ಪೂಜ್ಯರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಉಪ್ಪಾರಹಟ್ಟಿ ಎಂಬ ಪುಟ್ಟಗ್ರಾಮದಲ್ಲಿ ದಿನಾಂಕ 25-06-1953ರಂದು ಶ್ರೀ ಸಣ್ಣಸಿದ್ದಪ್ಪ ಸೌ॥ ಗಂಗಮ್ಮಪುಣ್ಯ ದಂಪತಿಗಳ ಸುಪುತ್ರ ‘ಮಲ್ಲಿಕಾರ್ಜುನ’ ರಾಗಿ ಜನಿಸಿದರು. ಪೂಜ್ಯರ ಕೆಲವು ಬಾಲಲೀಲೆಗಳು ಶ್ರೀ ರಾಮಕೃಷ್ಣ ಪರಮಹಂಸರ ಬಾಲಲೀಲೆಗಳನ್ನೇ ಹೋಲುತ್ತವೆ! ಪೂಜ್ಯರ ಬಾಲ್ಯ ಸ್ನೇಹಿತರೇ ತಿಳಿಸುವಂತೆ ಅವರು ಬಾಲ್ಯದಲ್ಲಿ ಎಲ್ಲ ಹುಡುಗರಂತೆಯೇ ಆಟಗಳನ್ನಾಡುತ್ತಿದ್ದರೂ ಅವರಲ್ಲಿ ಕೆಲವು ವಿಶೇಷತೆಗಳಿದ್ದವು. ಅವರಲ್ಲಿ ವಿಶೇಷ ಖಳೆ, ವಿಲಕ್ಷಣ ಸ್ವಭಾವ, ವಿಶೇಷ ಪ್ರತಿಭೆಗಳಿದ್ದವು. ಅವರು ತಾವು ನೋಡಿದ ಯಾವುದಾದರೂ ನಾಟಕದ ಪ್ರಸಂಗವನ್ನು ವಿವರಿಸತೊಡಗಿದರೆ, ಆ ಪಾತ್ರಗಳೇ ಮೂರ್ತರೂಪ ತಾಳಿ ನಿಂತಿವೆ ಎಂಬಂತೆ ಆ ಪಾತ್ರಗಳಿಗೆಲ್ಲಾ ಜೀವ ತುಂಬುತ್ತಿದ್ದರು. ಬಾಲ್ಯದಿಂದಲೇ ಅವರಿಗೆ ಭಜನೆ, ನಾಮಸ್ಮರಣೆ, ಗುರುಪೂಜೆ, ಸತ್ಸಂಗಗಳಲ್ಲಿ ಆಸಕ್ತಿ. ಪ್ರಾಪಂಚಿಕ ವಿಷಯಗಳಲ್ಲಿನ ಅವರ ಆಸಕ್ತಿ ಬಹುಕಡಿಮೆ. ಆಗಿನಿಂದಲೂ ಅವರದು ಒಂದು ರೀತಿಯಲ್ಲಿ ಅವಧೂತಸ್ಥಿತಿಯೇ, ದೇಹಧಾರಣೆ ಮಾಡಿರುವುದರಿಂದಾಗಿ ತಮ್ಮ ಕರ್ತವ್ಯಗಳನ್ನುಮಾತ್ರ ಅಚ್ಚುಕಟ್ಟಾಗಿಯೇ ನಿರ್ವಹಿಸುತ್ತಿದ್ದರು.
ಪಿತೃವಾಕ್ಯ ಪರಿಪಾಲನೆಯಲ್ಲಿ ಮತ್ತು ಭ್ರಾತೃಪ್ರೇಮದಲ್ಲಿ ಅವರು ಶ್ರೀರಾಮಚಂದ್ರಪ್ರಭುವಿಗೆ ಸಮಾನರು! ತಂಗಿಗೆ ಪರಮ ಪ್ರೇಮಸ್ವರೂಪಿ ಅಣ್ಣನಾಗಿದ್ದರು.ಮುಂದೆ ಮಾತೆ ಸೌ॥ ಯಲ್ಲಮ್ಮನವರನ್ನು ವರಿಸಿದ ಬಳಿಕ ಅವರೊಂದಿಗೆ ಪರಿಶುದ್ಧ ಪ್ರೇಮದಾಂಪತ್ಯ ನಡೆಸುತ್ತಾ ಬಂದರು. ಪುತ್ರ ಕನ್ನೇಶ, ಪುತ್ರಿ ಸುಮತಿಯರಿಗೆ ವಾತ್ಸಲ್ಯಮಯೀ ತಂದೆಯಾದರು. ತಮ್ಮ ಆ ನಿರ್ಮಲಪ್ರೇಮವನ್ನು ತಮ್ಮ ಕುಟುಂಬಕ್ಕಷ್ಟೇಮೀಸಲಿರಿಸದೆ ತಮ್ಮ ಬಳಿಸಾರಿ ಬಂದ ಭಕ್ತರೆಲ್ಲರ ಮೇಲೂ ಹರಿಸಿದರು- ಎಷ್ಟಾದರೂ ಅವರು ವಿಶ್ವಕುಟುಂಬಿಯಲ್ಲವೇ?!
ಮುಗ್ಧತೆಯ ಸಾಕಾರವಾಗಿದ್ದ ಅವರನ್ನು “ಮುಗ್ಧಮಲ್ಲಣ್ಣ” ಎಂದೇ ಕರೆಯಲಾಗುತ್ತಿತ್ತು. ಚಂದನವನ್ನು ಬಚ್ಚಿಟ್ಟರೂ ಅದರ ಸುಗಂಧವನ್ನು ಬಚ್ಚಿಡಲಾದೀತೆ? ತಮ್ಮ ಜಮೀನಿನ ಪಕ್ಕದಲ್ಲಿ ಪಾಳುಬಿದ್ದಿದ್ದ ಶ್ರೀ ಕನ್ನೇಶ್ವರಸ್ವಾಮಿ ದೇವಾಲಯದಲ್ಲಿಅವರು ಮಾಡಿದ ಗುಪ್ತಸಾಧನೆ, ತಪೋಪ್ರಭಾವದಿಂದಾಗಿ ಅವರ ಆಧ್ಯಾತ್ಮಿಕ ಪ್ರಭೆಹೆಚ್ಚುತ್ತಲೇ ಸಾಗಿತು. ಅವರ ಅಧ್ಯಾತ್ಮಸಾಧನಾ ಕಂಪು ಎಲ್ಲೆಡೆ ಪಸರಿಸತೊಡಗಿತು.
ಅಪ್ಪಾಜಿಯ ಜೀವನ
ಅಪ್ಪಾಜಿ ಮತ್ತು ಅವರ ಕುಟುಂಬ ತೀವ್ರ ಬಡತನದಲ್ಲಿದ್ದು, ಬಹುತೇಕ ದುರವಸ್ಥೆಯಲ್ಲಿದ್ದರು. ಆದರೆ ಅಪ್ಪಾಜಿ ಎಂದಿಗೂ ಕನಸಿನಲ್ಲಾದರೂ ಅಥವಾ ಜಾಗೃತ ಸ್ಥಿತಿಯಲ್ಲಾದರೂ ತಮ್ಮ ಕುಟುಂಬದ ಬಡತನ ನಿವಾರಣೆಗೆ ಅಥವಾ ದುರ್ಬಾಗ್ಯ ನಿವಾರಣೆಗೆ ದೇವರನ್ನು ಪ್ರಾರ್ಥಿಸಲಿಲ್ಲ.
ಅಪ್ಪಾಜಿಯ ಹೊಲದ ಸಮೀಪ ಹಲವಾರು ಶತಮಾನಗಳಷ್ಟು ಹಳೆಯದಾದ, ಬಹುತೇಕ ಜರ್ಜರಿತ ಸ್ಥಿತಿಯಲ್ಲಿದ್ದ ಶ್ರೀ ಶಿವನ ದೇವಸ್ಥಾನವೊಂದು ಇತ್ತು. ಆ ದೇವಾಲಯ ಮತ್ತು ಅದರ ಸುತ್ತಮುತ್ತಲ ಪ್ರದೇಶವೇ ಅಪ್ಪಾಜಿಯ ಆತ್ಮಿಕ ಸಾಧನಾ ಸ್ಥಳವಾಯಿತು. ಅವರು ಬೆಳೆಯುತ್ತಿದ್ದಂತೆ ದೇವರು ವಿವಿಧ ಮಾನವ ರೂಪಗಳಲ್ಲಿ ಅಪ್ಪಾಜಿಯ ಮುಂದೆ ಪ್ರತ್ಯಕ್ಷನಾಗಿ, ಅಪಾರ ಕೃಪೆ ಮತ್ತು ಅನುಗ್ರಹಗಳನ್ನು ನೀಡಿದ ಅನೇಕ ಘಟನೆಗಳು ನಡೆದವು. ಈ ಅವಧಿಯಲ್ಲಿ ಅಪ್ಪಾಜಿ ಅನೇಕ ಭಕ್ತಿಗೀತೆಗಳನ್ನು ರಚಿಸಿದ್ದು, ಅವುಗಳಲ್ಲಿ ದೇವರ ಮೇಲಿನ ಅವರ ಭಕ್ತಿ ಮತ್ತು ಸಂಪೂರ್ಣ ಶರಣಾಗತಿಯ ಭಾವನೆ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಸತ್ಯದ ಪರಮ ಜ್ಞಾನ ಕುರಿತು ಅವರಿಗೆ ಇದ್ದ ಸ್ಪಷ್ಟತೆ ಅವರ ಬರಹಗಳಲ್ಲಿ ಚೆನ್ನಾಗಿ ಕಾಣಿಸಿಕೊಳ್ಳುತ್ತದೆ. ಅವು ಭಕ್ತರಿಗೆ ಆಳವಾದ ಬೋಧನೆ ನೀಡುವಂತೆಯೂ, ಪ್ರಕಾಶಮಾನವಾಗಿಯೂ ಇರುತ್ತವೆ.
ಶ್ರೀ ಹನುಮಂತಾಜಿಯವರು ಅಪ್ಪಾಜಿಯ ಗುರುವಾಗಿದ್ದರು. ವೃತ್ತಿಯಿಂದ ಅವರು ಸಾಮಾನ್ಯ ಕಲ್ಲು ಕಾರ್ಮಿಕರಾಗಿದ್ದು, ಆರ್ಥಿಕವಾಗಿ ತುಂಬಾ ಬಡವರಾಗಿದ್ದರು. ಆದರೆ ಅವರು ಅತ್ಯುನ್ನತ ಮಟ್ಟದ ದೇವಾನುಭವ ಪಡೆದ ಮಹಾತ್ಮರಾಗಿದ್ದರು. ಅವರ ಕುಟುಂಬದವರಿಗೂ ಸಹ ಅವರು ದೇವಮಾನವ ಎಂಬುದು ತಿಳಿದಿರಲಿಲ್ಲ. ಅಪ್ಪಾಜಿಯ ಆಳವಾದ ಭಕ್ತಿಯನ್ನು ಅರಿತಿದ್ದ ಹನುಮಂತಾಜಿಯವರು, ಸಾಧ್ಯವಾದಷ್ಟು ಬೇಗ ಅವರನ್ನು ಸರಿಯಾದ ದೀಕ್ಷೆಯ ಮೂಲಕ ಆತ್ಮಿಕ ಮಾರ್ಗದಲ್ಲಿ ನಡೆಸಲು ಬಯಸಿದರು. ಈ ಉದ್ದೇಶಕ್ಕಾಗಿ ಅವರು ಎರಡು ವರ್ಷಗಳ ಕಾಲ ನಿರಂತರವಾಗಿ ಅಪ್ಪಾಜಿಯನ್ನು ದೀಕ್ಷೆಗೆ ಆಹ್ವಾನಿಸುತ್ತಿದ್ದರು. ಪ್ರಾರಂಭದಲ್ಲಿ ಅಪ್ಪಾಜಿ ತಮ್ಮ ಗುರುಗಳ ಕರೆಯನ್ನು ಹೆಚ್ಚು ಗಮನಿಸಲಿಲ್ಲ. ಅಪ್ಪಾಜಿಯನ್ನು ಭೇಟಿಯಾಗಲು ಮಾತ್ರವೇ ಅವರ ಗುರು ಶ್ರೀ ಶಿವನ ದೇವಸ್ಥಾನಕ್ಕೆ ಬರುತ್ತಿದ್ದರು. ಆ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ‘ಕಣ್ಣೇಶ್ವರ ಲಿಂಗ’ ಎಂದು ಕರೆಯಲಾಗುತ್ತದೆ.
ಅನೇಕ ತಿಂಗಳ ಸಂಪರ್ಕ ಮತ್ತು ಸಂವಾದದ ನಂತರ ಅಪ್ಪಾಜಿಗೆ ತಮ್ಮ ಗುರುಗಳ ಮೇಲೆ ಅಪಾರ ಪ್ರೀತಿ ಬೆಳೆದಿತು. ನಂತರ ಒಂದು ದಿನ, ಗುರುಗಳು ಎಲ್ಲವೂ ಬ್ರಹ್ಮನೇ ಆಗಿದ್ದು, ಸೃಷ್ಟಿಯೆಲ್ಲವೂ ದೇವರೇ ಎಂಬ ಅರ್ಥವನ್ನು ವಿವರಿಸುವ ಒಂದು ಸುಂದರ ಸಂಸ್ಕೃತ ಶ್ಲೋಕವನ್ನು ಅಪ್ಪಾಜಿಗೆ ಬೋಧಿಸಿದರು. ಆ ಶ್ಲೋಕದ ಅರ್ಥವನ್ನು ಸಂಪೂರ್ಣ ಅರಿತ ಸ್ಥಿತಿಯಲ್ಲಿ ತಮ್ಮ ಆರಾಧ್ಯ ದೇವರಾದ ಕಣ್ಣೇಶ್ವರನನ್ನು ಪೂಜಿಸಲು ಹೇಳಿದರು. ಶ್ಲೋಕದ ಅರ್ಥವನ್ನು ಧ್ಯಾನಿಸುತ್ತಿದ್ದಂತೆ, ಅಪ್ಪಾಜಿ ಸಹಜವಾಗಿಯೇ ಆಳವಾದ ಆನಂದಾವಸ್ಥೆಗೆ ಪ್ರವೇಶಿಸಿದರು. ಆ ಸ್ಥಿತಿಯಲ್ಲಿ ಅವರು ದೇವರೊಂದಿಗೆ ತಮಗಿರುವ ಏಕತ್ವವನ್ನು ಅನುಭವಿಸಿದರು. ಈ ಅನುಭವದಿಂದ ತಮ್ಮ ಗುರುಗಳ ಮಹತ್ವ ಅಪ್ಪಾಜಿಗೆ ಸಂಪೂರ್ಣವಾಗಿ ತಿಳಿಯಿತು.
ಅದರ ನಂತರ ಗುರುಗಳ ಮೇಲಿನ ಅತ್ಯುನ್ನತ ಗೌರವ ಮತ್ತು ಭಕ್ತಿಭಾವ ಅಪ್ಪಾಜಿಯಲ್ಲಿ ಮೂಡಿತು. ಇದರಿಂದ ಅವರು ಗುರುಗಳಿಂದ ದೀಕ್ಷೆ ಪಡೆಯಲು ಮುಂದಾದರು. ದೀಕ್ಷೆಯ ಸಂದರ್ಭದಲ್ಲಿ ತಮ್ಮ ಅನುಭವವನ್ನು ಅಪ್ಪಾಜಿ ಹೀಗೆ ವಿವರಿಸುತ್ತಾರೆ:
“ಗುರು ಹನುಮಂತಾಜಿಯವರು ನನ್ನ ತಲೆಯ ಮೇಲೆ ಕೈ ಇಟ್ಟ ಕ್ಷಣವೇ, ಸಂಪೂರ್ಣ ಬ್ರಹ್ಮಾಂಡವೇ ಅಗ್ನಿಯಲ್ಲಿ ದಹಿಸುತ್ತಿರುವಂತೆ, ಆಕಾಶವನ್ನು ತಲುಪುವ ಜ್ವಾಲೆಗಳು ಹೊತ್ತಿಕೊಂಡಂತೆ ಅನುಭವವಾಯಿತು. ಅನೇಕ ನಕ್ಷತ್ರಗಳು, ಲಕ್ಷಾಂತರ ಸೂರ್ಯರು, ಚಂದ್ರರು ಹಾಗೂ ನಿರಂತರ ಮಿಂಚಿನ ಕಿರಣಗಳು ಅಪೂರ್ವ ಪ್ರಕಾಶದಿಂದ ಸಂಪೂರ್ಣ ಆಕಾಶವನ್ನು ಬೆಳಗಿಸಿದವು. ಅದು ಅತ್ಯಂತ ದೀಪ್ತಿಮಯ ಮತ್ತು ಅದ್ಭುತವಾಗಿತ್ತು. ನಾನು ಅಷ್ಟು ಅಪರೂಪದ ಆನಂದದಲ್ಲಿ ಮುಳುಗಿದ್ದೆನೆಂದರೆ, ಮತ್ತೆ ಭೂಮಿಗೆ ಹಿಂದಿರುಗಬಾರದೆನಿಸಿತು. ಆಗ ನನ್ನ ಗುರು ಹೇಳಿದರು: ‘ಇವತ್ತಿಗೆ ಇಷ್ಟೇ ಸಾಕು’ ಎಂದು, ನನ್ನ ಮೇಲೆ ತೀರ್ಥವನ್ನು ಸಿಂಪಡಿಸಿದರು. ನಿಧಾನವಾಗಿ ನಾನು ಸಾಮಾನ್ಯ ಚೇತನಾವಸ್ಥೆಗೆ ಬಂದೆ. ಗುರುಗಳು ನನ್ನನ್ನು ಆಶೀರ್ವದಿಸಿ, ‘ಬಹಳ ಚೆನ್ನಾಗಿದೆ, ನಿನ್ನ ಜೀವನ ಪವಿತ್ರ ಮತ್ತು ಧನ್ಯವಾಗಿದೆ’ ಎಂದು ಹೇಳಿದರು.”
ಶ್ರೀ ಸತ್ ಉಪಾಸಿ
ದೇವರ ಆದೇಶದಂತೆ ಗುರು ಹನುಮಂತಾಜಿಯವರು ಅಪ್ಪಾಜಿಗೆ ಶ್ರೀ ಸತ್ ಉಪಾಸಿ ಎಂಬ ನಾಮವನ್ನು ನೀಡಿ, ತಮ್ಮ ಅನುಯಾಯಿಗಳನ್ನು ದೇವರ ಕಡೆಗೆ ನಡೆಸುವಂತೆ ಆಜ್ಞಾಪಿಸಿದರು.
ಚಳ್ಳಕೆರೆಯ ಪ್ರಶಾಂತ್ ಕಾಫೀವರ್ಕ್ಸ್ನ ಶ್ರೀ ಗುಂಡೂರಾಯರ ಮನೆಯಕಾಫೀ ಗೋದಾಮಿನಲ್ಲಿ ಕಾಫೀಬೀಜದ ಮೂಟೆಯ ಮೇಲೆ ನಾಯಿಯೊಂದನ್ನು ತಬ್ಬಿಕೊಂಡು ಮಲಗಿದರೂ ಸಹ ಅವರ ಆಧ್ಯಾತ್ಮಿಕಪ್ರಭೆ ದಿವ್ಯಾತ್ಮರನ್ನು ಆಕರ್ಷಿಸದೇ ಬಿಡಲಿಲ್ಲ! ಅಂತಃ ಸಾಧನೆಯ ಫಲವಾಗಿ ತಮ್ಮ ಗುರುಗಳಾದ ಪೂಜ್ಯ ಶ್ರೀ ಹನುಮಂತಾಜಿಯವರಿಂದ ದಿನಾಂಕ 01-09-1994ರ ಗುರುವಾರ ರಾತ್ರಿ “ಶ್ರೀಸತ್ ಉಪಾಸಿ” ಎಂಬ ದಿವ್ಯ ನಾಮಧೇಯವನ್ನು ಪಡೆದರು. ಪೂಜ್ಯ ಶ್ರೀ ಶ್ರೀಧರಸ್ವಾಮಿಗಳು ಮತ್ತು ಪೂಜ್ಯ ಶ್ರೀ ಪ್ರಭಾಕರಸ್ವಾಮಿಗಳ ಅನುಗ್ರಹವನ್ನು ಪಡೆದರು.
ಕೇರಳದ ಪೂಜ್ಯ ಮಾತಾ ಅಮೃತಾನಂದಮಯೀಯವರ ಶಿಷ್ಯರಾದ ಪೂಜ್ಯಸ್ವಾಮಿ ಶ್ರೀ ಮನೀಷಾನಂದಜೀಯವರು ತಮ್ಮ ಸತ್ಸಂಗಗಳಲ್ಲಿ ಇಂದಿಗೂ ಕೆಲವು ಆತ್ಮಜ್ಞಾನಿಗಳು ಸದ್ದಿಲ್ಲದೇ ನಮ್ಮ ಮಧ್ಯದಲ್ಲಿಯೇ ಇದ್ದಾರೆ. ಚಳ್ಳಕೆರೆ ಬಳಿ “ಮಲ್ಲಣ್ಣ” ಎಂಬುವವರು ಗುರುಕೃಪೆಯಿಂದ ಆತ್ಮಜ್ಞಾನಿಗಳಾಗಿದ್ದಾರೆಂದು ತಿಳಿಸುತ್ತಿದ್ದರು. ಅದನ್ನುಕೇಳಿಸಿಕೊಂಡ ಅನೇಕರು ಅದನ್ನು ಆಲಿಸಿ ಮನಸ್ಸಿಗೆ ಹಾಕಿಕೊಂಡು ಆ ದಿವ್ಯಾತ್ಮರ ಆಕರ್ಷಣೆಗೆ ಒಳಗಾಗಿ ಅವರ ದರ್ಶನ ಪಡೆಯಲು ದೂರದೂರುಗಳಿಂದಅವರನ್ನರಸುತ್ತಾ ಬಂದರು.
1994ರಲ್ಲಿ ಆ ರೀತಿಯಾಗಿ ಪೂಜ್ಯರ ದರ್ಶನ ಪಡೆಯಲು ಬಂದವರಲ್ಲಿ ಶ್ರೀಯುತ ಬಿ. ಎಸ್. ಕೃಷ್ಣಮೂರ್ತಿ-ಸೌ|| ನಾಗಮಣಿ ಎಂಬ ಸಾತ್ವಿಕ, ವೇದಾಂತಾಭ್ಯಾಸಿಗಳೂ, ಮುಮುಕ್ಷುಗಳೂ ಆಗಿದ್ದ ದಂಪತಿಗಳಿಗೆ “ನೀವು ಎಲ್ಲದಂಪತಿಗಳಂತೆ ಅಲ್ಲ. ಒಂದು ದೈವೀಕಾರ್ಯಕ್ಕೆ ಭಗವಂತ ನಿಮ್ಮನ್ನು ಒಟ್ಟುಗೂಡಿಸಿದ್ದಾನೆ.ನೀವಿಬ್ಬರೂ ಸಂನ್ಯಾಸಿಗಳೇ” ಎಂದು ತಿಳಿಸಿದ ಪೂಜ್ಯರು ಅವರನ್ನು ಚಳ್ಳಕೆರೆಯಿಂದ ಉಪ್ಪಾರಹಟ್ಟಿಯ ತಮ್ಮ ಮನೆಗೆ ಕರೆದೊಯ್ದು ಆದರದಿಂದ ಸತ್ಕರಿಸಿ “ ನಿಮ್ಮಿಬ್ಬರಿಗೂ ಇನ್ನೂ ಬಹಳ ಪೂಜೆ ಆಗ್ತದೆ, ಅದು ನನ್ನಿಂದಲೇ ಪ್ರಾರಂಭ ಆಗ್ಲಿ ಅಂತ ಫಸ್ಟಲ್ಲಿಮಾಡಿಬಿಟ್ಟಿರುವೆ” ಎಂದು ತಿಳಿಸಿ, ಕೊನೆಗೆ ಅವರನ್ನು ಬೀಳ್ಕೊಡುವಾಗ “ಮುಂದೆ ನಿಮಗೆ ಬೋ ಹೆಸರು ಬರ್ತದೆ. ಆದ್ರೆ ಅದೆಲ್ಲಾ ಶಿವಕೊಟ್ಟದ್ದು ಅಂತ ತಿಳ್ಕೊಂಡುಯಾವುದಕ್ಕೂ ಮರುಳಾಗ್ಲೆ ನಮ್ಮೆದಿಯಿಂದ ಇರಿ” ಎಂದು ತಿಳಿಸಿದರು. ಆ ದಂಪತಿಗಳೂ ಸಹ ಪೂಜ್ಯರು ಮತ್ತು ಸೌ॥ ಯಲ್ಲಮ್ಮ ನವರನ್ನು ಕೂಡಿಸಿ ಅರಿಶಿನ ಕುಂಕುಮ ವಸ್ತ್ರಗಳನ್ನು ಸಮರ್ಪಿಸಿದರು.
ಮುಂದೆ ಅದೇ ದಂಪತಿಗಳು 1996ರಲ್ಲಿ ವಿಧಿವತ್ತಾಗಿ ಕನಕಪುರ ತಾಲ್ಲೂಕಿನ ದೊಡ್ಡಮುದುವಾಡಿಯ ಶ್ರೀ ದತ್ತಸದಾನಂದಾಶ್ರಮದಲ್ಲಿ ಸಂನ್ಯಾಸದೀಕ್ಷೆ ಹೊಂದಿ ಸ್ವಾಮಿ ಶ್ರೀ ವಿರಜಾನಂದ ಸರಸ್ವತೀ ಮಹಾರಾಜ್ ಮತ್ತು ಸ್ವಾಮಿನಿ ಅಮೃತಮಯೀ ಮಾತಾಜಿಯವರಾಗಿ ಇಂದಿಗೂ ಜಿಜ್ಞಾಸುಗಳಿಗೆ ಮಾರ್ಗದರ್ಶನವೀಯುತ್ತಿದ್ದಾರೆ. ಪೂಜ್ಯಶ್ರೀ ಸತ್ ಉಪಾಸಿ ಅವಧೂತರು 1998ರಲ್ಲಿ ಶ್ರೀ ದತ್ತಸದಾನಂದಾಶ್ರಮಕ್ಕೆ ಭಕ್ತವೃಂದದೊಂದಿಗೆ ಭೇಟಿ ನೀಡಿ ಅಲ್ಲಿಯ ಹಿರಿಯ ಸ್ವಾಮಿಗಳಾಗಿದ್ದ ಪೂಜ್ಯ ಶ್ರೀಸಹಜಾನಂದ ಸರಸ್ವತೀಯವರೊಂದಿಗೆ ಸಂಭಾಷಣೆ ನಡೆಸಿದ್ದಾರೆ. ಅಂದು ಆಶ್ರಮದಲ್ಲಿರುವ ದತ್ತಮಂದಿರದೊಳಗೆ ಹೋದವರೇ ನೇರವಾಗಿ ಗರ್ಭಗುಡಿಯೊಳಗೆ ಸಾಗಿ ದತ್ತನನ್ನು ಮುಟ್ಟಿ ವಂದಿಸಿ ಕೆಲಸಮಯ ಧ್ಯಾನವನ್ನು ಮಾಡಿದ್ದಾರೆ.
ಮುಂದೆ ಪೂಜ್ಯ ಸ್ವಾಮಿ ವಿರಜಾನಂದರು ಮತ್ತು ಪೂಜ್ಯ ಅಮೃತಮಯೀ ಮಾತಾಜಿಯರರು ಹಲವು ಬಾರಿ ದೊಡ್ಡರಿಗೆ ಭೇಟಿ ನೀಡಿದ್ದಾರೆ. ಪೂಜ್ಯ ಮಾತಾಜಿಯವರಂತೂ ದೊಡ್ಡರಿ ಶ್ರೀಕ್ಷೇತ್ರದ ಧ್ಯಾನಮಂದಿರದ ಪ್ರಾರಂಭೋತ್ಸವಕ್ಕೂ ಸಾಕ್ಷಿಯಾಗಿದ್ದಾರೆ. ಪೂಜ್ಯ ಶ್ರೀಸತ್ ಉಪಾಸಿಯವರು ಏಕಾಂತವಾಗಿ ತಪಗೈಯುತ್ತಿದ್ದ ಜಾಲಿ ಮುಳ್ಳುಪೊದೆಗಳಿಂದ ತುಂಬಿದ್ದ ಸ್ಥಳಕ್ಕೂ ಭೇಟಿ ನೀಡಿರುವ ಮಾತಾಜಿಯವರು, ಪೂಜ್ಯರ ಸೂಚನೆಯಂತೆ ದಿನವಿಡೀ ಬಾಹ್ಯ ಪ್ರಪಂಚದ ಪರಿವೆಯೇ ಇಲ್ಲದ ಉನ್ನತಸ್ತರದಲ್ಲಿದ್ದು ತಪಗೈದು ಹಿಂತಿರುಗಿದ್ದಾರೆ. ಎಷ್ಟಾದರೂ ಮಹಾತ್ಮರು ಮಾತ್ರವೇಮಹಾತ್ಮರನ್ನು ಗುರುತಿಸಲು ಸಾಧ್ಯ-ಅಲ್ಲವೇ?!
ಭಕ್ತರ ಮರು ನಾಮಕರಣ
ಹೀಗೆ ಅಂತಃಸತ್ವವಿರುವವರನ್ನು ಗುರುತಿಸಿ ಪ್ರೋತ್ಸಾಹ, ಮಾರ್ಗದರ್ಶನ, ಆಶೀರ್ವಾದದ ಕೃಪೆ ನೀಡುವುದರಲ್ಲಿ ಪೂಜ್ಯರದು ಎತ್ತಿದ ಕೈ. ಅಂತಾಗಿಯೇ ಶಾಂಕರಪ್ರಸ್ಥಾನತ್ರಯ ಭಾಷ್ಯಾಭ್ಯಾಸ ಮಾಡಿ ಸಂನ್ಯಾಸದೀಕ್ಷೆ ಸ್ವೀಕರಿಸಿರುವ ಪೂಜ್ಯ ಸ್ವಾಮಿ ಶ್ರೀ ಬ್ರಹ್ಮಾನಂದ ತೀರ್ಥರು ಪೂಜ್ಯರನ್ನು ತಮ್ಮ ಮಾರ್ಗದರ್ಶಕ ಗುರುವನ್ನಾಗಿ ಸೇವಿಸುತ್ತಿದ್ದಾರೆ. ಕನ್ನಡ ಭಾಷೆಯೇ ಬಾರದಿದ್ದ “ಅಧ್ಯಾತ್ಮ ಚೈತನ್ಯರು ಇವರನ್ನುಸೇವಿಸಿ “ಸ್ವಾಮಿ ಅಮಿತಾನಂದರಾಗಿದ್ದಾರೆ, ಪೂಜ್ಯರು ತಮ್ಮ ಬಾಲ್ಯದ ಗೆಳೆಯ ಶ್ರೀ ಚಿಕ್ಕಣ್ಣನವರನ್ನು “ವಿಶ್ವಾನಂದರನ್ನಾಗಿಸಿದ್ದಾರೆ. ತಮ್ಮ ಸಹೋದರ ಶ್ರೀಲಕ್ಷ್ಮಣರನ್ನು “ತನ್ಮಯಾನಂದರನ್ನಾಗಿಸಿದ್ದಾರೆ. ಸ್ಟಿಟ್ಟರ್ಲೆಂಡ್ ನ ರೋಸ್ ಮೇರಿ ಪೂಜ್ಯರಕೃಪೆಯಿಂದ “ಸಂಗೀತಾ” ಆದರೆ, ಅಮೆರಿಕಾದ ಸೂಸಾನ್ ನಗರದಲ್ಲಿದ್ದ ದೊಡ್ಡ ವಿಜ್ಞಾನಿಯೊಬ್ಬರು ಪೂಜ್ಯರ ಶಿಷ್ಯರಾಗಿ “ಶ್ರೀಪಾದ”ನೆಂಬ ನಾಮಧೇಯ ಪಡೆದಿದ್ದಾರೆ. ಶ್ರೀನರಸಿಂಹಮೂರ್ತಿಯವರು “ಸುಪ್ರಸಿದ್ಧಪಾದ” ರಾದರೆ ಶ್ರೀ ತಿಪ್ಪೇಸ್ವಾಮಿಯವರು“ನಿಧಾನಾನಂದ ರಾಗಿದ್ದಾರೆ. ಶ್ರೀಯುತ ಚಂದ್ರಕುಮಾರ್ (ರತ್ನಪ್ಪ) “ಸಾಯಂದೇವರಾಗಿದ್ದಾರೆ.
ಇನ್ನು ಅವರ ಕೃಪಾವರ್ಷದಲ್ಲಿ ಮಿಂದು ತಮ್ಮ ಎಲ್ಲ ಕಷ್ಟಕೋಟಲೆಗಳಿಂದ ಆಧಿವ್ಯಾಧಿಗಳಿಂದ ಮುಕ್ತರಾಗಿರುವವರ ಸಂಖ್ಯೆ ಅಪಾರ, ಪ್ರಾಪಂಚಿಕ ಸುಖ, ಸ್ಥಾನಮಾನ ಬಯಸಿ ಬಂದವರಿಗೆ ಅವು ದೊರಕಿದರೆ, ಆಧ್ಯಾತ್ಮಿಕ ಉನ್ನತಿ ಬಯಸಿ ಬಂದವರುಅದನ್ನೇ ಗಳಿಸಿದ್ದಾರೆ. ಮೊದಲು ಪ್ರಾಪಂಚಿಕ ಅಗತ್ಯಗಳನ್ನು ಒದಗಿಸಿಕೊಟ್ಟ ಬಳಿಕ ಅವರಿಗೆ ಅಂತಿಮ, ಶಾಶ್ವತ ಸುಖವಾವುದೆಂಬುದನ್ನು ನಿಧಾನವಾಗಿ ತಿಳಿಸಿಕೊಡುತ್ತಾ, ಅಧ್ಯಾತ್ಮದ ಮಾರ್ಗಕ್ಕೆ ಅವರನ್ನು ಹಚ್ಚುವ ಪೂಜ್ಯರ ವಿಧಾನ ಬಹಳ ವಿಶಿಷ್ಟವಾದುದಾಗಿದೆ.ಪೂಜ್ಯರ ಭಕ್ತರೆಲ್ಲಾ ಅವರನ್ನು “ಅಪ್ಪ” “ಅಪ್ಪಾಜಿ” ಎಂದೇ ಸಂಬೋಧಿಸಿದರೂ ಮನದಲ್ಲಿ ಅವರು ಶ್ರೀಪಾದ ಶ್ರೀವಲ್ಲಭರ ಅವತಾರವೆಂದೇ ದೃಢಭಾವ ಹೊಂದಿದ್ದಾರೆ!
ಯಾತ್ರೆ
ಪೂಜ್ಯರು ತಮ್ಮ ಭಕ್ತರ ದಂಡನ್ನೇ ಕರೆದೊಯ್ದು ಚತುರ್ಧಾಮಗಳ ಯಾತ್ರೆ, ಕಾಶೀಯಾತ್ರೆ, ಗಾಣಗಾಪುರ ಯಾತ್ರೆ, ಕುಂಭಮೇಳ ಪವಿತ್ರ ಸ್ನಾನದ ಯಾತ್ರೆ ಹೀಗೆಹಲವಾರು ಯಾತ್ರೆಗಳನ್ನು ಮಾಡಿಸಿದ್ದಾರೆ, ಕುರುವಪುರಕ್ಕಂತೂ ಪ್ರತಿವರ್ಷ ಕಾರ್ತಿಕಮಾಸದಲ್ಲಿ ತಮ್ಮ ಭಕ್ತಸ್ತೋಮದೊಂದಿಗೆ ತೆರಳಿ ಶ್ರೀಪಾದ ಶ್ರೀವಲ್ಲಭರ ಪಲ್ಲಕ್ಕಿ ಉತ್ಸವ ಮಾಡುತ್ತಾರೆ. ಅಲ್ಲಿ ಕೃಷ್ಣಾನದಿಯ ದಂಡೆಯಲ್ಲಿ ದತ್ತಪಾದುಕೆಗಳನ್ನುಸ್ಥಾಪಿಸಿ, ಮೆಟ್ಟಿಲುಗಳನ್ನು ಕಟ್ಟಿಸಿ ಯಾತ್ರಿಕರಿಗೆಲ್ಲ ಅನುಕೂಲ ಒದಗಿಸಿಕೊಟ್ಟಿದ್ದಾರೆ.
ದೊಡ್ಡರಿ ಗ್ರಾಮದಲ್ಲಿ “ಶ್ರೀ ಗುರು ಕನ್ನೇಶ್ವರಸ್ವಾಮಿ ದತ್ತಾವಧೂತ ಆಶ್ರಮ” ಸಂಸ್ಥಾಪಿಸಿ ಅದನ್ನು ಶ್ರೀಪಾದ ಶ್ರೀವಲ್ಲಭರ ದಿವ್ಯಕ್ಷೇತ್ರವನ್ನಾಗಿಸಿರುವ ಪೂಜ್ಯರು ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿನ ಹಿಂಭಾಗದಲ್ಲಿ ಮತ್ತು ತುಮಕೂರಿನ ನೃಪತುಂಗ ಬಡಾವಣೆಯ ಎಚ್.ಎಮ್. ಎಸ್. ಕಾಲೇಜಿನ ಹಿಂಭಾಗದಲ್ಲಿ ಆಶ್ರಮಗಳನ್ನುಸ್ಥಾಪಿಸಿದ್ದಾರೆ.
ಗ್ರಂಥಗಳು
ಅಧ್ಯಾತ್ಮ ಸಾಹಿತ್ಯ ಕ್ಷೇತ್ರಕ್ಕೆ ಪೂಜ್ಯರು ನೀಡಿರುವ ಕೊಡುಗೆ ಅಪಾರ. “ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ” ವನ್ನು ತೆಲುಗು ಭಾಷೆಯಿಂದ ಕನ್ನಡಕ್ಕೆ ಶ್ರೀಮತಿ ಅಹಲ್ಯಮ್ಮ ಮತ್ತು ಶ್ರೀ ನರಸಿಂಹಮೂರ್ತಿಯವರಿಂದ ಅನುವಾದ ಮಾಡಿಸಿ ಪ್ರಕಾಶಿಸಿ ಕನ್ನಡಿಗ ದತ್ತಭಕ್ತರಿಗೆ ಮಹಾಕೃಪೆ ಮಾಡಿರುತ್ತಾರೆ. ಅವಧೂತ ಸ್ಥಿತಿಯಲ್ಲಿದ್ದರೂ ಭಕ್ತರಸಲುವಾಗಿ ಒಂದು ಹಂತ ಕೆಳಕ್ಕಿಳಿದು ಬಂದು ತಮ್ಮ ಆಧ್ಯಾತ್ಮಿಕ ಅನುಭವಗಳಿಂದಾಗಿ ಒಸರಿದ ತತ್ವಪದಗಳನ್ನು ಮತ್ತು ವಚನಗಳನ್ನು ತಮ್ಮ “ಘನಾನುಭವಸಾರ” ದ ಮೂಲಕ ಜಿಜ್ಞಾಸುಗಳಿಗೆ ನೀಡಿರುತ್ತಾರೆ. ಅಂತೆಯೇ ಅವರ “ಜ್ಞಾನಧಾರೆ” ಮತ್ತು “ಜ್ಞಾನನಿಧಿಗಳೂ ಸಹ ಅಮೂಲ್ಯ ಕೃತಿಗಳಾಗಿದ್ದು, ಇತ್ತೀಚೆಗೆ ಹೊರಬಂದಿರುವ ಅವರ “ಮಹದಾಶ್ಚರ್ಯ”ವು ಸಾಧಕರಿಗೆ ಮಾರ್ಗದರ್ಶಕ ಕೃತಿರತ್ನವಾಗಿದೆ.
ಆಶ್ರಮ
ಅಪ್ಪಾಜಿಯವರು ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿರುವ ಶ್ರೀ ಕ್ಷೇತ್ರ ದೊಡ್ಡೇರಿ ಎಂಬ ಗ್ರಾಮದಲ್ಲಿನ ಶ್ರೀ ದತ್ತ ಅವಧೂತ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಈ ಆಶ್ರಮವು ಪ್ರಕೃತಿಯ ಮಧ್ಯೆ ಅತ್ಯಂತ ಸುಂದರವಾದ ಸ್ಥಳದಲ್ಲಿ ಸ್ಥಿತಿಯಾಗಿದೆ. ಆಶ್ರಮದ ಸುತ್ತಮುತ್ತಲೂ ವಿಶಾಲವಾದ ಹಸಿರು ಭತ್ತದ ಹೊಲಗಳು ಇದ್ದು, ಇದು ಆಶ್ರಮವನ್ನು ಇನ್ನಷ್ಟು ಮನಮೋಹಕವಾಗಿಸುತ್ತದೆ.
ಅನ್ನದಾನ ಸೇವೆಯ ಅಂಗವಾಗಿ, ಅಪ್ಪಾಜಿಯವರ ನೇರ ಮಾರ್ಗದರ್ಶನದಲ್ಲಿ ಆಶ್ರಮದ ಭಕ್ತರು ನಿಯಮಿತವಾಗಿ ಭತ್ತ ಮತ್ತು ಇತರ ತರಕಾರಿ ಬೆಳೆಗಳನ್ನು ಬೆಳೆಯುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಒಂದು ಮಹತ್ವದ ಸೇವೆಯಾಗಿ ಭಕ್ತರು ಭಾವಿಸುತ್ತಾರೆ.
ಜೀವನದ ಎಲ್ಲ ವರ್ಗಗಳ ಭಕ್ತರು ಆಶ್ರಮಕ್ಕೆ ಭೇಟಿ ನೀಡಿ, ಶ್ರೀ ಸದ್ಗುರು ಅಪ್ಪಾಜಿಯವರ ದೈವಿಕ ಸಾನ್ನಿಧ್ಯದಲ್ಲಿ ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುತ್ತಾರೆ.
ಹಬ್ಬಗಳು ಮತ್ತು ಆಚರಣೆಗಳು
ಆಶ್ರಮದಲ್ಲಿ ಅನೇಕ ಸಣ್ಣ ಮಟ್ಟದ ಆಚರಣೆಗಳ ಜೊತೆಗೆ, ನಾಲ್ಕು ಪ್ರಮುಖ ಹಬ್ಬಗಳನ್ನು ಅತ್ಯಂತ ಭವ್ಯವಾಗಿ ಆಚರಿಸಲಾಗುತ್ತದೆ. ಅವುಗಳೆಂದರೆ ಮಹಾ ಶಿವರಾತ್ರಿ, ಗುರು ಪೂರ್ಣಿಮೆ, ಶ್ರೀ ಪಾದವಲ್ಲಭ ಜಯಂತಿ (ಗಣೇಶ ಚತುರ್ಥಿ) ಮತ್ತು ಶ್ರೀ ದತ್ತ ಜಯಂತಿ. ಈ ಮಹೋತ್ಸವಗಳು ಶ್ರೀ ಸದ್ಗುರು ಅಪ್ಪಾಜಿಯವರ ಶುಭ ಸಾನ್ನಿಧ್ಯದಲ್ಲಿ, ಮನಮೋಹಕ ಹೂವಿನ ಅಲಂಕಾರಗಳೊಂದಿಗೆ, ಮಧುರವಾದ ಸಂಗೀತ ವಾದ್ಯಗಳು ಹಾಗೂ ನೃತ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತವೆ.
ಈ ಹಬ್ಬಗಳ ಸಂದರ್ಭದಲ್ಲಿ ಭಕ್ತರು ತಪ್ಪದೇ ಅನುಭವಿಸಬೇಕಾದ ಮತ್ತೊಂದು ವಿಶೇಷ ಆಚರಣೆ ಎಂದರೆ ರಥೋತ್ಸವ. ಸುಮಾರು 45 ಅಡಿ ಎತ್ತರದ ರಥವನ್ನು ಸುಂದರವಾಗಿ ಅಲಂಕರಿಸಿ, ನೂರಾರು ಭಕ್ತರು ಸೇರಿ ಎಳೆಯುತ್ತಾರೆ. ಆ ರಥದಲ್ಲಿ ಆಸೀನರಾಗಿರುವ ಶ್ರೀ ದತ್ತಾತ್ರೇಯ ಸ್ವಾಮಿಯವರು ಆಶ್ರಮದ ಸುತ್ತಲೂ ಸಂಚರಿಸಿ, ಎಲ್ಲರ ಮೇಲೂ ತಮ್ಮ ಕೃಪಾ ಆಶೀರ್ವಾದವನ್ನು ಸುರಿಸುತ್ತಾರೆ..
Accommodation and food is provided freely to devotees who visit Ashram from all over the world.