24 Guru’s Of Lord Dattatreya – ಭೂಮಿ – ವಾಯು – ಆಕಾಶ – ನೀರು

Spread the love

1. ಭೂಮಿ – Land – 24 Guru’s Of Lord Dattatreya

ಭೂಮಿ

      ಪರಮಾರ್ಥಕ್ಕೆ ಮುಖ್ಯವಾದದ್ದು ಶಾಂತಿ ಅದು ಸಾಧಕರಿಗೆ ಅವಶ್ಯವೆಂದು ಭೂಮಿಯನ್ನು ಗುರುವಾಗಿ ಸ್ವೀಕರಿಸಿದೆ. ಈ ಭೂಮಿಯಲ್ಲಿ ಮೂರು ವಿಭಾಗಗಳಿವೆ. ಬೆಟ್ಟ, ಮರ, ಮತ್ತು ಭೂಮಿ. ಭೂಮಿಯನ್ನು ಎಲ್ಲರೂ ನನ್ನದು ನಿನ್ನದು ಎಂದು ಇಚ್ಛೆಪಟ್ಟು ಸ್ವಾರ್ಥಕ್ಕಾಗಿ ಬೇಧ ಮಾಡುತ್ತಿದ್ದರೂ ಭೂಮಿ ಅಭಿನ್ನವಾಗಿಯೇ ಉಳಿದಿದೆ. ಕೆಲವರು ಭೂಮಿಯನ್ನು ಪೂಜಿಸುತ್ತಾರೆ, ಕೆಲವರು ಹೇಸಿಗೆ ಮಾಡುತ್ತಾರೆ. ಹೀಗಿದ್ದರೂ, ಭೂಮಿಯು ಸಂತೋಷವಾಗಲಿ, ದುಃಖವಾಗಲಿ ಪಡುವುದಿಲ್ಲ. ಜನರು ತರಗೆಲೆಗಳನ್ನು ಕೂಡಿಸಿ ಬೆಂಕಿ ಹಚ್ಚಿದರೂ, ಭೂಮಿಯನ್ನು ತುಳಿದಾಡಿದರೂ ಅವರ ಮೇಲೆ ಕೋಪಿಸಿಕೊಳ್ಳದೆ ಜನರು ಕೊಡುವ ಕಾಟಗಳನ್ನೆಲ್ಲವೂ ಸಹಿಸಿಕೊಂಡು ಅವರಿಗೆ ಬೇಕಾದ ದವಸ ಧಾನ್ಯಗಳನ್ನು ಒದಗಿಸಿ ತೃಪ್ತಿ ಪಡಿಸುತ್ತದೆ. ಅಪರಾಧಿಗೆ ಶಿಕ್ಷೆ ಕೊಟ್ಟರೆ ನಮಗೆ ಶಾಂತಿ ಸಿಗುವುದೆಂದು ಬಯಸಬಾರದು. ಕಬ್ಬು ತನ್ನನ್ನು ಒಬ್ಬನು ಕತ್ತಿಯಿಂದ ಕೊಚ್ಚಿ ಹಾಕಿದರೂ, ಅವನಿಗಾಗಲೀ, ಕತ್ತಿಗಾಗಲೀ ಶಿಕ್ಷಿಸದೆ ಸಿಹಿಯನ್ನೇ ಪ್ರಸಾದಿಸುತ್ತದೆ. ಈ ರೀತಿ ಅಪಕಾರಿಗೂ ಉಪಕಾರ ಮಾಡುವುದೇ ‘ಶಾಂತಿ’.



    

    ಭೂಮಿಯಿಂದ ಉತ್ಪತ್ತಿಯಾಗಿರುವುದೇ ಬೆಟ್ಟಗಳು ಖನಿಜಗಳು, ನಿಧಿಗಳು, ಹುಲ್ಲು, ನೀರು ಮುಂತಾದವುಗಳನ್ನು ಬೆಟ್ಟಗಳು ಪರೋಪಕಾರಕ್ಕಾಗಿಯೇ ಹುದುಗಿಸಿಕೊಂಡಿದೆ. ಯಾರೇ ಒಂದು ಕತ್ತಿಯಿಂದ ಹುಲ್ಲನ್ನು ಕತ್ತರಿಸಿಕೊಂಡರೂ ಅದು ಅಡ್ಡಿ ಮಾಡುವುದಿಲ್ಲ. ಬೇಸಿಗೆಯಲ್ಲಿ ಎಲ್ಲವೂ ಒಣಗಿ ಹೋದರೂ ನಂತರ ಶಿವನ ಕೃಪೆಯಿಂದ ಮಳೆ ಸುರಿದು ಹುಲ್ಲು ಸಮೃದ್ಧಿಯಾಗಿ ಬೆಳೆದು ನೀರು ಸಂಗ್ರಹವಾಗುತ್ತದೆ. ಹೀಗೆ ಭಗವಂತನು ದಾನ ಮಾಡುವವರಿಗೆ ಮನಸ್ಸಿನಲ್ಲಿ ಯಾವುದೇ ವಿಕಲ್ಪಗಳು ಬಾರದಂತೆ ನೋಡಿಕೊಳ್ಳುತ್ತಾನೆ. ಎಲ್ಲವನ್ನೂ ಭಗವಂತನೇ ನಡೆಸುತ್ತಿದ್ದಾನೆ ಎಂಬ ದೃಢಭಾವನೆ ಯಾರಲ್ಲಿರುವುದೋ ಅವನ ಹತ್ತಿರ ಬಡತನವು ಸುಳಿಯಲಾರದು. ಪರ್ವತಗಳು ತನ್ನಲ್ಲಿರುವ ಎಲ್ಲವನ್ನೂ ನಿಸ್ವಾರ್ಥತೆಯಿಂದ ಎಲ್ಲರಿಗೂ ನೀಡುವುದನ್ನು ಬಿಟ್ಟು ಬೇರೆ ಅರಿಯದು ಹೀಗೆಯೇ ಯೋಗಿಯೂ ಕೂಡ ಮನೋವಾಕ್ಕಾಯಗಳಿಂದ ಉದಾರಬುದ್ಧಿಯವನಾಗಿ ಕೋಟಿ ಲಾಭ ಬಂದರೂ ವಿಚಲಿತನಾಗದೆ ಉಪಕಾರ ಚಿಂತನೆಯಲ್ಲಿಯೇ ತೊಡಗಿರಬೇಕು. ಕಬ್ಬು ತನ್ನ ಸಿಹಿತನವನ್ನು ಹೇಗೆ ಎಲ್ಲರಿಗೂ ಕೊಟ್ಟು ಉಪಕಾರ ಮಾಡುವುದೋ ಹಾಗೆಯೇ ಜ್ಞಾನಿಯಾದವನು ಜ್ಞಾನವೆಂಬ ಸಿಹಿಯನ್ನು ಎಲ್ಲರಿಗೂ ಹಂಚಿ ಪರೋಪಕಾರಿಯಾಗಿರುತ್ತಾನೆ. ದೇವತೆಗಳು ಹೇಗೆ ಬೆಟ್ಟದ ಮೇಲಿದ್ದು, ಬೆಟ್ಟವನ್ನು ರಕ್ಷಣೆ ಮಾಡುತ್ತಾರೋ ಹಾಗೆ ಬೆಟ್ಟದ ದೇವತೆಗಳು ಉದಾರ ಬುದ್ದಿಯ ಯೋಗಿಯನ್ನು ಒಂದು ಕೊರತೆಯೂ ಬರದ ಹಾಗೆ ಕಾಪಾಡುತ್ತಾರೆ. ಇದರಿಂದ ಬೆಟ್ಟವನ್ನು ಗುರುವಾಗಿ ಸ್ವೀಕರಿಸಿದೆನು.



        ಈಗ ಮರಗಳಿಂದ ಅರಿತುಕೊಂಡದ್ದನ್ನು ಹೇಳುವೆನು ಕೇಳು, “ಮರವು ನಾನೆಂಬ ಭಾವನೆಯೇ ಇಲ್ಲದೆ, ತನ್ನನ್ನು ಪೋಷಿಸುವವನಿಗಾಗಲೀ, ಕಡಿಯುವವನಿಗಾಗಲಿ ನಸುನಗುತ್ತಾ ನೆರಳನ್ನು ನೀಡುತ್ತದೆ. ಹಾಗೆಯೇ ಒಬ್ಬ ಸಾಧು ಸ್ವಭಾವದವನನ್ನು ಪಲ್ಲಕ್ಕಿಯಲ್ಲಿ ಕೂರಿಸಿದರೂ ತನ್ನನ್ನು ತ್ರಿಶೂಲದಿಂದ ತಿವಿಯಲು ಬಂದರೂ ಪ್ರಸನ್ನನಾಗಿಯೆ ದೇಹಭಾವವವಿಲ್ಲದೆ ತನ್ನ ದೇಹ ರಕ್ಷಣೆಯನ್ನೂ ಪರಮಾತ್ಮನಿಗೆ ಬಿಟ್ಟಿರುತ್ತಾನೆ. ಮರದ ಕೆಳಗೆ ಒಬ್ಬ ಅತಿಥಿ ಬಂದರೂ, ಅಥವಾ ಆ ಮರವನ್ನೇ ಕಡಿಯುವವನು ಬಂದರೂ ನಿರ್ವಂಚನೆಯಿಂದ ಅವರಿಗೆ ಎಲೆ, ಹೂ, ಕಾಯಿ, ಹಣ್ಣು, ಕೊಂಬೆ ನೆರಳು ಇತ್ಯಾದಿ ಕೊಟ್ಟು ಅವರನ್ನು ಸಂತೋಷ ಪಡಿಸುತ್ತದೆ. ಹೀಗೆ ಸಾಧು ಸ್ವಭಾವದವನು ಒಳ್ಳೆಯವರು, ಕೆಟ್ಟವರು ಎಂದೆಣಿಸದೇ ಯಾರು ಬಂದು ಅವನನ್ನು ಆಶ್ರಯಿಸಿದರೂ ಸಮಭಾವದಿಂದ ಆದರಿಸಿ ಬೇಕು ಬೇಡಗಳನ್ನು ತೀರಿಸುತ್ತಾನೆ.

2. ವಾಯು – Vaayu –24 Guru’s Of Lord Dattatreya.

24 gurus of lord dattatreya
24 gurus of lord dattatreya

ಜೀವಿಗಳಿಗೆ ಆಸೆಯಿಲ್ಲದಿದ್ದರೆ ಅವರ ಹತ್ತಿರ ಗರ್ವವು ಸುಳಿಯುವುದಿಲ್ಲ. ಜೀವಿಗೆ ಹಸಿವೆ ಅಭ್ಯಾಸವಾಗಿರುವುದು. ಜೀವಿಗೆ ಹಸಿವೆಯಾದಾಗ ಬೇಡಿಕೆ ಶುರುವಾಗುತ್ತದೆ. ಅದರಿಂದ ಮನೋವಾಕ್ಕಾಯಗಳು ಪ್ರೇರಿತಗೊಳ್ಳುತ್ತವೆ ಜೀವಿಯು ಪ್ರಾಣಕ್ಕಾಗಿ, ಹಸಿವಾದಾಗ ಯಾವುದೇ ಆಹಾರವಾಗಲಿ ರುಚಿಯನ್ನೂ ಗಮನಿಸದೆ ಸ್ವೀಕರಿಸುತ್ತಾನೆ. ಹಾಗೆಯೇ ಸಾಧುಗಳು ಒಳ್ಳೆಯದಾಗಲಿ, ಕೆಟ್ಟದಾಗಲಿ ಆಸೆಗಳಿಲ್ಲದೆ ದೇಹಭಾವವನ್ನು ತೊರೆದು ನಿಷ್ಕಾಮಕರ್ಮದಲ್ಲಿ ತೊಡಗಿರುತ್ತಾರೆ.

ಇಂದ್ರಿಯಗಳು ಹರಿದಾಡತೊಡಗಿದರೆ ಜ್ಞಾನದ ಅರಿವು ಕ್ಷೀಣವಾಗುತ್ತಾ ಹೋಗುತ್ತದೆ. ಅದಕ್ಕೆ ಇಂದ್ರಿಯಗಳು ಹರಿದಾಡುವುದನ್ನು ನಿಲ್ಲಿಸಲು ಆಹಾರವನ್ನು ತೀರ ಕಡಿಮೆಯಾಗಿಯೂ, ಹೆಚ್ಚಾಗಿಯೂ ಅಲ್ಲದೆ ಹಿತಮಿತವಾಗಿ ಸ್ವೀಕರಿಸಬೇಕು, ಪ್ರಾಣವು (ವಾಯುವು) ಬ್ರಹ್ಮಾದಿ* ದೇವತೆಗಳ ದೇಹವನ್ನೂ ಹಂದಿಯಾದಿ ಪ್ರಾಣಿಗಳ ದೇಹವನ್ನು ಸಮಭಾವದಿಂದ ರಕ್ಷಣೆ ಮಾಡುತ್ತಿದೆ. ರಾಜನನ್ನು ರಕ್ಷಿಸಬೇಕು. ಹೀನನನ್ನುಕೈಬಿಡಬೇಕೆಂಬ ಆಲೋಚನೆಯೇ ಅದಕ್ಕಿಲ್ಲ. ವಾಯುವು ಎಲ್ಲೆಡೆಯೂ ವ್ಯಾಪಿಸಿದ್ದರೂ ಎಲ್ಲವನ್ನೂ ಸಮಭಾವದಿಂದ ಸ್ಪರ್ಷಿಸುತ್ತಾ ತಾನು ಮಾತ್ರ ಕಲುಷಿತವಾಗದೆ ತಾನೇ ತಾನಾಗಿರುತ್ತದೆ.

ಹಾಗೆಯೇ ಯೋಗಿಯು ಬಾಹ್ಯ ವ್ಯಾಪಾರದಲ್ಲಿ ತೊಡಗಿದ್ದರೂ, ವಿಷಯ ಸುಖಗಳನ್ನು ಅನುಭವಿಸುತ್ತಿದ್ದರೂ ಅವುಗಳ ವಶವಾಗದೆ ಗುರಿಯತ್ತ ಸಾಗಿದರೆ ಗುಣದೋಷಗಳು ಅವನ ಹತ್ತಿರವೂ ಸುಳಿಯುವುದಿಲ್ಲ. ವಾಯುವು ಬೆಟ್ಟ, ಚಂದನ, ಹೂ, ಹಣ್ಣುಗಳನ್ನು ಸ್ಪರ್ಷಿಸಿದರೂ ಅವುಗಳ ವಶವಾಗದಿರುವಂತೆ, ಯೋಗಿಯು ವಿಷಯ ಸುಖಗಳನ್ನು ಅನುಭವಿಸುವಾಗ ಅವುಗಳ ವಶವಾಗದೆ ಕಮಲದ ಮೇಲಿನ ನೀರಿನ ಹನಿಯಂತೆ ಇರುತ್ತಾನೆ.

ಆಕಾಶ – 3. Sky – 24 Guru’s Of Lord Dattatreya.

ಅಸಂಗತ್ವ ಅಭೇದತ್ವ, ನಿರ್ಮಲತ್ವ, ಮುಂತಾದವು ಅಕಾಶದ ಗುಣಗಳು, ಹಾವು ಮುಂಗುಸಿಗಳು ಆಜನ್ಮ ಶತ್ರುಗಳು ಆದರೆ ಆಕಾಶ ಇವೆರಡಕ್ಕೂ ಹೃದಯನಿವಾಸಿ. ಆಕಾಶಕ್ಕೆ ಶತೃತ್ವವಾಗಲಿ ಮಿತ್ರತ್ವವಾಗಲಿ ಇಲ್ಲ. ಹಾಗೆಯೇ ಸಾಧು ಸತ್ಪುರುಷರ ಸ್ಥಿತಿ ಇರಬೇಕು ! ಆಕಾಶವು ಎಲ್ಲೆಲ್ಲೂ ವ್ಯಾಪಿಸಿರುವಂತೆ ಪರಮಾತ್ಮನ ಸರ್ವ ವ್ಯಾಪಕತ್ವವನ್ನು ಸಾಧುಗಳು ಬ್ರಹ್ಮ ಭಾವನೆಯಿಂದ ಕಾಣಬೇಕು. ಆಕಾಶವು ಎಲ್ಲದರಲ್ಲಿಯೂ ವಾಸ್ತವ ವಾಗಿದ್ದರೂ ಅದರ ಇರುವಿಕೆಯು ತಿಳಿಯುವುದಿಲ್ಲ.ಆಕಾಶಕ್ಕೆ ನೀರಿನಿಂದಾಗಲಿ, ಅಗ್ನಿಯಿಂದಾಗಲಿ ಯಾವುದೇ ತೊಂದರೆ ಯಾಗುವುದಿಲ್ಲ. ಆಕಾಶವು ಸರೋವರದಲ್ಲಿದ್ದರೂ ಆ ನೀರಿನಿಂದ ಅದು ನೆನೆಯುವುದಿಲ್ಲ. ಸಂತರು ಕೂಡ ದೇಹಭಾವದಲ್ಲಿರುವಂತೆ ಕಾಣಿಸಿಕೊಂಡರೂ ಅವರು ಅದರಲ್ಲಿ ಮುಳುಗಿರುವುದಿಲ್ಲ. ದುಷ್ಟರು ಆಕಾಶಕ್ಕೆ ಬಣ್ಣ ಬಳೆಯಲು ಪ್ರಯತ್ನಿಸಿದರೆ ಬಣ್ಣವು ಅವರ ಕೈಗೆ ಮೆತ್ತಿಕೊಳ್ಳುತ್ತದೆ. ಹಾಗೆಯೇ ಸಾಧುಗಳ ಮೇಲೆ ಗುಣದೋಷಗಳ ಆರೋಪ ಹೊರಿಸುವವರ ಮೇಲೆಯೇ ಆ ಗುಣದೋಷಗಳು ಬೀಳುತ್ತವೆ. ಆಕಾಶದಲ್ಲಿಯೇ ಸಕಲ ಜನಗಳು ಇದ್ದರೂ ಅವರುಗಳ ಗುಣಗಳು ಆಕಾಶವನ್ನು ತಾಕುವುದಿಲ್ಲ. ಹೀಗೆ ಸಂತರು ಕರ್ಮಗಳನ್ನು ಮಾಡಿದರೂ, ಆ ಕರ್ಮಗಳ ಫಲಾಫಲಗಳು ಅವರನ್ನು ತಾಕುವುದಿಲ್ಲ.



ಭೂಮಿ, ನೀರು, ಅಗ್ನಿ, ವಾಯುಗಳು ಆಕಾಶದಲ್ಲಿಯೇ ಇದ್ದರೂ ಅವುಗಳ ಗುಣಗಳಾವುವೂ ಆಕಾಶವನ್ನು ತಾಕಲು ಸಹ ಆಗದು, ಗುಡುಗು ಆಕಾಶದಲ್ಲಿಯೇ ಉತ್ಪತ್ತಿಯಾದರೂ ಆಕಾಶವು ಮಾತ್ರ ಅಲಿಪ್ತವಾಗಿರುತ್ತದೆ. ಹಾಗೆಯೇ ಸತ್ಪುರುಷರು ಭೂಮಿಯಿಂದ ಉಂಟಾದ ಗುಣಗಳಿಂದ ಅಲಿಪ್ತರಾಗಿರುತ್ತಾರೆ. ಒಬ್ಬನು ಚಿಂತಾಮಣಿಯು ಹಾಳು ಬಾವಿಯಲ್ಲಿ ಬಿದ್ದಂತೆ ಕನಸು ಕಂಡಿದ್ದರೆ, ಜಾಗ್ರತಾವಸ್ಥೆಯಲ್ಲಿ ಅವನನ್ನು ಅದು ಬಾಧಿಸುವುದಿಲ್ಲ. ಅದರಂತೆ ಆತ್ಮ ಸ್ವರೂಪಿಯಾದ ಯೋಗಿಯನ್ನು ದೇಹಭಾವವು ಬಾಧಿಸುವುದಿಲ್ಲ. ಬ್ರಹ್ಮಾದಿ ದೇವತೆಗಳ ಜನನ ಮರಣಗಳನ್ನು ಹಿಡಿತದಲ್ಲಿಟ್ಟುಕೊಂಡಿರುವ ಜವರಾಯನು ಕೂಡ ಸಾಧು ಸಂತರಿಗೆ ನಮಿಸುತ್ತಾನೆ. ಆಕಾಶದಲ್ಲಿಯೇ ಮಿಂಚು ಮಿಂಚಿದರೂ ಅದರ ಆಘಾತವು ಆಕಾಶಕ್ಕೆ ಆಗುವುದಿಲ್ಲ. ಹಾಗೆಯೇ ಸತ್ವ ಗುಣಗಳಿಂದ ಪ್ರಕಾಶಿಸುವ ಯೋಗಿಗಳಲ್ಲಿ ಯಾವುದೇ ಚಲನೆಯ ಕಾಣಬರುವುದಿಲ್ಲ. ಸೂರ್ಯೋದಯವಾದ ಮೇಲೆ ದೀಪದ ಬೆಳಕಿನ ಅವಶ್ಯಕತೆ ಹೇಗೆ ಇರುವುದಿಲ್ಲವೋ ಹಾಗೆಯೇ ಸಹಜಾನಂದವನ್ನು ಹೊಂದಿದ ಮೇಲೆ ಬುದ್ದಿಗೆ ಕೆಲಸ ಇರುವುದಿಲ್ಲ. ಸತ್ವ ರಜೋತಮೋಗುಣಗಳು ಅವರಿಗೆ ಬಂದರೂ ಸ್ವಾನಂದಾಮೃತದಲ್ಲಿಯೇ ಮುಳುಗಿರುವುದರಿಂದ ಕ್ರೋಧ ಮೋಹಗಳ ಬಾಧೆ ಇರುವುದಿಲ್ಲ.

ಆಕಾಶದ ಗುಣಗಳು:



– ಆಕಾಶವು ವಿಶಾಲವಾಗಿದೆ ಮತ್ತು ಅನಂತವಾಗಿದೆ.
– ಆಕಾಶವು ಯಾವುದೇ ಮಿತಿಗಳಿಲ್ಲದೆ ಎಲ್ಲವನ್ನೂ ಆವರಿಸುತ್ತದೆ.
– ಆಕಾಶವು ಯಾವಾಗಲೂ ಶಾಂತವಾಗಿರುತ್ತದೆ ಮತ್ತು ಸ್ಥಿರವಾಗಿರುತ್ತದೆ.
– ಆಕಾಶವು ಎಲ್ಲಾ ಜೀವಿಗಳಿಗೆ ಆಶ್ರಯ ನೀಡುತ್ತದೆ.

ಆಕಾಶದಿಂದ ಕಲಿಯಬೇಕಾದ ಪಾಠಗಳು:

– ನಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕು ಮತ್ತು ಎಲ್ಲರನ್ನೂ ಸಮಾನವಾಗಿ ನೋಡಬೇಕು.
– ಯಾವುದೇ ಮಿತಿಗಳಿಲ್ಲದೆ ಎಲ್ಲವನ್ನೂ ಸ್ವೀಕರಿಸಬೇಕು.
– ಶಾಂತವಾಗಿ ಮತ್ತು ಸ್ಥಿರವಾಗಿ ಇರಬೇಕು.
– ಎಲ್ಲಾ ಜೀವಿಗಳಿಗೆ ಆಶ್ರಯ ನೀಡಬೇಕು ಮತ್ತು ಸಹಾಯ ಮಾಡಬೇಕು.

ಆಕಾಶದ ಸಂಕೇತ:

– ಆಕಾಶವು ವಿಶಾಲತೆ, ಶಾಂತಿ, ಮತ್ತು ಸ್ಥಿರತೆಯ ಸಂಕೇತವಾಗಿದೆ.
– ಆಕಾಶವು ದೇವರ ಅನಂತ ಪ್ರೀತಿ ಮತ್ತು ಕರುಣೆಯ ಸಂಕೇತವಾಗಿದೆ.


ಆಕಾಶದ ಪ್ರಾಮುಖ್ಯತೆ:



– ಆಕಾಶವು ನಮಗೆ ವಿಶಾಲತೆ ಮತ್ತು ಶಾಂತಿಯನ್ನು ನೀಡುತ್ತದೆ.
– ಆಕಾಶವು ನಮಗೆ ಎಲ್ಲಾ ಜೀವಿಗಳೊಂದಿಗೆ ಸಂಬಂಧವನ್ನು ಕಲ್ಪಿಸುತ್ತದೆ.
– ಆಕಾಶವು ನಮಗೆ ದೇವರ ಹತ್ತಿರ ತರುತ್ತದೆ.

ಆಕಾಶದ ಬಗ್ಗೆ ಕೆಲವು ಆಧ್ಯಾತ್ಮಿಕ ಉಲ್ಲೇಖಗಳು:

“ಆಕಾಶವು ಎಲ್ಲವನ್ನೂ ಆವರಿಸುತ್ತದೆ, ಆದರೆ ಅದರಲ್ಲಿ ಯಾವುದೇ ಕೊಳೆಯಿಲ್ಲ.” – ಸ್ವಾಮಿ ವಿವೇಕಾನಂದ
“ಆಕಾಶವು ನಮಗೆ ಶಾಂತಿ ಮತ್ತು ಸ್ಥಿರತೆಯನ್ನು ನೀಡುತ್ತದೆ, ಅದನ್ನು ನಾವು ನಮ್ಮ ಜೀವನದಲ್ಲಿ ಅನುಭವಿಸಬಹುದು.” – ಶ್ರೀ ಶಂಕರಾಚಾರ್ಯ

ನೀರು – 4.Water – 24 Guru’s Of Lord Dattatreya.

ಸ್ವಭಾವತಃ ನೀರು ಅಪರಾಧಿಯಲ್ಲ, ಸಕಲ ವಸ್ತುಗಳನ್ನೂ ನೀರು ಪರಿಶುದ್ಧ ಮಾಡುತ್ತಿದ್ದರೂ ತಾನು ಮಾತ್ರ ನಿಗರ್ವಿಯಾಗಿ ಇರುತ್ತದೆ. ಹಾಗೆಯೇ ಉತ್ತಮರು ತಮ್ಮನ್ನು ಆಶ್ರಯಿಸಿದವರ ಅಜ್ಞಾನವನ್ನು ಹೋಗಲಾಡಿಸುತ್ತಿದ್ದರೂ ತಾವು ಮಾತ್ರ ಚಿಕ್ಕವರಾಗಿಯೇ ತೋರಿಸಿಕೊಳ್ಳುತ್ತಾರೆ. ಅವರು ತಮ್ಮ ಹತ್ತಿರ ಬಂದವರಿಗೆ ಯಾವಾಗಲೂ ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಯಾರನ್ನೂ ನೋಯಿಸುವುದಿಲ್ಲ. ನೀರು ವಸ್ತುಗಳ ಕೊಳೆಯನ್ನು ನಿರ್ಮೂಲ ಮಾಡುವುದೇ ಹೊರತು. ಮತ್ತೆ ಕೊಳೆಯಾಗದಂತೆ ಕಾಪಾಡಲಾಗುವುದಿಲ್ಲ. ಆದರೆ ಸಂತರು ಕರುಣಾಕಟಾಕ್ಷದಿಂದ ತಮ್ಮ ಕೃಪಾಶ್ರಿತರ ಅಜ್ಞಾನವನ್ನು ತೆಗೆದು ಮತ್ತೆ ಮೊಳಕೆಯೊಡೆಯದಂತೆ ಮಾಡಲು ಶಕ್ತರಾಗಿರುತ್ತಾರೆ. ನೀರಿಗೆ ಜೀವಿಯ ಒಂದು ಇಂದ್ರಿಯವನ್ನು ಮಾತ್ರ ತಣಿಸಲು ಸಾಧ್ಯ. ಆದರೆ ಸಂತರು ಸಕಲೇಂದ್ರಿಯಗಳನ್ನು ತಣಿಸುವಂತೆ ಮಾಡಬಲ್ಲರು.

ನೀರನ್ನು ಒಮ್ಮೆ ಕುಡಿದರೆ ಮತ್ತೊಮ್ಮೆ ತಕ್ಷಣವೇ ಕುಡಿಯಬೇಕೆನ್ನಿಸುವುದಿಲ್ಲ. ಆದರೆ ಸಂತರು ಕೊಡುವ ಸುಖ ಮರುಹುಟ್ಟನ್ನು ಕಳೆದು ಸದಾ ಕಾಲವೂ ಇರುತ್ತದೆ. ಮೇಘಗಳಿಂದ ನೀರು ಭೂಮಿಯ ಮೇಲೆ ಬಿದ್ದು ಸಕಲ ಜೀವಿಗಳು ಬೇಕಾದ ಅನ್ನಾದಿಗಳನ್ನು ಬೆಳೆಯಲು ಹೇಗೆ ಕಾರಣವಾಗುತ್ತಿದೆಯೋ ಹಾಗೆಯೇ ಸಂತರ ವಾಕ್ಯಗಳು ಭಜನೆಗಳು, ಸತ್ಯಜ್ಞಾನದಿಂದ ಲೋಕಕ್ಕೆ ಶಿಕ್ಷಣವನ್ನು ನೀಡುತ್ತವೆ. ಗಂಗೆಯ ನೀರಿನ ದರ್ಶನ ಪಾಪವಿಮೋಚನೆ ಮಾಡುತ್ತದೆ. ಮಹಾತ್ಮರ ದರ್ಶನವು ಭಾಗ್ಯವಿಲ್ಲದೆ ಸಿಗುವುದಿಲ್ಲ. ದರ್ಶನ ಮಾತ್ರದಿಂದಲೇ ಮರುಹುಟ್ಟು ಇಲ್ಲದಾಗುವುದು. ಸಾಧು ಸಂತರ ದರ್ಶನ ಸಿಗದಿದ್ದರೂ ಅವರ ನಾಮವಾದರೂ ಸ್ಮರಿಸಬೇಕು. ನಾಮಸ್ಮರಣೆ ಮಾತ್ರದಿಂದಲೇ ಮರುಹುಟ್ಟು ಇಲ್ಲದಾಗುವುದೇ? ಎಂಬ ಸಂಶಯಕ್ಕೆಡೆಕೊಡಬಾರದು.

ಏಕೆಂದರೆ ಪೂರ್ವದಲ್ಲಿ ಪರಮಾತ್ಮನು ನಾಮರೂಪಗಳಿಲ್ಲದೆ ಇದ್ದನು. ಭಕ್ತಿಯು ಹೆಚ್ಚಿದಂತೆ ಭಕ್ತರು ಪರಮಾತ್ಮನಿಗೆ ನಾಮರೂಪವಿಳಾಸಗಳನ್ನು ಗುರುತಿಸಿದರು. ಭಕ್ತಿಯಿಂದಲೇ ವೈಕುಂಠವೂ ಸೃಷ್ಟಿಯಾಗಿ ಪರಮಾತ್ಮನು ಅದರಲ್ಲಿ ಉದ್ಭವಿಸಿದನು. ವೈಕುಂಠದಿಂದಲೇ ಭಗವಂತನು ಭಕ್ತರುಗಳನ್ನು ಪರಿಪಾಲಿಸುವನು. ಇದಕ್ಕೆ ಸಾಕ್ಷೀಭೂತವಾಗಿ ಪ್ರಹ್ಲಾದನನ್ನು ಕಾಪಾಡಲು ಕಂಬದಿಂದ ಬಂದ ನರಸಿಂಹಾವತಾರವು ಸಾಮಾನ್ಯವೇ ? ಭಕ್ತರ ಸ್ತುತಿಗಳಿಂದ ಭಗವಂತನು ಇಳಿದು ಬಂದು ಮೂರ್ತಿಯಲ್ಲಿ ನೆಲೆಸುತ್ತಾನೆ. ಭಗವಂತನು ಭಕ್ತರ ರಕ್ಷಣೆಯನ್ನೇ ಕರ್ತವ್ಯವನ್ನಾಗಿಸಿಕೊಂಡಿದ್ದಾನೆ. ಇದು ಸತ್ಯ ಎಲ್ಲಿ ಭಗವಂತನ ನಾಮಸ್ಮರಣೆ ಇದೆಯೋ ಅಲ್ಲಿ ಭಕ್ತರ ಉಪಕಾರಕ್ಕಾಗಿ ಭಗವಂತನು ಓಡೋಡಿ ಬರುವನು. ಭಕ್ತರು ನಾಮಸ್ಮರಣೆ ಮಾಡುವ ಮಾತ್ರದಿಂದಲೆ ಮರು ಹುಟ್ಟನ್ನು ಕಳೆದುಕೊಳ್ಳಬಹುದು.


Spread the love

Leave a Comment

error: Content is protected !!