ಮಕ್ಕಳಲ್ಲಿ ಸ್ವಾವಲಂಬನೆ ಸ್ವಂತಿಕೆ ಬೆಳೆಯಬೇಕು.
ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ ಮೇಲೆ ಐದು-ಆರನೇ ವಯಸ್ಸಿನಿಂದಲೇ ತಮ್ಮ ಬ್ಯಾಗು, ಪುಸ್ತಕ, ಬರವಣಿಗೆ ಸಾಮಗ್ರಿಗಳನ್ನು ತಾವೇ ಸರಿಯಾಗಿ ಜೋಡಿಸಿಕೊಳ್ಳುವ ಅಭ್ಯಾಸ ಕಲಿಸಿ. ಆದಷ್ಟು ರಾತ್ರಿ ಮಲಗುವ ಮುನ್ನವೇ ಶಿಕ್ಷಕರು ಹೇಳಿದ ಹೋಂವರ್ಕ್, ಪ್ರಾಜೆಕ್ಟ್ ವರ್ಕ್, ಇತರೆ ಶಾಲೆಗೆ ಸಂಬಂಧಿಸಿದ ಕೆಲಸಗಳನ್ನು ಪೂರ್ತಿ ಮಾಡಿಕೊಳ್ಳಲು ತಿಳಿಸಿ. ಇಲ್ಲವಾದರೆ ಬೆಳಗ್ಗೆ ಶಾಲೆಗೆ ಹೊರಡುವ ಮುನ್ನ ನಿಮಗೂ ನಿಮ್ಮ ಮಕ್ಕಳಿಗೂ ಗಡಿಬಿಡಿ ಆಗುವುದು.
ಹಾಗೆಯೇ ರಜಾ ದಿನಗಳಲ್ಲಿ ಅಂದರೆ ಶನಿವಾರ ಭಾನುವಾರಗಳ ದಿನ, ಮಕ್ಕಳು ತಮ್ಮ ಕೋಣೆ ಕಪಾಟುಗಳಲ್ಲಿರುವ ವಸ್ತುಗಳನ್ನು ಪುಸ್ತಕಗಳನ್ನು ನೀಟಾಗಿ ಜೋಡಿಸಿಕೊಳ್ಳಲು ಕಲಿಸಿರಿ. ತಮ್ಮ ಶೂ, ಸಾಕ್ಸ್ ಸ್ವಚ್ಛತೆಯನ್ನು ಸಹ ಅವರೇ ಮಾಡಿಕೊಳ್ಳುವ ರೂಢಿ ಮಾಡಿದರೆ ಒಳ್ಳೆಯದು. ಮನೆಯಲ್ಲಿ ಕೆಲಸ ಮಾಡಲು ಮನೆ ಕೆಲಸದವರು ಇದ್ದರೂ ಸಹ, ಸಂದರ್ಭ ಬಂದಾಗ ತಮ್ಮ ಬಟ್ಟೆ ತೊಳೆಯುವ ಮತ್ತು ಇಸ್ತ್ರೀ ಮಾಡುವ ಕೆಲಸಗಳನ್ನು ಕಲಿತರೆ ಒಳ್ಳೆಯದು. ಕೊನೆಯದಾಗಿ ಮಕ್ಕಳಿಗೆ ಪ್ರತಿ ವಿಷಯಕ್ಕೂ ಅಂದರೆ ವಿದ್ಯಾಭ್ಯಾಸದ ವಿಷಯವಾಗಲಿ ಪ್ರತಿನಿತ್ಯ ಮಾಡಿಕೊಳ್ಳುವ ಕೆಲಸ ಕಾರ್ಯಗಳೇ ಆಗಿರಲಿ, ರಜಾ ದಿನಗಳಂದು ಮಾಡಿಕೊಳ್ಳುವ ಕೆಲಸ ಕಾರ್ಯಗಳೇ ಆಗಲಿ, ಅಥವಾ ಇನ್ಯಾವುದೇ ಕೆಲಸಗಳಾಗಿರಲಿ ಪ್ರತಿಯೊಂದು ವಿಷಯಕ್ಕೂ ಈ ದಿನ ಇಂತಹ ಕೆಲಸ ಈ ವೇಳೆಯಲ್ಲಿ ಇಂತಹ ಕೆಲಸ ರಜಾ ದಿನಗಳಲ್ಲಿ ಇಂತಹ ಕೆಲಸ ಎಂದು ತಮ್ಮ ಓದುವ ಕೋಣೆಗಳಲ್ಲಿ, ಸಣ್ಣ ಸ್ಲಿಪ್‌ಗಳಲ್ಲಿ ಬರೆದುಕೊಂಡು ಕಣ್ಣಿಗೆ ಕಾಣಿಸುವ ಹಾಗೆ ಗೋಡೆಗೆ ಅಥವಾ ಅನುಕೂಲವಿರುವ ಜಾಗದಲ್ಲಿ ಇಟ್ಟುಕೊಂಡರೆ ಸರಿಯಾಗಿ ನೆನಪು ಮಾಡಿಕೊಂಡು ಆಯಾ ದಿನದಲ್ಲಿ ಆಯ ವೇಳೆಯಲ್ಲಿ ಕೆಲಸವನ್ನು ಮುಗಿಸಿಕೊಳ್ಳುವ ಸಾಧ್ಯತೆ ತೀರಾ ಹೆಚ್ಚು ಎಂಬುದನ್ನು ತಿಳಿಸಿ ಹೇಳಿರಿ.
ಅತಿಥಿಗಳ ಮನೆಯಲ್ಲಿ ಮಕ್ಕಳ ವರ್ತನೆ Behavior of children in guest house.
ನಾವು ನಮ್ಮ ಮಕ್ಕಳೊಂದಿಗೆ ಅತಿಥಿಗಳ ಮನೆಗೆ ನೆಂಟರ ಮನೆಗೆ ಅಥವಾ ಯಾವುದಾದರೂ ಸಭೆ ಸಮಾರಂಭಗಳಿಗೆ ಪದೇಪದೇ ಹೋಗುತ್ತಲೇ ಇರುತ್ತೇವೆ ಇಂತಹ ಸಂದರ್ಭದಲ್ಲಿ ನಾವು ಮನೆಯಲ್ಲಿಯೇ ಮಕ್ಕಳಿಗೆ ನೀನು ಬೇರೆಯವರ ಮನೆಗೆ ಹೋದಾಗ ನೋಡಿದವಸ್ತುಗಳನ್ನೆಲ್ಲ ತೆಗೆದುಕೊಳ್ಳುವುದು ಗಲಾಟೆ ಮಾಡುವುದು ಪದೇಪದೇ ತಿನ್ನಲು ಕೇಳುವುದು ಮಾಡಬಾರದು ಹಾಗೆಯೇ ಜೋರಾಗಿ ಮಾತನಾಡುವುದು ಮಾಡಬಾರದು ಎಂದು ತಿಳಿಸಿ ಹೇಳಿರಿ. ಹಾಗಂತ ತುಂಬಾ ಕಟ್ಟುಪಾಡುಗಳನ್ನು ಹಾಕಿ ನಿಮ್ಮ ಮಕ್ಕಳನ್ನು ಕಟ್ಟಿ ಹಾಕಬೇಡಿ. ಎಲ್ಲದಕ್ಕೂ ಇತಿ-ಮಿತಿಗಳಿರಲಿ. ಕೆಲವು ಪೋಷಕರು ಮಕ್ಕಳನ್ನು ತುಂಬಾ ಬೇಕಾಬಿಟ್ಟಿಯಾಗಿ ಬಿಟ್ಟಿರುತ್ತಾರೆ, ಆ ಮಕ್ಕಳು ಮಾಡುವ ವರ್ತನೆಗೆ ಎಲ್ಲರಿಗೂ ಕಿರಿಕಿರಿಯಾಗುವುದು.
ತುಂಬಾ ಮಕ್ಕಳು ಯಾರ ಮನೆಗೆ ಹೋದರು ಬೇರೆಯವರ ಫೋನುಗಳನ್ನು ತೆಗೆದುಕೊಂಡು ಗೇಮ್‌ಗಳನ್ನು ಆಡುವುದು, ಅಥವಾ ಏನಾದರೂ ಮಾಡುತ್ತಿರುತ್ತಾರೆ ದಯಮಾಡಿ ಇದಕ್ಕೆ ಕಡಿವಾಣ ಹಾಕಿರಿ. ಒಟ್ಟಿನಲ್ಲಿ ಯಾಕಾದರೂ ಈ ಮಕ್ಕಳು ನಮ್ಮ ಮನೆಗೆ ಬಂದಿರುವರು ಬೇಗ ಹೋದರೆ ಸಾಕು ಅನ್ನುವ ಅಭಿಪ್ರಾಯ ಬರದೆ ಇರುವ ಹಾಗೆ ನೋಡಿಕೊಳ್ಳಿ.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸುಳ್ಳುಗಳನ್ನು ಸಹ ಹೇಳುವುದನ್ನು ರೂಡಿಸಿಕೊಂಡಿರುತ್ತಾರೆ. ಆದ ಕಾರಣ ನಾವು ಮಕ್ಕಳಿಗೆ ಶಿಕ್ಷೆ ನೀಡುವುದನ್ನು ಕಡಿಮೆ ಮಾಡುವುದು ಒಳಿತು ಹಾಗೆಯೇ ಮಕ್ಕಳು ತಪ್ಪು ಮಾಡಿದಾಗ ತಂದೆ ತಾಯಿ ಅಥವಾ ಯಾರೇ ಆಗಿರಲಿ ತಪ್ಪು ಮಾಡಿದ್ದು ಗೊತ್ತಾದ ಮೇಲು ಅವರ ಪರವಾಗಿ ಮಾತನಾಡುವುದು ಸಹ ತಪ್ಪೇ. ಇದರಿಂದಾಗಿ ಮಕ್ಕಳಿಗೆ ನಾವು ತಪ್ಪು ಮಾಡಿದರೂ ಸಹ ನಮ್ಮ ಪರವಾಗಿ ನಮ್ಮ ತಂದೆ ತಾಯಿ ಅಥವಾ ಬೇರೆಯವರು ಇದ್ದಾರೆಂದು ತಪ್ಪುಗಳನ್ನು ಮಾಡಲು ಹಿಂಜರಿಯುವುದು ಇಲ್ಲ. ಆದ ಕಾರಣ ನಾವು ಅತಿಯಾದ ಶಿಕ್ಷೆ ನೀಡದೆ ಅತಿಯಾದ ಪ್ರೀತಿಯಿಂದ ಪರವಹಿಸಿ ಮಾತನಾಡದೆ ಸಂದರ್ಭಕ್ಕೆ ಅನುಗುಣವಾಗಿ ಮಕ್ಕಳು ಮಾಡುವ ತಪ್ಪುಗಳನ್ನು ಬುದ್ಧಿವಂತಿಕೆಯಿಂದ ಸರಿ ಪಡಿಸುವುದು ಒಳಿತು.
ಹೆತ್ತವರ ಆಶೀರ್ವಾದ ಮಕ್ಕಳಿಗೆ ಶ್ರೀರಕ್ಷೆ
ಒಮ್ಮೆ ಅಪ್ಪ ಮಗ ಸಮುದ್ರಯಾನ ಮಾಡ್ತಾ ಇದ್ರು. ದೋಣಿ ಮುಳುಗೋ ಪರಿಸ್ಥಿತಿ ಬಂತು ಹಾಗೂ ಹೀಗೂ ಒಂದು ಸಣ್ಣ ದ್ವೀಪ ತಲುಪುತ್ತಾರೆ. ಈ ಪರಿಸ್ಥಿತಿಯಲ್ಲಿ ದೇವರೇ ನಮ್ಮನ್ನು ಕಾಪಾಡಬೇಕು ಎಂದು ತಂದೆ ಮಗನಿಗೆ ಹೇಳುತ್ತಾ, ನೀನು ಇಲ್ಲೇ ಎಲ್ಲಾದರೂ ಕುಳಿತುಕೊಂಡು ದೇವರ ಪ್ರಾರ್ಥನೆ ಮಾಡು, ನಾನು ಕೂಡ ಪ್ರಾರ್ಥನೆ ಮಾಡ್ತೀನಿ ಅಂದರು. ಮಗ ದ್ವೀಪದ ಸುತ್ತ ನೋಡಿದ ಅಲ್ಲಿ ನರಪಿಳ್ಳೆ ಇರಲಿ, ಒಂದು ಪ್ರಾಣಿ, ಪಕ್ಷಿಗಳು ಕಾಣಲಿಲ್ಲ .ಅವನಿಗೆ ಹಸಿವಾಗುತ್ತಿತ್ತು . ಕಣ್ಣು ಮುಚ್ಚಿ ಕೈಮುಗಿದು ಆಕಾಶ ನೋಡುತ್ತಾ, ಭಗವಂತ ತಿನ್ನೋದಿಕ್ಕೆ ಒಂದೆರಡು ಹಣ್ಣುಗಳನ್ನಾದರೂ ಕೊಡು ಎಂದು ಪ್ರಾರ್ಥಿಸಿ ಕಣ್ಣು ಬಿಟ್ಟು ನೋಡುತ್ತಾನೆ.
ಏನಾಶ್ಚರ್ಯ ಅವನ ಮುಂದೆ ದೊಡ್ಡ ಹಣ್ಣಿನ ಮರ ಕಂಡಿತು. ಹಣ್ಣು ಕಿತ್ತುಕೊಂಡು ತಿಂದ ಸ್ವಲ್ಪ ಸಮಾಧಾನವಾಯಿತು. ಮತ್ತೆ ಕೈ ಮುಗಿದು ಆಕಾಶದತ್ತ ನೋಡಿ ದೇವಾ ಚಳಿ ಆಗ್ತಾ ಇದೆ ನನಗೊಂದು ಮಲಗೊದಕ್ಕೆ ಗುಡಿಸಲಾದರು ಕೊಡು ಎಂದ ಕಣ್ಣು ಬಿಟ್ಟ ನೋಡಿದರೆ ಅಚ್ಚುಕಟ್ಟಾದ ಗುಡಿಸಲು ಕಂಡಿತು. ಅವನ ಆನಂದಕ್ಕೆ ಸಾಟಿಯೇ ಇಲ್ಲ. ಈಗ ಆ ಹುಡುಗನಿಗೆ ಅನ್ನಿಸಿತು. ನನ್ನ ಜೊತೆ ಒಬ್ಬ ಹುಡುಗಿ ಇದ್ದರೆ ಎಷ್ಟು ಚೆನ್ನಾಗಿರುತ್ತೆ ಅಂತ ಅಂದುಕೊಂಡು, ಮತ್ತೆ ಆಕಾಶದತ್ತ ನೋಡಿ ಹೇ ಭಗವಂತ ಒಳಗಿರಲು ಗುಡಿಸಲು ಕೊಟ್ಟೆ ಒಂದು ಸುಂದರವಾದ ಗೆಳತಿಯನ್ನು ಕೊಡು ಎಂದ, ಇದೇನು ಆಶ್ಚರ್ಯ ಎನ್ನುವಂತೆ, ಸುಂದರವಾದ ಹುಡುಗಿಯೂ ಬಂದಳು.
ಅವನಿಗೆ ಖುಷಿಯಾಯಿತು ಮತ್ತೆ ಕಣ್ಣು ಮುಚ್ಚಿ ಭಗವಂತ ಇಷ್ಟೆಲ್ಲ ಕೊಟ್ಟಿರುವೆ ಒಂದು ಪುಟ್ಟ ದೋಣಿಯನ್ನು ಕೊಟ್ಟುಬಿಡು, ನನ್ನ ಹೆಂಡತಿ ಜೊತೆ ನಮ್ಮ ಊರು ಸೇರಿಕೊಳ್ಳುತ್ತೇನೆ ಎಂದ. ಹೀಗಂದಿದ್ದೆ ತಡ ನೋಡುತ್ತಾನೆ ಗಟ್ಟಿಮುಟ್ಟಾದ ಪುಟ್ಟ ದೋಣಿ ಕಂಡೀತು. ಸರಿ, ಹೆಂಡತಿಯನ್ನು ಕರೆದುಕೊಂಡು ದೋಣಿಯಲ್ಲಿ ಹೊರಡಲು ತಯಾರಾದ ಆಗ ಒಂದು ಧ್ವನಿ ಕೇಳಿಸಿತು. ಏನಪ್ಪಾ ಎಲ್ಲಾ ನಿನಗೆ ಸಿಕ್ಕಿತು. ನಿನ್ನ ತಂದೆಯನ್ನೇ ಬಿಟ್ಟು ಹೊರಟೆಯಾ?ಎಂದು. ಮಗ ಹೇಳ್ದ ನಮ್ಮಪ್ಪ ಪ್ರಾರ್ಥನೆ ಮಾಡೋಕೆ ನನಗೆ ಹೇಳಿದ ಅವನೇನು ಮಾಡ್ಲೇ ಇಲ್ಲ ಇವೆಲ್ಲಾ ನನ್ನ ಪ್ರಾರ್ಥನೆಯ ಪುಣ್ಯದಿಂದ ಬಂದಿದ್ದು. ಇದರಲ್ಲಿ ನಮ್ಮ ಅಪ್ಪನ ಪುಣ್ಯ ಏನು ಇಲ್ಲ ದೇವರು ನನ್ನ ಪ್ರಾರ್ಥನೆಯನ್ನು ಮಾತ್ರ ಕೇಳಿದ್ದು ಎಂದನು.
ಅಶರೀರವಾಣಿ ನುಡಿಯಿತು. ನಿನ್ನ ತಂದೆ ಪ್ರಾರ್ಥನೆ ಮಾಡಿ, ದೇವರನ್ನು ಕೇಳಿದ್ದು ಏನೆಂದು ನಿನಗೆ ಗೊತ್ತಾ? ಅವರು ಕೇಳಿದ್ದು ಭಗವಂತ, ನನ್ನ ಮಗ ಕೇಳಿದ್ದೆಲ್ಲವನ್ನು ಕೊಡು ಎಂದು ಪ್ರಾರ್ಥನೆ ಮಾಡಿದ್ದರು. ಇದರ ತಾತ್ಪರ್ಯ ಇಷ್ಟೇ ಪ್ರತಿಯೊಬ್ಬ ತಂದೆ ತಾಯಿ ತಮಗಿಲ್ಲದಿದ್ದರೂ ಪರವಾಗಿಲ್ಲ, ನಮ್ಮ ಮಕ್ಕಳು ಚೆನ್ನಾಗಿರಲಿ ಎಂದು ಆಸೆ ಪಡುವುದು ತಂದೆ ತಾಯಿ ಮಾತ್ರ.
ಮಾತಾ ಚ ಪಾರ್ವತಿದೇವೀ ಪಿತಾ ದೇವು ಮಹೇಶ್ವರ :
ಭಾಂದವಾ: ಶಿವಭಕ್ತಾಶ್ಚ ಸ್ವದೇಶೋ ಭುವನತ್ರಯಮ್!!
ನಮಗೆ ತಾಯಿ ಪಾರ್ವತಿ ದೇವಿ ತಂದೆ ದೇವನಾದ ಮಹೇಶ್ವರ ಶಿವಭಕ್ತರು ನಮಗೆ ಬಾಂಧವರು, ಮೂರು ಲೋಕಗಳೂ ನಮ್ಮ ಸ್ವದೇಶ.