24 Guru’s Of Lord Dattatreya – ದತ್ತಾತ್ರೇಯರ 24 ಗುರುಗಳು.
ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಪರಮಾತ್ಮ ಸ್ವರೂಪನಾದ ಶ್ರೀಮನ್ನಾರಾಯಣನ ಗುಣಾತಿಶಯಗಳನ್ನು 10 ಸ್ಕಂದಗಳಲ್ಲಿ ವಿವರಿಸಿಸುತ್ತಿದ್ದರು. 11ನೆಯ ಸ್ಕಂದದಲ್ಲಿ “ಶ್ರೀ ಕೃಷ್ಣ ಲೀಲಾ ಚರಿತ”ದ ಕೊನೆಯಲ್ಲಿ ಪರಮ ಭಕ್ತನಾದ ಉದ್ಧವನು ಶ್ರೀ ಕೃಷ್ಣನನ್ನು ತನ್ನ ಆತೋದ್ಧಾರಕ್ಕಾಗಿ ಹಿತೋಪದೇಶವನ್ನು ಕೇಳಲುಪಕ್ರಮಿಸಿದಾಗ ತನ್ನ ಆತ್ಮವೇ ಮೊದಲನೆಯ ಗುರು ಎಂಬುದನ್ನು ತಿಳಿಯಪಡಿಸಲು ಉಪದೇಶಾಮೃತವನ್ನು ಅನುಗ್ರಹಿಸಿದನು.
ಈ ಉಪಾಖ್ಯಾನವು ಭಾಗವತದ 11ನೆಯ ಸ್ಕಂದದ 7ನೆಯ ಅಧ್ಯಾಯದ, 24ನೆಯ ಶ್ಲೋಕದಿಂದ 9ನೆಯ ಅಧ್ಯಾಯದ 33 ನೆಯ ಶ್ಲೋಕದವರೆಗೆ ಹೇಳಲ್ಪಟ್ಟಿದೆ.
ಇದಕ್ಕೆ ಸಂಬಂದಿಸಿದ ವಿಡಿಯೋ 👇
ಶ್ರೀ ಕೃಷ್ಣನು ಉದ್ಧವನಿಗೆ ಹೇಳಲುಪಕ್ರಮಿಸಿದನು
ನನ್ನ ವಂಶದ ಮೂಲ ಪುರುಷನಾದ ಯದು ಮಹಾರಾಜನು ಬ್ರಹ್ಮಜ್ಞಾನ ಪ್ರಾಪ್ತಿಗಾಗಿ ಒಬ್ಬ ಅವಧೂತನಿಂದ ಪಡೆದ ಉಪದೇಶಾಮೃತವು ಇದಾಗಿದೆ. ಯದು ಮಹಾರಾಜನು ಚಂದ್ರವಂಶದಲ್ಲಿ ಜನಿಸಿದರೂ ಸೂರ್ಯವಂಶದ ರಾಜರಂತೆ ಗುರುವಿನ ಬ್ರಹ್ಮಾನಂದ ಸ್ಥಿತಿಯನ್ನು ಅರಿತು. ಸಾಧಿಸಿ ಸಾಯುಜ್ಯ ಮುಕ್ತಿಯನ್ನು ಪಡೆದನು ಎಂಬುದು ಒಂದು ಪುರಾತನ ಕತೆ.
ಯಯಾತಿಯ ಹಿರಿಯ ಮಗನೇ ಯದು. ಐವರು ಮಕ್ಕಳಲ್ಲಿ ಯದುವು ಹಿರಿಯನು. ಶುಕ್ರಾಚಾರನಿಂದ ಯಯಾತಿಯು ಒಂದು ಶಾಪವನ್ನು ಹೊಂದಿದನು. ಪರಿಣಾಮವಾಗಿ ವೃದ್ದಾಪ್ಯ ಹಾಗೂ ನಿರ್ಬಲತೆಗೆ ಒಳಗಾದನು.
ಯಯಾತಿಯ ಕಿರಿಯ ಮಗ ಪುರು ಯುವಕ. ಅವನು ತನ್ನ ಯೌವ್ವನವನ್ನು ತಂದೆಗೆ ಕೊಟ್ಟು ಅವನನ್ನು ಸಂತೋಷ ಪಡಿಸಿದನು. ಅದಕ್ಕಾಗಿ ಯಯಾತಿಯು ತನ್ನ ಹಿರಿಯ ಮಗ ಯದುವನ್ನು ಬಿಟ್ಟು ಪುರುವನ್ನು ಸಿಂಹಾಸನದ ಮೇಲೆ ಕೂರಿಸಿದನು. ಈ ಎಲ್ಲವನ್ನೂ ಗಮನಿಸಿ, ಯದುವು ಬಹಳ ನೊಂದು ಅವಮಾನಿತನಾದನು. ಆತನು, ನೆಮ್ಮದಿ ಕೆಡಿಸುವ ಪ್ರಪಂಚದ ಬಗ್ಗೆ ಜಿಗುಪ್ಪೆಗೊಂಡು ಅರಣ್ಯಕ್ಕೆ ತೆರಳಿದನು. ಅಲ್ಲಿ ಯಾವೊಂದೂ ಪ್ರಾಪಂಚಿಕ ವಸ್ತುವನ್ನೂ ಹೊಂದದೇ ಇದ್ದರೂ ಸಹ, ಅತ್ಯಂತ ಸುಖಿಯಾಗಿ, ದೈವೀಪ್ರಭೆಯನ್ನು ಹೊಂದಿ, ಆನಂದಿಸುತ್ತಿದ್ದಂತಹ ಅವಧೂತನೊಬ್ಬನನ್ನು ಕಂಡನು ! ಆ ಅವಧೂತನಿಂದ ಅತ್ಯಂತ ಪ್ರಭಾವಿತನಾದ ಯದುವು ಆತನನ್ನು ಕುರಿತು ತನ್ನನ್ನು ಅನುಗ್ರಹಿಸಬೇಕೆಂದು ಅತ್ಯಂತ ವಿನಯದಿಂದ ಕೇಳುತ್ತಾ, “ಸ್ವಾಮೀ, ನಿಮ್ಮಲ್ಲಿ ಅಪೂರ್ವವಾದ ಬುದ್ಧಿ ಕಾಣಬರುತ್ತಿದೆ. ಯಮ, ನಿಯಮ ಧರ್ಮಗಳನ್ನು ಪಾಲಿಸುತ್ತಿದ್ದರೂ ನಾನು ಇನ್ನೂ ಪಡೆಯದಂತಹ ಜ್ಞಾನವನ್ನ ಹೊಂದಿ ಎಲ್ಲದರಲ್ಲಿಯೂ ತನ್ನನ್ನೇ ಕಾಣುತ್ತಿರುವ ಮಹಾ ಮಹಿಮರು ತಾವು. ಆದರೂ ಕರ್ತೃತ್ವವಿಲ್ಲದೆಯೇ, ಹುಲು ಮಾನವನಂತೆ ಕಾಣುತ್ತಿದ್ದರೂ ಸರ್ವಜ್ಞನಾಗೇ ಇದ್ದೀರಿ.
ಈ ಲೋಕದಲ್ಲಿ ಧರ್ಮ, ಅರ್ಥ ಕಾಮ ಪ್ರಾಪ್ತಿಗಾಗಿಯೇ ಬಹುಜನರು ತಮ್ಮ ಬುದ್ಧಿಶಕ್ತಿಗಳನ್ನು ಉಪಯೋಗಿಸುತ್ತಿದ್ದಾರೆ. ಸ್ವಧರ್ಮವನ್ನು ಪಾಲಿಸಿದರೂ ಸಹ ಎಲ್ಲರಿಗೂ ತೋರಡಿಸಿಕೊಳ್ಳುವುದೇ ಉದ್ದೇಶವಾಗಿದೆ. ಸ್ವಾರ್ಥಾಭಿಲಾಷೆಗಳನ್ನು ತುಂಬಿಕೊಂಡು ಗಾಯತ್ರಿ ಜಪವನ್ನು ಮಾಡುತ್ತಿದ್ದರೂ, ವೇದೋದ್ಧಾರಕ್ಕಾಗಿಯೇ ಮಾಡುತ್ತಿದ್ದೇವೆ ಎಂದು ಡಾಂಭಿಕವಾಗಿ ಹೇಳಿಕೊಳ್ಳುತ್ತಾರೆ. ಅವರಲ್ಲಿಯೂ ಕೆಲವರು ತಾವು ಕರ್ಮನಿಷ್ಠರೆಂದು ಹೇಳಿಕೊಳ್ಳುತ್ತಾರೆ. ನಿಷ್ಠಾವಂತ ವೈಷ್ಣವರಂತೆ ನಾಮ ಬಳಿದುಕೊಂಡು ಪೂಜಾಪಾತ್ರೆಗಳನ್ನು ತೊಳೆದು, ಅಹಿಂಸಾವಾದಿಯಂತೆ ನಟಿಸುತ್ತಾ, ತಾವು ಮಾತ್ರ ಅವಕಾಶ ಸಿಕ್ಕರೆ ಪ್ರಾಣಿ ಹಿಂಸೆ ಮಾಡಿ ಮಾಂಸವನ್ನು ಭಕ್ಷಿಸುತ್ತಾರೆ. ಇನ್ನೂ ಕೆಲವರು ತಮ್ಮ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲು ತುಲಾ ಭಾರ ಮಾಡಿ ದಾನ ಮಾಡುತ್ತಾರೆ. ಇನ್ನೂ ಕೆಲವರು ಆತ್ಮ ತತ್ವವನ್ನು ಮರೆತು ಮಲ ಮೂತ್ರಗಳಿಂದಾದ ಈ ಶರೀರವನ್ನು ಮಾರಿಕೊಂಡು ಅರಿವಿನ ಜನ್ಮವನ್ನೇ ವ್ಯರ್ಥಮಾಡಿಕೊಳ್ಳುತ್ತಾರೆ. ಹಣಕ್ಕಾಗಿ ಲಕ್ಷ್ಮಿಯನ್ನು ಉಪಾಸನೆ * ಮಾಡುತ್ತಾರೆ. ನಾರಾಯಣನನ್ನು ಉಪಾಸನೆ ಮಾಡುವುದಿಲ್ಲ. ರೋಗ ನಿವಾರಣೆ, ದೀರ್ಘಾಯುಷ್ಯಕ್ಕಾಗಿ ಸೂರ್ಯನನ್ನು ಪೂಜಿಸುತ್ತಾರೆ. ಇವರು ‘ಡಾಂಭಿಕ ಭಕ್ತರು’, ಸ್ಥಿರವಲ್ಲದೆ ಭೋಗ, ಐಶ್ವರ್ಯಗಳನ್ನು ಬೇಡಿಕೊಂಡು ಭಜನೆ ಮಾಡುತ್ತಾರೆ. ವೇದಾಂತಿಗಳಂತೆ ನಟಿಸುತ್ತಾ ಶಾಸ್ತ್ರಗಳನ್ನೇ ಮಾರಿಕೊಳ್ಳುತ್ತಾರೆ. ಈ ರೀತಿ ಅನರ್ಥವಾದ ಅಭ್ಯಾಸಗಳಿಗೆ ಬಲಿಯಾಗಿ ಮೂಢರಾಗಿದ್ದಾರೆ. ಆದರೆ ನೀವು ಇದೆಲ್ಲಕ್ಕೂ ಮೀರಿ ಆತ್ಮ ಸುಖದಲ್ಲಿ ತಲ್ಲೀನರಾಗಿದ್ದೀರಿ.
ನೀವು ಎಲ್ಲವನ್ನೂ ಬಲ್ಲ ಜ್ಞಾನಿಯಾಗಿದ್ದೀರಿ, ನಿಮ್ಮಲ್ಲಿ ಅಜ್ಞಾನವು ನಶಿಸಿಹೋಗಿದೆ. ಜ್ಞಾನದಿಂದ ನೀವು ಒಂದೇ ಆಗಿದ್ದೀರಿ, ಎರಡೆಂಬುದೇ ಇಲ್ಲ ! ಆದರೂ ಪರದೇಶಿಯಾಗಿದ್ದೀರಿ. ಇವೇ ನಿಮ್ಮ ಹಿರಿಮೆಗಳು, ಬ್ರಹ್ಮರಸ ಎಂಬ ಅಮೃತವನ್ನು ನೀವು ಸವಿಯತ್ತಿದ್ದೀರಿ, ಬ್ರಹ್ಮಾನಂದದಲ್ಲಿ ಮೈ ಮರೆತು ಹುಚ್ಚನಂತೆ ಕಾಣುತ್ತಿದ್ದೀರಿ. ನಿಮ್ಮ ದೃಷ್ಟಿಗೆ ಯಾರೂ ಕಾಣಿಸುವುದಿಲ್ಲ. ಕಾಮ, ಲೋಭ ಎಂಬ ದಾವಾಗ್ನಿಯು ಮೂರು ಲೋಕಗಳನ್ನು ಸುಡುತ್ತಿರಲು ನೀವು ಮಾತ್ರ ಇವ್ಯಾವುದಕ್ಕೂ ಬಲಿಯಾಗದೆ ಇರುವುದು ಆಶ್ಚರ್ಯಕರವಾಗಿದೆ. ಒಂದು ಆನೆಯು ನದಿಯ ಎರಡೂ ಪಕ್ಕದ ದಂಡೆಯಲ್ಲಿ ಅಗ್ನಿ ದಹಿಸುತ್ತಿದ್ದರೂ, ಅದರಿಂದ ಪಾರಾಗಿ ನದಿಯಲ್ಲಿಯೂ ಮುಳುಗಿ ಹೋಗದೆ ಹಾಯಾಗಿ ತೇಲುತ್ತಾ ಇರುವಂತೆ, ನೀವು ಜ್ಞಾನಗಂಗೆಯ ಎರಡೂ ಪಕ್ಕದ ದಡದಲ್ಲಿ ಸಂಸಾರದಾವಾಗ್ನಿಯು ಸುಡುತ್ತಿದ್ದರೂ ನೀವು ಮಾತ್ರ ಸಚ್ಚಿದಾನಂದ ಸ್ಥಿತಿಯಲ್ಲಿ ಇದ್ದೀರಿ.
ನೀವು ಬ್ರಹ್ಮನನ್ನು ಅರಿತ ಬ್ರಾಹ್ಮಣರೇ ಆಗಿದ್ದೀರಿ. ನೀವು ರಾಜಾಧಿರಾಜರನ್ನೂ, ಘನವಂತರನ್ನೂ, ಶ್ರೀಮಂತರನ್ನೂ ಆಶ್ರಯಿಸದೆ ದೀನದಲಿತರಿಗೆ ಸ್ಪಂದಿಸುತ್ತಾ ಅವರನ್ನು ಆದರಿಸಿ ಸಂತೈಸಿ ಕರುಣಿಯೇ ಮೂರ್ತಿವೆತ್ತಂತೆ ಇದ್ದೀರಿ. ನಿಮ್ಮ ದೃಷ್ಟಿಯಲ್ಲಿ ಎಲ್ಲ ಜೀವಿಗಳೂ ಒಂದೇ ಆಗಿದ್ದಾರೆ. ಇದಕ್ಕೆಲ್ಲಾ ಏನು ಕಾರಣ ? ಹೀಗಿರಲು ಹೇಗೆ ಸಾಧ್ಯ ?” ಎಂದು ಪ್ರಶ್ನಿಸಿದನು.
ಅದಕ್ಕೆ ಅವಧೂತರು ಯದುರಾಜನ ಬಿನ್ನಪಕ್ಕೆ ಹೀಗೆ ಉತ್ತರಿಸಿದರು.. “ರಾಜನೇ ! ಆಚಾರ್ಯನಿಲ್ಲದೆ ಆತ್ಮ ಪ್ರಾಪ್ತಿ ಆಗದು. ನನ್ನ ಅರಿವಿನಿಂದಲೇ ಅನೇಕ ಆಚಾರ್ಯರನ್ನು ಕಂಡು ಕೊಂಡೆನು. ಪಂಚ ಭೂತಗಳಿಂದಾದ ಈ ಪ್ರಪಂಚದಲ್ಲಿ ಎಲ್ಲಿ ಸದ್ಗುಣಗಳನ್ನು ಕಂಡರೂ, ಅವುಗಳೆಲ್ಲವನ್ನೂ ಗುರುವೆಂಬ ಭಾವನೆಯಿಂದ ಸ್ವೀಕರಿಸುತ್ತಾ ಮುನ್ನಡೆದೆನು. ವಿವೇಕವಿಲ್ಲದವನು ಸಂಸಾರಕ್ಕೆ ದಾಸನಾಗಿ, ಅದರಲ್ಲಿಯೇ ಸಿಲುಕಿಕೊಂಡು, ಹಗಲಿರುಳೂ ಒದ್ದಾಡುತ್ತಿರುವನು. ವೈರಾಗ್ಯ ಎಂಬ ಅರಿವು ಅವನಿಗೆ ಕನಸಿನಲ್ಲಿಯೂ ಬರುವುದಿಲ್ಲ. ಒಳಗಿನ ಸಂಸಾರ ನಾಶವಾದರೆ ವೈರಾಗ್ಯ ಬರುವುದು ಬಹುಸುಲಭ, ನಾನೀಗ ಹೇಳುವ ಗುರುಗಳೆಲ್ಲರೂ ಪಂಚ ಭೂತಗಳ ಲಕ್ಷಣಗಳೇ ಈ ಗುರುಗಳನ್ನು ತಂತ್ರವಾಗಿ ಉಪಯೋಗಿಸಿಕೊಳ್ಳುವುದೇ ವಿವೇಕವಂತನ ಲಕ್ಷಣ ಹೇಗೆಂದರೆ ಮೊರದಲ್ಲಿ ಧಾನ್ಯಗಳನ್ನು ಹಸನು ಮಾಡುವಾಗ ಮೊರವನ್ನು ಎತ್ತಿ ಎತ್ತಿ ಹಾಕುತ್ತಿದ್ದಂತೆ ಕಸ ಕಡ್ಡಿಗಳು ಬಿದ್ದು ಹೋಗಿ ಒಳ್ಳೆ ಧಾನ್ಯಗಳು ಮೊರದಲ್ಲಿಯೇ ಉಳಿಯುವಂತೆ, ವಿವೇಕ ವಿಚಾರಣೆಯಿಂದ ಕೆಟ್ಟದ್ದೆಲ್ಲವನ್ನೂ ತ್ಯಜಿಸಿ ಸನ್ಮಾರ್ಗದಲ್ಲಿ ನಡೆದರೆ ಸತ್ಯವು ತಾನೇ ತಾನಾಗಿ ತಿಳಿಯುತ್ತದೆ. ವಸ್ತುಗಳ ಗುಣಗಳನ್ನು ಅನುಸರಿಸಿ ಅವುಗಳನ್ನೇ ಆಚಾರ್ಯರನ್ನಾಗಿ ಮಾಡಿಕೊಂಡೆ. ಆಗ ಈ ಪ್ರಪಂಚದಲ್ಲಿ ಎಲ್ಲವೂ ಗುರುವಾಗಿಯೇ ಕಂಡು ಬರುತ್ತದೆ. ನಾನಾಶ್ರಯಿಸಿದ 24 ಗುರುಗಳು ಯಾರೆಂದರೆ,
-: ಶ್ಲೋಕ :-
ಪೃಥಿವೀ ವಾಯುರಾಕಾಶಮಾಪೂsಗ್ನಿಶ್ಚಂದ್ರಮಾ ರವಿ | ಕಪೋತೋಽಜಗರಃ ಸಿಂಧುಃ ಪತಂಗೋ ಮಧುಕೃದ್ ಗಜಃ ||
ಮಧುಹಾ ಹರಿಣೋ ಮೀನಃ ಪಿಂಗಲಾ ಕುರರೋsರ್ಭಕಃ | ಕುಮಾರೀ ಶರಕೃತ್ ಸರ್ಪ ಊರ್ಣನಾಭೀಃ ಸುಪೇಶಕೃತ್ ॥
1) ಭೂಮಿ
2) ವಾಯು
3) ಆಕಾಶ
4) ನೀರು
5) ಅಗ್ನಿ
6) ಚಂದ್ರ
7) ಸೂರ್ಯ
8) ಪಾರಿವಾಳ
9) ಹೆಬ್ಬಾವು (ಅಜಗರ)
10) ಸಮುದ್ರ
11) ಪತಂಗ
12) ಜೇನ್ನೋಣ
13) ನೊಣ
14) ಆನೆ
15) ಜಿಂಕೆ
16) ಮೀನು
17) ಪಿಂಗಳಾ ಎಂಬ ವೇಶೈ
18) ಕಪೋತ ಪಕ್ಷಿ
19) ಬಾಲಕ
20) ಕುಮಾರಿ
21) ಯೋಧ
22) ಸರ್ಪ
23) ಜೇಡ
24) ಕಣಜದ ಹುಳು (ಸಂಜೀವಿನಿ ಹುಳು)