನಿನಗೂ ಅವರು ಇಷ್ಟವಾಗುತ್ತಾರೆ, ಎಂದು ಹೇಳಿ. ಆಗ ಮಗು ಆ ಶಿಕ್ಷಕರನ್ನು ನೋಡುವ ದೃಷ್ಟಿಯನ್ನು ನಿಧಾನವಾಗಿ ಬದಲಾಯಿಸುತ್ತದೆ. ಹಾಗೆಯೇ ಇತರ ಸಹಪಾಠಿಗಳ ಬಗ್ಗೆಯೂ ಸಹ ಅವನು ಒಳ್ಳೆಯವನಲ್ಲ, ಅವನು ಇಷ್ಟವಾಗಲಿಲ್ಲ, ಹಾಗೆ ಹೀಗೆ ಎಂದು ದೂರುಗಳನ್ನು ಹೇಳಲು ಪ್ರಾರಂಭಿಸಿದಾಗಲೂ ಸಹ ನೀವು ಮಗುವಿನಲ್ಲಿರುವ ಈ ಭಾವನೆಗಳನ್ನು ಬದಲಾಯಿಸುವ ಹಾಗೆ ಮಾತನಾಡಿ. ಎಲ್ಲರ ಜೊತೆ ನಾವು ಚೆನ್ನಾಗಿದ್ದರೆ, ನಮಗೆ ಎಲ್ಲರೂ ಇಷ್ಟವಾಗುತ್ತಾರೆ.ಹಾಗೆಯೇ ನಾವು ಸಹ ಎಲ್ಲರಿಗೂ ಇಷ್ಟವಾಗುತ್ತೇವೆ. ಎಂದು ನಗುತ್ತಾ ಹೇಳಿ. ಸಾಧ್ಯವಾದಷ್ಟು ಮಗು ಬೇರೆಯವರ ಬಗ್ಗೆ ಚಾಡಿ ಹೇಳುವುದನ್ನು ಆರಂಭದಲ್ಲಿಯೇ ನಿಲ್ಲಿಸಲು ಪ್ರಯತ್ನಿಸಿ.

        ಇಲ್ಲವಾದರೆ ಅದೇ ಅಭ್ಯಾಸವಾಗುತ್ತದೆ. ನೀವು ನಿಮ್ಮ ಮಕ್ಕಳ ಮುಂದೆ ಬೇರೆ ಮಕ್ಕಳನ್ನು ಅತಿಯಾಗಿ ಹೊಗಳುವುದಾಗಲಿ, ತೆಗಳುವುದಾಗಲಿ ಮಾಡಬೇಡಿ ಹಾಗು ಶಾಲೆಯಲ್ಲಿನ ಎಲ್ಲಾ ಮಕ್ಕಳಿಗಿಂತ ನನ್ನ ಮಗುವೆ ಚೆನ್ನಾಗಿ ಓದಬೇಕು ಚೆನ್ನಾಗಿ ಕಾಣಬೇಕು ಎಂಬ ಅತಿಯಾದ ಸ್ವಾರ್ಥ ಮನೋಭಾವನೆ ಬೆಳೆಸಿಕೊಳ್ಳಬೇಡಿ.

        ಪೋಷಕರ ಸಭೆಗೆ ನೀವು ತಪ್ಪದೆ ಹೋಗಲು ರೂಢಿಸಿಕೊಳ್ಳಿ, ಅಲ್ಲಿ ನೀವು ಎಲ್ಲಾ ಪೋಷಕರ ಮುಂದೆ ಅಥವಾ ಇತರೆ ಮಕ್ಕಳ ಮುಂದೆ ನಿಮ್ಮ ಮಗುವಿನ ಬಗ್ಗೆ ಯಾವುದೇ ರೀತಿ ದೂರುಗಳನ್ನು – ಅಂದರೆ ಅವನು ಸರಿಯಾಗಿ ಓದುವುದಿಲ್ಲ, ನಮ್ಮ ಮಾತುಗಳು ಕೇಳುವುದಿಲ್ಲ, ತುಂಬಾ ಹಠದ ಸ್ವಭಾವ, ಹಾಗೆ-ಹೀಗೆ ಎಂದು ನಕಾರಾತ್ಮಕವಾಗಿ ಹೇಳಿದರೆ, ಇತರೆ ಸಂದರ್ಭದಲ್ಲಿ ಬೇರೆ ಮಕ್ಕಳು ನಿಮ್ಮ ಮಗುವಿಗೆ ಹಿಯಾಳಿಸುವ ಸಂದರ್ಭ ಬರಬಹುದು. ಅಥವಾ ಸ್ವತಃ ಶಿಕ್ಷಕರೇ ನಿಮ್ಮ ಮಗುವಿಗೆ ಹಿಯಾಳಿಸುವ ಸಂದರ್ಭ ಬರಬಹುದು. ನಿಮ್ಮ ತಂದೆ ತಾಯಿ ನಿನ್ನ ಬಗ್ಗೆ ದೂರು ನೀಡಿದ್ದಾರೆ. ಎಂದು ಮತ್ತೆ ಮತ್ತೆ ಅವಹೇಳನ ಮಾಡುವ ಅವಕಾಶವೂ ಬರಬಹುದು. ಅದಕ್ಕಾಗಿ ನೀವು ಯಾವ ವಿಷಯವನ್ನೇ ಆಗಲಿ ಸೂಕ್ಷ್ಮವಾಗಿ ತರಗತಿಯ ಶಿಕ್ಷಕರ ಜೊತೆ ನಿಮ್ಮ ಮಗುವಿನ ಸ್ವಭಾವ ಕಲಿಕಾ ಮಟ್ಟದ ಬಗ್ಗೆ ಚರ್ಚಿಸಿರಿ.

         ಕೆಲವು ಬಾರಿ ಪೋಷಕರ ಸಭೆಯಲ್ಲಿ ಮಕ್ಕಳು ಹಾಗೂ ಪೋಷಕರನ್ನು ಒಟ್ಟಾಗಿ ಕೂರಿಸಿ ಶಿಕ್ಷಕರು ಮಕ್ಕಳ ಬಗ್ಗೆ ಪೋಷಕರ ಅಭಿಪ್ರಾಯಗಳನ್ನು ಕೇಳುವ ರೂಡಿ ಇದೆ. ಇಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ನೀವು ನಿಮ್ಮ ಮಕ್ಕಳ ಮುಂದೆ ದೂರುಗಳನ್ನು ನೀಡದೆ ನಮ್ಮ ಮಗ/ಮಗಳು ಯಾವ ರೀತಿಯ ಸಮಸ್ಯೆಗಳಿಲ್ಲದೆ ತಮ್ಮ ಪಾಡಿಗೆ ತಾವು ಶ್ರದ್ಧೆಯಿಂದ ಓದುತ್ತಿದ್ದಾರೆ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಸ್ವಲ್ಪ ಹೆಚ್ಚಿನ ಪ್ರಯತ್ನ ಪಟ್ಟರೆ ಮತ್ತಷ್ಟು ಉತ್ತಮವಾದ ರಿಸಲ್ಟ್ ಬರಬಹುದು ಎಂದು ನಗುಮುಖದಿಂದ ಹೇಳಿರಿ.

ಹೀಗೆ ಮಾಡುವುದರಿಂದ ಖಂಡಿತ ನಿಮ್ಮ ಮಕ್ಕಳಿಗೆ ನಾವು ಎಷ್ಟೇ ತಪ್ಪುಗಳನ್ನು ಮಾಡುತ್ತಿದ್ದರೂ, ಸರಿಯಾಗಿ ವಿದ್ಯಾಭ್ಯಾಸದ ಕಡೆ ಗಮನ ಹರಿಸದಿದ್ದರೂ, ನಮ್ಮ ಬಗ್ಗೆ ಶಿಕ್ಷಕರ ಮುಂದೆ ಯಾವುದೇ ರೀತಿಯ ದೂರುಗಳನ್ನು ನೀಡಿ ನನ್ನ ಮನಸ್ಸಿಗೆ ನೋವುಂಟು ಮಾಡಲಿಲ್ಲ, ಇಂತಹ ಪೋಷಕರಿಗೆ ನಾನು ಸಹ ಯಾವುದೇ ರೀತಿಯ ಬೇಜಾರು ಮಾಡದೆ ನೋವು ಮಾಡದೆ ಅವರು ಹೇಳುವ ಒಳಿತು ಮಾತುಗಳನ್ನು ಕೇಳಬೇಕು. ಅವರ ನಿರೀಕ್ಷೆಯಂತೆ ಚೆನ್ನಾಗಿ ಓದಬೇಕು ಯಾವ ರೀತಿಯ ತಪ್ಪುಗಳನ್ನು ಮಾಡಬಾರದು ಎಂಬ ಒಳ್ಳೆಯ ಭಾವನೆಗಳನ್ನು ಬೆಳೆಸಿಕೊಂಡು ನಿಮ್ಮ ಬಗ್ಗೆ ಮೊದಲಿಗಿಂತಲೂ ಹೆಚ್ಚಿನ ಪ್ರೀತಿ ಗೌರವಗಳನ್ನು ಬೆಳೆಸಿಕೊಳ್ಳುವಲ್ಲಿ ಅನುಮಾನವಿಲ್ಲ.


Spread the love

Leave a Comment

error: Content is protected !!