The occasion of becoming a parent – ತಂದೆ ತಾಯಿಯಾಗುವ ಸಂದರ್ಭ.

Spread the love

   The occasion of becoming a parent

child care
child care

   ನಿಮಗೆ ಈಗ ತಂದೆ ತಾಯಿ ಆಗುವ ಸುಂದರ ಅವಕಾಶ ಒದಗಿ ಬಂದಿದೆ ಈ ಶುಭ ಸಮಾಚಾರ ತಿಳಿದ ತಕ್ಷಣ ನೀವು ಮೊದಲಿಗೆ ದೇವರಿಗೆ ಧನ್ಯವಾದಗಳು ಅರ್ಪಿಸಿ.

         ಸಾಮಾನ್ಯವಾಗಿ ನಾವೆಲ್ಲರೂ ಈ ವೇಳೆಯಲ್ಲಿ ನನಗೆ ಇಂತಹವುದೇ ಮಗು ಬೇಕು ಅಂದರೆ ಗಂಡು ಅಥವಾ ಹೆಣ್ಣು ಅನ್ನುವ ಕಲ್ಪನೆಯ ಕಡೆಗೆ ಮನಸ್ಸು ವಾಲಿಸುತ್ತೇವೆ. ಇದು ತಪ್ಪು ಅಂತ ಅಲ್ಲ ಆದರೆ ಅತಿಯಾಗಿ ಈ ಬಗ್ಗೆ ಯೋಚಿಸದೆ ಯಾವ ಮಗುವೇ ಆಗಲಿ ಆರೋಗ್ಯವಂತವಾಗಿರಲಿ, ಎಂದು ದೇವರಲ್ಲಿ ಬೇಡಿಕೊಳ್ಳಿ ಇಲ್ಲವಾದರೆ ನಾವು ಬಯಸಿದ ಮಗು ಆಗದಿದ್ದಾಗ ಮನಸ್ಸಿಗೆ ತುಂಬಾ ಬೇಸರವಾಗುವುದು ಈ ಬೇಸರದಿಂದ ದೂರವಿರಲು ನಾವು ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳದಿರುವುದೇ ಒಳಿತು.

          ಹಾಗೆ ನಾವು ಅಂದರೆ ತಂದೆ ತಾಯಿಗಳಿಬ್ಬರು ಈ ಸಂದರ್ಭದಲ್ಲಿ ನಮ್ಮ ಮಗು ವಿಶ್ವ ಪ್ರೇಮಿಯಾಗಿ ಸಕಲ ಜೀವರಾಶಿಯನ್ನು ಪ್ರೀತಿ ಗೌರವದಿಂದ ನೋಡುವಂತಾಗಲಿ ಎಂದು ಆಶಿಸುತ್ತಾ ಜಗಳ, ದ್ವೇಷ, ಅಸೂಯೆ, ಮುಂತಾದ ನಕಾರಾತ್ಮಕ ಧೋರಣೆಗಳಿಂದ ದೂರ ಇರಲು ಪ್ರಯತ್ನಿಸಬೇಕು. ( ಈ ಸಂದರ್ಭದಲ್ಲಿ ಮಾತ್ರವಲ್ಲದೆ ಸದಾ ಹೀಗೆ ಇರಲಿ ಪ್ರಯತ್ನ ಮಾಡಿದರೆ ತುಂಬಾ ಒಳ್ಳೆಯದು)

9 ತಿಂಗಳು, ಮನಸ್ಸಿನಲ್ಲಿ ಬಂದು ಹೋದವು ಅನೇಕ ನಿರೀಕ್ಷೆಗಳು, ರಾತ್ರಿ ಮಲಗಿದಾಗ ಕಂಡೆವು ಅನೇಕ ಕನಸುಗಳು,

         ನಿಮ್ಮ ನಿರೀಕ್ಷೆಗಳು ಹಾಗೂ ಕನಸುಗಳು ನನಸಾಗುವ ಸಂದರ್ಭ ಬಂದೇ ಬಿಟ್ಟಿತು. ಈಗ ನಿಮಗೆ ತುಂಬಾ ಮುದ್ದಾದ ಆರೋಗ್ಯವಂತವಾದ ಮಗು ಹುಟ್ಟಿದೆ ಎರಡನೇ ಧನ್ಯವಾದವನ್ನು ದೇವರಿಗೆ ಅರ್ಪಿಸಿರಿ.

ಮಗುವಿನ ಪಾಲನೆ ಪೋಷಣೆಯ ಸಂದರ್ಭದಲ್ಲಿ ತಾಯಿಯ ಪಾತ್ರ

child care
child care

         ಈಗ ಮಗುವನ್ನು ಪಾಲನೆ ಪೋಷಣೆ ಮಾಡುವ ಸಂದರ್ಭ ಬಂದಿದೆ ಮನೆಯಲ್ಲಿ ಮಗುವಿನ ಜೊತೆ ನೀವಿಬ್ಬರೇ ಅಂದರೆ ನೀವು ಹಾಗೂ ನಿಮ್ಮ ಪತಿ ಇದ್ದೀರಿ. ಈಗ ನೀವು ಪರಸ್ಪರ ಸಹಕಾರದಿಂದ ಮಗುವನ್ನು ಸಾಕಲು ಪ್ರಯತ್ನಿಸಿರಿ. ವಿನಾಕಾರಣ ಸಣ್ಣ ಸಣ್ಣ ವಿಷಯಗಳಿಗೂ ಮಗುವನ್ನು ಹಾಗೆ ಬೆಳೆಸಬೇಕು ಹೀಗೆ ಬೆಳೆಸಬೇಕು ಎಂದು ವಾದ ಮಾಡಬೇಡಿ.

        ಒಂದು ವೇಳೆ ನಿಮ್ಮದು ಅವಿಭಕ್ತ ಕುಟುಂಬವಾಗಿದ್ದು ಅತ್ತೆ, ಮಾವ ಇತ್ಯಾದಿ 5-6 ಜನರಿದ್ದ ಪಕ್ಷದಲ್ಲಿ ಮಗವನ್ನು ಬೆಳೆಸುವಲ್ಲಿ ಸ್ವಲ್ಪ ಗೊಂದಲ ಬರುವುದು ಸಾಮಾನ್ಯ, ಏಕೆಂದರೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೂ ಅತ್ತೆ ಮಾವ ಅಥವಾ ಇತರೆ ಯಾರಾದರೂ ಆಗಿರಲಿ, ಅವರ ಅನಿಸಿಕೆ ಅಭಿಪ್ರಾಯಗಳಿಗೂ ಕೆಲವೊಂದು ವಿಷಯದಲ್ಲಿ ವ್ಯತ್ಯಾಸಗಳಿರುತ್ತವೆ, ಅದರಲ್ಲೂ ಹಿರಿಯರ ಅಭಿಪ್ರಾಯಗಳು ಇನ್ನೂ ಸ್ವಲ್ಪ ಬೇರೆ ರೀತಿಯದೇ ಇರುವುದು, ಇದು ಎಲ್ಲಾ ಒಟ್ಟು ಕುಟುಂಬದಲ್ಲಿ ಸಹಜವೇ ಆಗಿರುತ್ತದೆ.

        ಕುಟುಂಬದಲ್ಲಿ ಪ್ರೀತಿ-ವಿಶ್ವಾಸ ಪರಸ್ಪರ ಸಹಕಾರಗಳು ಇರುವಂತಹ ವಾತಾವರಣವಾದರೆ, ಹಿರಿಯರಾದ ಅತ್ತೆ ಮಾವ ತಿಳುವಳಿಕೆಯುಳ್ಳವರಾದರೆ ಸಮಸ್ಯೆಗಳು ತುಂಬಾ ಕಡಿಮೆ ಹಾಗೂ ಪರಿಹಾರಗಳು ಇರುತ್ತವೆ. ಒಂದು ವೇಳೆ ಕುಟುಂಬದಲ್ಲಿ ಅತ್ತೆ-ಸೊಸೆ, ಮಾವ-ಸೊಸೆ, ಅಥವಾ ಇನ್ಯಾರೇ ಆಗಿರಲಿ ಅವರೊಂದಿಗೆ ನಿಮ್ಮ ಸಂಬಂಧ ಅಷ್ಟಾಗಿ ಸರಿ ಇಲ್ಲದಿದ್ದಾಗ ಮಗುವನ್ನು ಬೆಳೆಸುವುದು ನಮಗೆ ಸ್ವಲ್ಪ ಕಷ್ಟ ಎನಿಸುವುದು.

       ಆದರೆ ನೀವು ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಮಗುವಿಗೆ ಜನ್ಮ ನೀಡಿ ಮರುಜನ್ಮ ಪಡೆದಿದ್ದೀರಿ. ಇದು ಸಾರ್ಥಕವಾಗಬೇಕಾದರೆ ಖಂಡಿತ ನೀವು ಇನ್ನೂ ಸ್ವಲ್ಪ ಹೆಚ್ಚಿನ ತ್ಯಾಗ ಮಾಡಬೇಕಾಗಿ ಬರಬಹುದು. ಅಂದರೆ ನಿಮ್ಮ ಮಗುವಿಗೋಸ್ಕರ ನೀವು ಸಾಧ್ಯವಾದಷ್ಟು ಮನೆಯವರೊಡನೆ ಕಷ್ಟವಾದರೂ ಸರಿ, ಉತ್ತಮ ಬಾಂಧವ್ಯವನ್ನು ಹೆಚ್ಚಿಸಿಕೊಂಡು ಮಗುವಿನ ಪಾಲನೆ ಪೋಷಣೆಯಲ್ಲಿ ಅವರ ಸಹಾಯ ಸಹಕಾರ ತೆಗೆದುಕೊಳ್ಳಿ. ಮೊದಮೊದಲು ಕಷ್ಟವಾದರೂ ನಂತರ ಖಂಡಿತ ಪರಿಸ್ಥಿತಿ ಸಮಾಧಾನಕರವಾಗುವುದರಲ್ಲಿ ಸಂಶಯವಿಲ್ಲ ಈ ಸಂದರ್ಭದಲ್ಲಿ ಪಾಲಿಸಬೇಕಾದ ಕೆಲವು ಸಂಗತಿಗಳು ಈ ಕೆಳಕಂಡಂತಿವೆ.

        ಮೊದಲನೆಯದಾಗಿ ಮಗುವಿನ ಮುಂದೆ ಕುಟುಂಬದ ಇತರೆ ಸದಸ್ಯರೊಡನೆ ಜಗಳವಾಡುವುದು ವಿತಂಡವಾದ ಮಾಡುವುದು ಮಾಡಬೇಡಿ. ನಾವು ಮಗು ತುಂಬಾ ಚಿಕ್ಕದು ಅದಕ್ಕೆ ಎರಡು ಮೂರು ವರ್ಷ ನಾವು ಜಗಳ ಮಾಡಿದ್ದು ವಾದ ಮಾಡುವುದು ತಿಳಿಯುವುದಿಲ್ಲ ಅಂತ ನಿರ್ಲಕ್ಷ ಮಾಡಬೇಡಿ ಏಕೆಂದರೆ ಆ ವಯಸ್ಸಿನಲ್ಲಿಯೂ ಸಹ ಮಕ್ಕಳಿಗೆ ಸರಿಸುಮಾರಾಗಿ ಅರ್ಥ ಮಾಡಿಕೊಳ್ಳುವ ತಿಳುವಳಿಕೆ ಬಂದಿರುತ್ತದೆ.

       ಎರಡನೆಯದಾಗಿ ಮಗುವಿಗೆ ತರುವ ಬಟ್ಟೆ ಆಟದ ಸಾಮಾನು ಅಥವಾ ಇನ್ಯಾವುದೇ ವಸ್ತು ತರುವಾಗ ನಾನು ಹೇಳಿದ್ದೆ ತರಲಿ, ಎಂದು ವಾದ ಮಾಡದೆ ಕುಟುಂಬದಲ್ಲಿರುವ ಇತರ ಸದಸ್ಯರ ಅಭಿಪ್ರಾಯಗಳಿಗೂ ಸ್ವಲ್ಪ ಗಮನ ನೀಡಿ.

         ಮೂರನೆಯದಾಗಿ ಮಗುವಿಗೆ ಊಟ ಮಾಡಿಸುವ ವಿಚಾರಕ್ಕೂ ಸಹ ಮಗುವಿನ ಮುಂದೆ ಇತರರೊಡನೆ ಅದು ತಿನಿಸಿದರೆ ಒಳ್ಳೆಯದು ಇದು ತಿನ್ನಿಸಿದರೆ ಒಳ್ಳೆಯದಲ್ಲ ಎಂದು ಚರ್ಚಿಸಿ ಅದನ್ನೇ ದೊಡ್ಡದಾಗಿ ವಾದ ಮಾಡದೆ ಮಗು ಎದುರುಗಡೆ ಇಲ್ಲದಿರುವ ಸಂದರ್ಭದಲ್ಲಿ ಅತ್ತೆ ಮಾವ ಅಥವಾ ಯಾರೇ ಆಗಿರಲಿ ಅವರೊಡನೆ ಚರ್ಚಿಸಿ ಉತ್ತಮ ನಿರ್ಣಯ ತೆಗೆದುಕೊಂಡು ಮಗುವಿನ ಆರೋಗ್ಯಕ್ಕೆ ಪೂರಕವಾದ ಉತ್ತಮವಾದ ಆದಷ್ಟು ಮನೆಯಲ್ಲಿ ತಯಾರು ಮಾಡಿದ ಆಹಾರಗಳನ್ನು ನೀಡಿ ಹೀಗೆ ಮಾಡದೆ, ವಾದ-ವಿವಾದಗಳೇ ಆಹಾರ ಪದಾರ್ಥಗಳಾದರೆ, ಖಂಡಿತ ನಿಮ್ಮ ಮಗುವಿಗೆ ಊಟದ ವಿಷಯವೇ ಜಿಗುಪ್ಪೆ ತರಬಹುದು.

        ನಾವು ಯಾವ ಮನಸ್ಸಿನಿಂದ ಮಗುವಿಗೆ ತಯಾರಿಸುತ್ತೇವೋ ಯಾವ ಮನಸ್ಸಿನಿಂದ ಊಟ ಮಾಡಿಸುತ್ತೇವೋ ಅಂದರೆ ನಮ್ಮ ಯೋಚನೆಗಳು ಯಾವ ರೀತಿ ಇರುತ್ತವೋ ಅದೇ ಪ್ರಭಾವ ಮಗುವಿನ ಊಟದ ಮೇಲೆ ಬೀಳುವುದೆಂದು ಮರೆಯಬೇಡಿ.

          ನಾಲ್ಕನೇದಾಗಿ ಮನೆಯಲ್ಲಿ ನಿಮ್ಮ ಮಗುವಿನ ವಯಸ್ಸಿನ ಬೇರೆ ಮಕ್ಕಳಿದ್ದ ಸಂದರ್ಭದಲ್ಲಿ (ಅಣ್ಣ ತಮ್ಮ ಅಕ್ಕ ತಂಗಿಯರ ಮಕ್ಕಳು ನೀವು ಬೇರೆ ಮಕ್ಕಳೊಂದಿಗೆ ಹೋಲಿಸಿ ನಿಮ್ಮ ಮಗುವಿಗೆ ಊಟದ ವಿಚಾರವಾಗಿ ಬಲವಂತ ಮಾಡಿ ತಿನ್ನಿಸಬೇಡಿ. ಮಗುವಿಗೆ ಹೊಟ್ಟೆಗೆ ಸಾಕಾಗುವಷ್ಟು ತಿನ್ನಲು ಬಿಡಿ, ನನ್ನ ಮಗು ಸರಿಯಾಗಿ ತಿನ್ನುವುದಿಲ್ಲ ಎಂದು ಮಗುವಿಗೆ ಬಲವಂತವಾಗಿ ತಿನ್ನಿಸಲು ಹೋದರೆ ಅದು ಮಗುವಿಗೆ ಕಿರಿಕಿರಿಯಾಗಿ ಊಟದ ಬಗ್ಗೆ ಅಸಡ್ಡೆ ತೋರಿಸಲು ಪ್ರಾರಂಭಿಸುವುದು.

         ಐದನೆಯದಾಗಿ ನಿಮ್ಮ ಮಗು ಈಗ 7-8 ತಿಂಗಳ ಮಗುವಾಗಿದೆ ಸ್ವಲ್ಪ ಸ್ವಲ್ಪ ಊಟ ಮಾಡಲು ಪ್ರಾರಂಭಿಸಿದೆ ಈಗ ನೀವು ಆದಷ್ಟು ಸಮಯಕ್ಕೆ ಸರಿಯಾಗಿ ತಿನ್ನಿಸಲು ಅಭ್ಯಾಸ ಮಾಡಿಕೊಳ್ಳಿ ಊಟ ಮಾಡಿಸಿದ ನಂತರ ಪದೇ ಪದೇ ತಿನ್ನಿಸುವುದು, ಹಣ್ಣು ಬಿಸ್ಕೆಟ್ ಅಥವಾ ಇನ್ಯಾವುದೇ ತಿಂಡಿ ತಿನಿಸು ಕೊಡುವುದನ್ನು ಅಭ್ಯಾಸ ಮಾಡಬೇಡಿ. ಎಲ್ಲದಕ್ಕೂ ಒಂದು ಶಿಸ್ತು ಬದ್ಧ ಕ್ರಮಬದ್ಧವಾದ ರೂಢಿ ಇರಲಿ, ಇಲ್ಲವಾದರೆ ಮಗು ಅದನ್ನೇ ರೂಡಿ ಮಾಡಿಕೊಂಡು ದೊಡ್ಡದಾದ ಮೇಲು ಮತ್ತೆ ಮತ್ತೆ, ತಿನ್ನಲು ಹೇಳಿ ಹಠ ಮಾಡುವುದನ್ನು ರೂಢಿ ಮಾಡಿಕೊಳ್ಳುವುದು.

       6ನೇಯದಾಗಿ ಮಗುವಿಗೆ 2-3 ವರ್ಷದ್ದಾಗಿದೆ ಮನೆಯ ಎಲ್ಲಾ ಸದಸ್ಯರ ಜೊತೆ ಬೆರೆತು ಮಾತನಾಡಲು ಪ್ರಾರಂಭಿಸಿದೆ . ಈ ಸಂದರ್ಭದಲ್ಲಿ ನೀವು ಮಗುವಿಗೆ ಪ್ರತಿಯೊಬ್ಬರ ಜೊತೆ ಅಂದರೆ ತಾತ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ ಅವರ ಮಕ್ಕಳು ಅಥವಾ ಯಾರೇ ಆಗಿರಲಿ ಒಟ್ಟಾರೆ ಮನೆಯಲ್ಲಿರುವ ಎಲ್ಲರ ಜೊತೆಗೂ ವಿನಯವಾಗಿ ಗೌರವದಿಂದ ಮಾತನಾಡಿಸುವ ಅಭ್ಯಾಸವನ್ನು ಪ್ರಾರಂಭದಿಂದ ಕಲಿಸಿರಿ. ಯಾವ ಸಂದರ್ಭದಲ್ಲೂ ನಿಮಗಾಗಲಿ ಅಥವಾ ಯಾರಿಗೇ ಆಗಲಿ ಎದುರುವಾದ ಮಾಡುವುದನ್ನು ಖಂಡಿಸಿ.

        ನಿಮಗೆ ನಿಮ್ಮ ಮನೆಯಲ್ಲಿರುವ ಇತರೆ ಸದಸ್ಯರೊಂದಿಗೆ ಸ್ವಲ್ಪ ಬೇಜಾರು ಅಸಮಾಧಾನ ಇರುವುದೆನ್ನಿ, ಆಗ ನೀವು ಅದನ್ನು ಮಕ್ಕಳ ಮೂಲಕ ಅಂದರೆ ಮಕ್ಕಳು ಅವರಿಗೆ ಎದುರು ವಾದಿಸಿದಾಗ ಅಥವಾ ಅವರೊಡನೆ ಒರಟಾಗಿ ವರ್ತಿಸಿದಾಗ ನೀವು ಖುಷಿಪಟ್ಟು ಸಮಾಧಾನ ಮಾಡಿಕೊಂಡು ಸುಮ್ಮನಿದ್ದರೆ ಖಂಡಿತ ನೀವು ಮೂರ್ಖರಾದಂತೆ. ಕಾರಣ ಮಕ್ಕಳಿಗೆ ಅದೇ ಅಭ್ಯಾಸವಾಗಿ ಕೊನೆಗೆ ನಿಮ್ಮ ಬಳಿಯೂ ಹಾಗೆ ನಡೆದುಕೊಂಡು ಮುಂದೆ ಒರಟು ಸ್ವಭಾವದ ವ್ಯಕ್ತಿಯಾಗುತ್ತಾರೆ.ಅದಕ್ಕಾಗಿ ದಯಮಾಡಿ ನೀವು ನಿಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ಬಳಸಿಕೊಂಡು ಮನೆ ಇತರ ಸದಸ್ಯರೊಡನೆ ಕೆಟ್ಟದಾಗಿ ನಡೆದುಕೊಳ್ಳುವುದನ್ನು ಕಲಿಸಬೇಡಿ.

         ಏಳನೆಯದಾಗಿ ಮನೆಯ ಇತರ ಸದಸ್ಯರ ನಡತೆ ಯಾವ ರೀತಿಯೇ ಇರಲಿ ನೀವು ಮಕ್ಕಳ ಎದುರು ಅವರ ಗುಣ ನಡತೆಗಳ ಬಗ್ಗೆ ಅಸಮಾಧಾನದಿಂದ ಮಾತನಾಡದೆ ಸಿಡಿಮಿಡಿಕೊಳ್ಳದೆ ಸಮಾಧಾನದಿಂದ ಇರಲು ಪ್ರಯತ್ನಿಸಿ, ಹಾಗೂ ನಿಮ್ಮ ಮಕ್ಕಳು ಸಹ ಇದೇ ರೀತಿ ಇರುವಂತೆ ನೋಡಿಕೊಳ್ಳಿ ಈ ರೀತಿ ಮಾಡುವ ನಿಮ್ಮ ಒಳ್ಳೆಯ ಗುಣಗಳು ಬ್ಯಾಂಕಿನಲ್ಲಿ ಇಟ್ಟ ಡಿಪಾಜಿಟ್ ತರಹ ದಿನದಿನಕ್ಕೂ ಆ ಹಣದ ಮೊತ್ತ ಹೆಚ್ಚಾಗಿ ಭವಿಷ್ಯತ್‌ಗೆ ಲಾಭ ಆಗುವ ಹಾಗೆ ನಿಮ್ಮ ಈಗಿನ ಸಮಾಧಾನದ ವರ್ತನೆ, ಒಳ್ಳೆಯ ನಡತೆ ನಿಮ್ಮ ಮಕ್ಕಳಿಗೆ ದೊಡ್ಡ ಲಾಭವಾಗುವುದು ಅಂದರೆ ಅವರು ಸಹ ಒಳ್ಳೆಯ ತಾಳ್ಮೆಯುಳ್ಳ, ಗುಣವಂತರಾದ ವ್ಯಕ್ತಿಯಾಗುವ ಸಾಧ್ಯತೆಗಳು ತುಂಬಾ ಹೆಚ್ಚು.

        ಎಂಟನೇದಾಗಿ ಮನೆಯ ಇತರೆ ಸದಸ್ಯರು ಯಾರಾದರೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದನ್ನು ನಿಮ್ಮ ಮಕ್ಕಳು ಕೇಳಿಸಿಕೊಂಡು ನಿಮ್ಮ ಬಳಿ ಬಂದು ಅದರ ಬಗ್ಗೆ ಹೇಳಲು ಬಂದರೆ ಖಂಡಿತ ನೀವು ಅದನ್ನು ಕೇಳಿಸಿಕೊಂಡು ಅದಕ್ಕೆ ಪ್ರತಿಯಾಗಿ ನೀವು ಸಹ ಅವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬೇಡಿ, ದಯಮಾಡಿ ನೀವು ಹೀಗೆ ಮಾಡಿ.

           ನಿಮ್ಮ ಮಕ್ಕಳು ಕೇಳಿಸಿಕೊಂಡು ಹೇಳುವ ಮಾತುಗಳನ್ನು ಪೂರ್ತಿ ಹೇಳುವ ಮೊದಲೇ ನೀವು ನಿಮ್ಮ ಮಕ್ಕಳಿಗೆ ಈ ರೀತಿಯಾಗಿ ಬೇರೆಯವರು ಯಾರ ಬಗ್ಗೆಯೇ ಆಗಲಿ ಯಾವ ವಿಚಾರವೇ ಆಗಲಿ, ಮಾತನಾಡುವುದನ್ನು ಕೇಳಿಸಿಕೊಂಡು ಹೇಳುವುದು ನನಗೆ ಇಷ್ಟವಾಗುವುದಿಲ್ಲ ನೀನು ಅವರು ಮಾತನಾಡಿದ್ದು ಕೇಳಿಸಿಕೊಂಡಿದ್ದು ಕೇಳಿ ನನಗೆ ಬೇಜಾರಾಯ್ತು ಅದರ ಬಗ್ಗೆ ನನಗೆ ಹೇಳಲು ಬಂದಿದ್ದು ನೋಡಿ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ ಮಾತುಗಳಿಗಿಂತಲೂ ತುಂಬಾನೇ ಬೇಜಾರು ಆಯಿತು. ಖಂಡಿತ ನೀನು ಇನ್ನು ಮುಂದೆ ಈ ರೀತಿ ಮಾಡಬೇಡ, ಎಂದು ಒಂದು ಸಾರಿ ಹೇಳಿ ನೋಡಿ ಖಂಡಿತ ನಿಮ್ಮ ಮಗು ಮುಂದೆ ಯಾವತ್ತೂ ಬೇರೆಯವರು ಆಡುವ ಮಾತಿಗೆ ಕಿವಿಗೊಡದೆ ಉತ್ತಮ ವ್ಯಕ್ತಿ ಆಗುವ ಸಾಧ್ಯತೆ ತುಂಬಾ ಹೆಚ್ಚು. ಇಂತಹ ಒಳ್ಳೆಯ ಅವಕಾಶವನ್ನು ಏಕೆ ಕಳೆದುಕೊಳ್ಳುವಿರಿ.

        ಯಾರಿಗೆ ಆಗಲಿ ಬೇರೆಯವರು ನಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದಾಗ ಕೋಪ ಬಂದು ಅವರನ್ನು ಬಯ್ಯಬೇಕು ಎಂಬ ಭಾವನೆ ಬರುವುದು ಸಾಮಾನ್ಯ ಆದರೆ ನಿಮ್ಮ ಮಕ್ಕಳಿಗಾಗಿ ಬಂದು ಅವರನ್ನು ಬಯ್ಯಬೇಕು ಅವರು ಒಳ್ಳೆಯ ಸುಸಂಸ್ಕೃತ ಉನ್ನತ ಸ್ವಭಾವದ ವ್ಯಕ್ತಿಗಳಾಗಿ ನಿರ್ಮಾಣವಾಗಬೇಕಾದರೆ ನಿಮ್ಮ ಕೋಪ ಅಸಮಾಧಾನ ಎಲ್ಲವನ್ನು ಬದಿಗೊತ್ತಿ ಸ್ವಲ್ಪ ಸಮಾಧಾನ, ವಿವೇಚನೆಯಿಂದ ವರ್ತಿಸಿದರೆ ಮುಂದೆ ನೀವು ಅತಿ ಒಳ್ಳೆಯ ಸ್ವಭಾವದ ಅಮ್ಮನಾಗುವ ಅವಕಾಶ ಸಿಗುತ್ತದೆ. ಕಾರಣ ನಿಮ್ಮ ಮಕ್ಕಳು ದೊಡ್ಡವರಾದಾಗ ನಿಮ್ಮ ಗುಣ ಸ್ವಭಾವಗಳು ಅವರ ಮೇಲೆ ಪರಿಣಾಮ ಬೀರಿ ನಮ್ಮ ತಾಯಿಯ ಒಳ್ಳೆಯ ಗುಣ ನಡತೆಗಳಿಂದ ನಾನು ಈಗ ಉತ್ತಮ ವ್ಯಕ್ತಿಯಾಗಿ ರೂಪುಗೊಂಡಿದ್ದೇನೆ, ಅಂತ ನಿಮಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪರೋಕ್ಷವಾಗಿ ಧನ್ಯವಾದಗಳನ್ನು ಅರ್ಪಿಸುವುದರಲ್ಲಿ ಸಂದೇಹವಿಲ್ಲ.

       ಒಂದು ವೇಳೆ ನೀವು ಮಕ್ಕಳು ಕೇಳಿಸಿಕೊಂಡು ಹೇಳುವ ಮಾತಿಗೆ ಬೆಲೆ ಕೊಟ್ಟು ನೀವು ಸಹ ಬೇರೆಯವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ರೂಡಿಸಿಕೊಂಡರೆ ಮಕ್ಕಳಿಗೆ ಅದೇ ರೂಢಿಯಾಗಿ ಅವರು ಒಳ್ಳೆಯ ವಿಚಾರಗಳ ಕಡೆ ಗಮನ ಹರಿಸುವುದಕ್ಕಿಂತ ಇಂಥಹ ಕೆಲಸಕ್ಕೆ ಬಾರದ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ.

ಪುಟ್ಟ ಮಕ್ಕಳಿಗೆ ಹಾಕುವ ಡ್ರೆಸ್ ಕುರಿತಂತೆ.

child care
child care

        ಹೊಸ ಬಟ್ಟೆಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಹೊಸ ಬಟ್ಟೆಗಳನ್ನು ನೋಡಿದರೆ ಸ್ವರ್ಗವೇ ಸಿಕ್ಕಷ್ಟು ಖುಷಿಪಡುತ್ತಾರೆ.

         ಪುಟ್ಟ ಮಕ್ಕಳಿಗೆ ನಾವು ಡ್ರಸ್‌ಗಳನ್ನು ತೆಗೆದುಕೊಳ್ಳುವಾಗ ಆದಷ್ಟು ಒಳ್ಳೆಯ ಕಾಟನ್ ಬಟ್ಟೆಗಳನ್ನು ಆರಿಸಿಕೊಳ್ಳಬೇಕು. ಚಿಕ್ಕ ಹುಡುಗಿಯರಿಗಂತೂ ತುಂಬಾನೆ ಡಿಸೈನ್ ಇರುವ ಬಣ್ಣ ಬಣ್ಣದ, ಮಣಿ ಮತ್ತು ಹರಳು ಮುಂತಾದವುಗಳನ್ನು ಹಾಕಿರುವ ಬಟ್ಟೆಗಳು ಇರುತ್ತವೆ. ನಾವು ಆದಷ್ಟು ಚಿಕ್ಕ ಮಕ್ಕಳಿಗೆ (ಹೆಣ್ಣು ಮಗುವಿಗೆ) ಚರ್ಮಕ್ಕೆ ಹಾನಿಯಾಗದಂತಹ ಚುಚ್ಚದಂತಹ ತರಚದಂತಹ ಡಿಸೈನ್ ಕಡಿಮೆ ಇರುವ ಡ್ರೆಸ್ ಗಳನ್ನು ಆರಿಸಿಕೊಳ್ಳಬೇಕು.

(ಕೆಲವು ಪುಟಾಣಿಗಳು ಹೊಸ ಬಟ್ಟೆಗಳನ್ನು ಹಾಕುವ ಮೊದಲೇ ನನಗೆ ಚುಚ್ಚುವ ಡ್ರೆಸ್ ಬೇಡ ಎಂದು ಜೋರಾಗಿ ಹೇಳುತ್ತಾರೆ. ಕಾರಣ ಅವರಿಗೆ ಚುಚ್ಚುವ ಡ್ರೆಸ್‌ಗಳ ಅನುಭವ ಚೆನ್ನಾಗಿ ಆಗಿರಬೇಕಲ್ಲವೇ)

          ಅಂಗಡಿಯಿಂದ ಡ್ರೆಸ್ ತಂದ ತಕ್ಷಣ ಡ್ರೆಸ್‌ಗೆ ಅಂಟಿಸಿರುವ ಲೇಬಲ್‌ಗಳು ಪಿನ್ನುಗಳು ಗಟ್ಟಿಯಾದ ಪ್ಲಾಸ್ಟಿಕ್ ಮುಂತಾದವುಗಳನ್ನು ಗಮನಿಸಿ ತೆಗೆದು ಹಾಕಬೇಕು. ಸಾಧ್ಯವಾದಷ್ಟು ತುಂಬಾ ಚಿಕ್ಕ ಮಗುವಿಗೆ ಹಾಕುವ ಡ್ರೆಸ್‌ಗಳನ್ನು ಉಗುರು ಬೆಚ್ಚನೆಯ ಬಿಸಿ ನೀರಿನಲ್ಲಿ ಸೋಪಿನೊಂದಿಗೆ ತೊಳೆದು ಒಣಗಿಸಿ ಹಾಕುವುದರಿಂದ ಹೊಸ ಬಟ್ಟೆಯಲ್ಲಿರುವ ಹಾನಿಕಾರಕ ಬಣ್ಣದ ಅಂಶ ಹೋಗುವುದು. ಹಾಗೂ ಹೊಸ ಬಟ್ಟೆಯಲ್ಲಿರುವ ಗಡಸುತನವು ಹೋಗಿ ಮೃದುವಾಗುವುದರಿಂದ ಮಕ್ಕಳಿಗೆ ಧರಿಸಿದಾಗ ಆರಾಮದಾಯಕವಾಗಿರುತ್ತದೆ.

       ನಾವು ಚಿಕ್ಕವರಿದ್ದಾಗ ಹಳ್ಳಿಯಲ್ಲಿ ಆಗತಾನೇ ಹುಟ್ಟಿದ ಮಕ್ಕಳಿಗೆ ಕೆಲವು ದಿನಗಳ ಕಾಲ ಯಾವುದೇ ರೀತಿಯ ಹೊಲಿದ ಬಟ್ಟೆಗಳನ್ನು ಹಾಕದೆ ಹಳೆಯದಾದ ಬಿಳಿಯ ಕಾಟನ್ ಪಂಚೆಯಲ್ಲಿ ಚಿಕ್ಕ ಚಿಕ್ಕ ಭಾಗ ಮಾಡಿಕೊಂಡು ಶುಭಗೊಳಿಸಿ, ನಂತರ ಈ ಬಟ್ಟೆಯನ್ನು ಮಗುವಿನ ಮೈಗೆ (ದೇಹಕ್ಕೆ) ಸುತ್ತುತ್ತಿದ್ದರು. ಕೆಲವು ದಿನಗಳ ಕಳೆದ ನಂತರ ಮನೆಯಲ್ಲಿರುವ ಇತರೆ ಮಕ್ಕಳು ಧರಿಸಿರುವಂತಹ ಹಳೆಯ ಡ್ರಸ್ಸುಗಳನ್ನು ಶುಭ್ರಗೊಳಿಸಿಟ್ಟುಕೊಂಡು ಹಾಕುತ್ತಿದ್ದರು. ಕೆಲವು ವಾರಗಳು ಹೊಸ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಹಾಕುತ್ತಿರಲಿಲ್ಲ. ಪುಟ್ಟ ಮಕ್ಕಳಿಗೆ ಹೊಸ ಬಟ್ಟೆ ಹಾಕಿದರೆ ದೃಷ್ಟಿಯಾಗಿ ಹುಷಾರಿಲ್ಲದಂತೆ ಆಗುವುದೆಂಬ ನಂಬಿಕೆ ಅವರದ್ದಾಗಿತ್ತು. ಈ ಸಂಪ್ರದಾಯ ಎಷ್ಟು ಒಳ್ಳೆಯದು ನೋಡಿ ಪುಟ್ಟ ಕಂದಮ್ಮನಿಗೆ ಹೊಸ ಬಟ್ಟೆಯಿಂದ ಹೊಲಿದ ಡ್ರೆಸ್‌ನಿಂದ ಯಾವುದೇ ರೀತಿಯ ಕಿರಿಕಿರಿ ಆಗದಿರಲಿ ಎಂದು ಈ ರೀತಿ ಮಾಡಿದ್ದಾರೆ ಕೆಲವು ಸಂಪ್ರದಾಯ ಮತ್ತು ಆಚರಣೆಗಳ ಹಿಂದೆ ಎಂತಹ ವೈಜ್ಞಾನಿಕ ಕಾರಣಗಳು ಇವೆ ಅಲ್ಲವೇ?

       ಹಾಗೆಯೇ ಮತ್ತೊಂದು ವಿಷಯ ಪ್ಯಾಂಟಿಗೆ ಹಾಕಿರುವ ಎಲಾಸ್ಟಿಕ್ ಇತರೆ ಡ್ರೆಸ್‌ಗೆ ಹಾಕಿರುವ ಎಲಾಸ್ಟಿಕ್‌ಗಳನ್ನು ಸಹ ಸರಿಯಾಗಿ ಗಮನಿಸಿ ಅದು ಮಗುವಿಗೆ ಕೊರೆಯುವುದೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡಿ ಹಾಕಿರಿ. ನಾನು ಶಿಕ್ಷಕಿಯಾಗಿದ್ದಾಗ ಹಳ್ಳಿಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಒಂದು ದಿನ ಸುಮಾರು ಒಂದು ವರ್ಷದ ಮಗು ತುಂಬಾ ಅಳುತ್ತಿತ್ತು. ಅದರ ತಾಯಿ ಎಷ್ಟು ಸಮಾಧಾನ ಮಾಡಿದರೂ ಸಹ ಅಳುತ್ತಲೇ ಇತ್ತು. ಆ ತಾಯಿಯ ವಯಸ್ಸು ಸಹ ತೀರಾ ಚಿಕ್ಕದು ಅಂದರೆ 19-20 ವರ್ಷ ವಯಸ್ಸು ಇರಬಹುದು. ನಾನು ಆ ಮಗು ರೋಧಿಸುವುದನ್ನು ನೋಡಿ ಅದು ಹಾಕಿಕೊಂಡಿದ್ದ ಡ್ರೆಸ್ ಕಡೆ ಗಮನಿಸಿದಾಗ ಆ ಮಗುವಿಗೆ ಹಾಕಿದ್ದ ನಿಕ್ಕರ್ ಎಲಾಸ್ಟಿಕ್ ತೀರಾ ಚಿಕ್ಕದಾಗಿದ್ದು ಮಗುವಿನ ಸೊಂಟವನ್ನು ಕೆಂಪಗೆ ಕೊರದಿತ್ತು ಅದರಿಂದಾಗಿ ಮಗು ಅಳುವುದು ತಿಳಿಯಿತು, ಕೂಡಲೇ ನಾನು ಮಗುವಿನ ತಾಯಿಗೆ ನಿಕ್ಕರ್ ಬಿಚ್ಚಲು ತಿಳಿಸಿ ಏನಮ್ಮ ನೀನು ಎಲಾಸ್ಟಿಕ್ ನೋಡಿ ಹಾಕಬೇಕು ಎಂದೆ. ಅದಕ್ಕೆ ಆ ತಾಯಿ ಇದು ಹೊಸ ನಿಕ್ಕರ್ ಊರಿಗೆ ಬರುವ ಆತುರದಲ್ಲಿ ನಾನು ಗಮನಿಸಲಿಲ್ಲ ಎಂದು ಹೇಳಿದರು ನಿಕ್ಕರ್ ಬಿಚ್ಚಿದ ಮೇಲೆ ಮಗು ಸಮಾಧಾನಗೊಂಡಿತು.

      ಹೀಗೆ ಅನೇಕ ಘಟನೆಗಳು ನಡೆಯುತ್ತಿರುತ್ತವೆ ಆದ ಕಾರಣ ನಾವು ಮರೆಯದೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಮಕ್ಕಳಿಗೆ ಡ್ರೆಸ್ ಹಾಕಬೇಕು. ಇದೇ ರೀತಿಯಾಗಿ ಕೈಗೆ ಕಾಲಿಗೆ ಹಾಕುವ ಕಡಗ ಬಳೆಗಳು ಕಿವಿಗೆ ಹಾಕುವ ಓಲೆಗಳು ಸಹ ಮಕ್ಕಳಿಗೆ ಗಾಯಗಳನ್ನು ಮಾಡದಂತೆ ಇರಲಿ.

        ಚಿಕ್ಕ ಗಂಡು ಮಕ್ಕಳಿಗೆ ಪ್ಯಾಂಟ್ ಹಾಕುವಾಗ ಅದರಲ್ಲಿರುವ ಜಿಪ್ಪಿನ ಕಡೆಗೂ ಗಮನಿಸಿ ಪ್ಯಾಂಟ್ ಹಾಕುವ ಮೊದಲು ಒಳಉಡುಪು ಧರಿಸಿ ಹಾಕಬೇಕು, ಅನೇಕ ಚಿಕ್ಕ ಹುಡುಗರಿಗೆ ಜಿಪ್‌ಗಳಿಂದ ಹಾನಿಯಾಗಿರುವುದು ಗಮನಿಸಿರುತ್ತೇವೆ.

       ಕೆಲವರು ಹೆಣ್ಣು ಮಕ್ಕಳಿಗೆ ಜಡೆಯನ್ನು ತುಂಬಾ ಬಿಗಿಯಾ ಹಾಕಿ ಮೇಲಕ್ಕೆ ಕಟ್ಟಿರುತ್ತಾರೆ. ರಬ್ಬರ್ ಬ್ಯಾಂಡ್ ಸಹ ಕೊರೆಯುವ ಹಾಗೆ ಹಾಕಿರುತ್ತಾರೆ ಇದರಿಂದ ಮಕ್ಕಳಿಗೆ ತುಂಬಾನೇ ಕಿರಿಕಿರಿ ನೋವುಂಟಾದರೂ ಸಹ ಹೇಳಲು ತಿಳಿಯದೆ, ಹಾಗೆ ಇರುತ್ತಾರೆ. ಚಂದ ಕಾಣಲೆಂದು ತಲೆ ತುಂಬಾ ಹೇರ್ ಬ್ಯಾಂಡ್ ಹಾಕಿರುತ್ತಾರೆ, ಇನ್ನೂ ಕೆಲವರಂತೂ ಕ್ರೀಮ್ ಹಚ್ಚಿ ಲಿಪ್ಪಿಕ್ ಹಾಕಿ ಸ್ಟಿಕ್ಕರ್‌ಗಳನ್ನು ಹಚ್ಚುತ್ತಾರೆ ಯಾವುದಾದರೂ ಕಾರ್ಯಕ್ರಮಗಳಲ್ಲಿ ಹಾಕಬೇಕೇ ಹೊರತು, ಪದೇ ಪದೇ ಮಾಡುವುದರಿಂದ ಅವುಗಳಲ್ಲಿ ಇರುವ ರಾಸಾಯನಿಕ ವಸ್ತುಗಳು ಮಗುವಿನ ಹೊಟ್ಟೆಗೆ ಸೇರಿಕೊಳ್ಳುತ್ತವೆ.

ಹಳ್ಳಿಗಳಲ್ಲಿ ಚಿಕ್ಕ ಮಕ್ಕಳಿಗೆ ಕೊರಳು ಕೈ ಹಾಗೂ ಕಾಲುಗಳಿಗೆ ದೇವರ ತಾಯಿತ, ಕಂಬಳಿಯ ದಾರ ಅದು ಇದು ಅಂತ ಕೈ ತುಂಬಾ ಕೊರಳು ತುಂಬಾ ದಾರಗಳನ್ನು ಕಟ್ಟಿರುತ್ತಾರೆ. ಅವುಗಳನ್ನು ಸ್ವಚ್ಛಗೊಳಿಸುವುದು ಇಲ್ಲ ಕೆಲವು ಮಕ್ಕಳ ಕೈಗಳು ದಾರ ಬಿಗಿಯಾಗಿ ಕೊರೆಯುತ್ತಿದ್ದರು ತಂದೆ ತಾಯಿಗಳು ಅದರ ಕಡೆ ಗಮನವೇ ನೀಡಿರುವುದಿಲ್ಲ (ನಮ್ಮ ಶಾಲೆಗೆ ಬರುತ್ತಿದ್ದ ಅನೇಕ ಮಕ್ಕಳ ಕೈಯಲ್ಲಿ ಈ ರೀತಿಯಾದ ಬಿಗಿಯಾದ ದಾರಗಳನ್ನು ಮನೆಯಲ್ಲಿ ತಾಯಿಯ ಹತ್ತಿರ ಬಿಚ್ಚಿಸಿಕೊಳ್ಳಲು ಇಲ್ಲವೇ ಅವುಗಳನ್ನು ಸಡಿಲಿಸಿಕೊಳ್ಳಬೇಕು ಎಂದು ಹೇಳುತ್ತಿದ್ದೆ. ಜೊತೆಗೆ ತುಂಬಾ ಕೊಳಕಾದ ದಾರಗಳನ್ನು ತೆಗೆದುಹಾಕಿ ಇಲ್ಲವೇ ಸ್ವಚ್ಛಗೊಳಿಸಿ ಎಂದು ಹೇಳುತ್ತಿದ್ದೆ).

         ನಮ್ಮ ತಂದೆ ತಾಯಿ ನಮ್ಮ ಮಕ್ಕಳಿಗೆ ಸ್ವಾಮಿಗಳು ತಾಯಿತ ಕೊಟ್ಟರೆ ಅದನ್ನು ಕೊರಳಿಗೆ ಹಾಕುವ ಶಾಸ್ತ್ರ ಮಾಡಿ ನಂತರ ಬಿಚ್ಚಿ ಜೋಲಿಗೆ ಕಟ್ಟುತ್ತಿದ್ದರು. ಮಕ್ಕಳಿಗೆ ಆ ತಾಯಿತ ಕೊರಳಿಗೆ ಒತ್ತದಿರಲೆಂದು ಈ ರೀತಿ ಮಾಡುತ್ತಿದ್ದರು. ಇತ್ತೀಚೆಗಂತೂ ಮಕ್ಕಳು ಎರಡು ಮೂರು ವರ್ಷದವರಾಗಿದ್ದರು ಸಹ ಯಾವಾಗಲೂ ಪ್ಯಾಡ್‌ಗಳನ್ನು ಹಾಕಿರುತ್ತಾರೆ. ಇದರಿಂದಾಗಿ ಮಕ್ಕಳಿಗೆ ಹೊರಗಡೆ ಮಲಮೂತ್ರ ಮಾಡುವ ರೂಢಿ ಇಲ್ಲವಾಗಿರುತ್ತದೆ.

       ಎಷ್ಟೋ ತಾಯಂದಿರು ಹೀಗೆ ಹೇಳುತ್ತಾರೆ? ಪದೇ ಪದೇ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗಿ ಮಾಡಿಸುವುದು ಬೇಜಾರಿನ ಕೆಲಸ ಅದಕ್ಕೆ ಹಣ ಖರ್ಚಾದರೂ ಪರವಾಗಿಲ್ಲ ಎಂದು ಪ್ಯಾಡ್ ಹಾಕುತ್ತೇವೆ ಎನ್ನುವರು.

        ತಾಯಿಯ ಕೆಲಸ ಕಡಿಮೆಯಾಗಬಹುದು, ಆದರೆ ಅದರಿಂದಾಗಿ ಮಗುವಿಗೆ ದಿನವೆಲ್ಲ ಪ್ಯಾಡ್ ಹಾಕುವುದರಿಂದ ಚರ್ಮಕ್ಕೆ ಬಾದೆಯಾಗುವುದು. ಇದರ ಜೊತೆಗೆ ನಾವು ಪರಿಸರ ಪ್ರಾಣಿಗಳ ಕಡೆಗೂ ಸ್ವಲ್ಪ ಗಮನಿಸಬೇಕು ಅಲ್ಲವೇ. ದನಗಳು, ಹಂದಿಗಳ ಹೊಟ್ಟೆಯನ್ನು ಈ ಪ್ಯಾಡ್‌ಗಳು ಸೇರಿಕೊಳ್ಳುತ್ತವೆ. ಅದೇ ರೀತಿಯಾಗಿ ಎಲ್ಲೆಂದರಲ್ಲಿ ಪ್ಯಾಡ್‌ಗಳ ವಿಸರ್ಜನೆಯಿಂದ ಪರಿಸರ ಕಲುಷಿತವಾಗುವುದು.

(ಅನಿವಾರ್ಯವಿದ್ದಾಗ ಅಂದರೆ ಹೊರಗಡೆ ಎಲ್ಲಾದರೂ ಹೋಗಬೇಕಾಗಿ ಬಂದಾಗ ಸಭೆ ಸಮಾರಂಭಗಳಿಗೆ ಹೋಗುವಾಗ ಪ್ರಯಾಣ ಮಾಡುವಾಗ ಅವಶ್ಯಕತೆ ಬಿದ್ದಾಗ ಹಾಕಬಹುದು ಎಲ್ಲಾ ಸಂದರ್ಭಗಳಲ್ಲೂ ಬೇಡ)

        ನಾವು ಮಕ್ಕಳನ್ನು ಸಾಕಿ ಬೆಳೆಸಲು ಎಷ್ಟೊಂದು ಕಷ್ಟಪಡುತ್ತೇವೆ ಅಂತಹುದರಲ್ಲಿ ಮಕ್ಕಳಿಗೆ ಮಲಮೂತ್ರಗಳನ್ನು ವಿಸರ್ಜನೆ ಮಾಡಿಸಲು ಬೇಸರ ಮಾಡಿಕೊಳ್ಳದೆ ಸ್ವಲ್ಪ ದಿವಸಗಳಮಟ್ಟಿಗೆ ಕಷ್ಟಪಟ್ಟರೆ ಮಗು ವೇಳೆಗೆ ಸರಿಯಾಗಿ ನಿಗದಿತ ಜಾಗದಲ್ಲಿ ಮಾಡುವ ಅಭ್ಯಾಸ ಬೆಳೆಸಿಕೊಳ್ಳುತ್ತದೆ.


Spread the love

Leave a Comment

error: Content is protected !!