ಪಾಣಿನಿ ಮಹರ್ಷಿ ಯಾರು? Who is Panini maharshi.

Spread the love

 ಪಾಣಿನಿ ಮಹರ್ಷಿ ಯಾರು? Who is Panini maharshi.

    ಹಿಂದಿನ ಕಾಲದಲ್ಲಿ ‘ತಕ್ಷಶಿಲೆ’ ಅತಿ ದೊಡ್ಡ ಗುರುಕುಲವಾಗಿತ್ತು. ದೇಶ ವಿದೇಶಗಳಿಂದ ವಿದ್ಯಾರ್ಥಿಗಳನ್ನು ಸೆಳೆಯುತ್ತಿತ್ತು. ಅಲ್ಲಿ ವಿದ್ಯೆ ಕಲಿಯುವುದು ಎಂದರೆ ಹೆಗ್ಗಳಿಕೆ ಹಾಗೂ ಪ್ರತಿಷ್ಠೆಯು ಆಗಿತ್ತು. ಮಹಾನ್ ವಿದ್ವಾಂಸರುಗಳೆಲ್ಲ ‘ತಕ್ಷಶಿಲೆ’ಯಿಂದಲೇ ಕಲಿತು ಬಂದವರು. ಹೇಗಾದರೂ ಮಾಡಿ ತಮ್ಮ ಮಕ್ಕಳನ್ನು ತಕ್ಷಶಿಲೆಯಲ್ಲಿ ವಿದ್ಯಾಭ್ಯಾಸಕ್ಕೆ ಬಿಡಬೇಕು ಎಂಬುದು ಪ್ರತಿಯೊಬ್ಬ ತಂದೆ ತಾಯಿಯರ ಮಹಾದಾಸೆಯಾಗಿತ್ತು . 

         ಆ ಕಾಲದಲ್ಲಿ ‘ಶಲಾಂಕ’ ಎಂಬ ಬ್ರಾಹ್ಮಣ ತನ್ನ ಪತ್ನಿ ‘ದಾಕ್ಷಾ’ ಳೂಂದಿಗೆ ಗಾಂಧಾರ ದೇಶದ ‘ಶಲಾತುರ’ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದನು. ಶಲಾಂಕ ಮಹಾನ್ ಶಿವಭಕ್ತನಾಗಿದ್ದನು. ಇವರಿಗೊಬ್ಬ ಮಗನಿದ್ದು, ಇವನನ್ನು ತಂದೆ -ತಾಯಿ ಹೆಸರಿನ ಮೇಲೆ ದಾಕ್ಷಿಪುತ್ರ , ಶಾಲಂಕನೆಂದು ಕರೆಯುತ್ತಿದ್ದರು. ಶಾಲಾತುರೀಯ ಎಂದು ಊರವರು ಕರೆಯುತ್ತಿದ್ದರು. ಐದು ವರ್ಷ ವಾಗುತ್ತಿದ್ದಂತೆ ತಾಯಿ ದಾಕ್ಷಿ ಮಗನನ್ನು ತಕ್ಷಶಿಲೆಯ ಗುರುಕುಲಕ್ಕೆ ಕರೆತಂದು ವಿದ್ಯಾರ್ಜನೆಗೆ ಬಿಟ್ಟಳು. ಇವನು ಶತ ದಡ್ಡ ವಿದ್ಯಾರ್ಥಿ. ಓದುವುದರಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ. ಗುರುಗಳು ಮಾಡಿದ ಪಾಠವನ್ನು ಎಂದೂ, ಕೇಳುತ್ತಿರಲಿಲ್ಲ, ಒಪ್ಪಿಸುತ್ತಿರಲಿಲ್ಲ. ಹೀಗಿರುವಾಗ, ಒಮ್ಮೆ ಗುರುಗಳು ಪಾಠ ಮಾಡುತ್ತಿದ್ದರು ಇವನು ಮಾತ್ರ ಪಾಠದ ಕಡೆ ಗಮನವಿಲ್ಲದಂತೆ ಬೇರೆಲ್ಲೋ ನೋಡುತ್ತಾ ಕುಳಿತಿದ್ದನು. ಇದು ನಿತ್ಯವೂ ಹೀಗೆ ನಡೆಯುತ್ತಿತ್ತು. ಗುರುಗಳು ಹತ್ತಿರ ಬಂದು, ಅಂದಿನ ಪಾಠವನ್ನು ಒಪ್ಪಿಸು ಎಂದರು. ಅವನು ಗುರುಗಳು ಮಾಡುವ ಪಾಠವನ್ನು ಕೇಳಿ ಮನನ ಮಾಡಿಕೊಂಡಿದ್ದರೆ ಆಗುತ್ತಿತ್ತು. ಅದ್ಯಾವುದೂ ಮಾಡದೆ ಇದ್ದರಿಂದ ಪಾಠ ಒಪ್ಪಿಸಲು ಆಗದೆ, ಸುಮ್ಮನೆ ನಿಂತನು. ಗುರುಗಳಿಗೆ ಸಿಟ್ಟು ಬಂದು ಎಲ್ಲಿ ನಿನ್ನ ಕೈ ತೋರಿಸು ಎಂದು ಬೆತ್ತದಿಂದ ಹೊಡೆಯಲು ಮುಂದಾದರು. 

       ಆದರೆ ಅವನು ಚಾಚಿದ ಅಂಗೈಯನ್ನು ನೋಡಿ ಬೆತ್ತವನ್ನು ಹಿಂತೆಗೆದು ಕೊಂಡರು. ಆಗ ಬಾಲಕನು ಯಾಕೆ ಗುರುಗಳೇ ಹೊಡೆಯಲಿಲ್ಲ ಎಂದು ಕೇಳಿದ. ಅದಕ್ಕೆ ಗುರುಗಳು ಅಪ್ಪಾ, ನಿನ್ನ ಕೈಯಲ್ಲಿ ವಿದ್ಯಾರೇಖೆ ಇರಲಿ, ಅದರ ಗುರುತು ಇಲ್ಲ ನಿನಗೆ ವಿದ್ಯೆ ಹೇಳಿಕೊಡುವುದು ವ್ಯರ್ಥ ಪ್ರಯತ್ನ ಆದುದರಿಂದ ನೀನು ಇನ್ನು ಮುಂದೆ ಗುರುಕುಲಕ್ಕೆ ಬರಬೇಡ ಮನೆಗೆ ಹೋಗು ಎಂದರು. ಮುಗ್ಧನಾದ ಹುಡುಗ, ಗುರುಗಳೇ, ವಿದ್ಯಾರೇಖೆ ಎಂದರೆ ಏನು ಗುರುಗಳೇ ಎಂದು ಕೇಳಿದಾಗ, ಗುರುಗಳು ಪಕ್ಕದಲ್ಲಿದ್ದ ಒಬ್ಬ ಹುಡುಗನನ್ನು ಕರೆದು ಅವನ ಕೈಯಲ್ಲಿರುವ ವಿದ್ಯಾರೇಖೆಯನ್ನು ತೋರಿಸಿದರು. ಬಾಲಕ ಮಾತನಾಡದೆ,ಗುರುಗಳು ಹೇಳಿದಂತೆ, ಬಹಳ ಬೇಸರದಿಂದ ಮನೆ ಕಡೆ ನಡೆದು ಬರುತ್ತಿದ್ದನು. 

        ಆಗ ಊರ ಬಾವಿಯ ಬಳಿ ಹೋಗಿ ಅಳುತ್ತಾ ಕುಳಿತನು. ಆಗ ನೀರು ಸೇದಲು ನಾಲ್ಕು ಜನ ಹೆಂಗಸರು ಬಂದರು. ಸಣ್ಣ ಹುಡುಗ ಏಕೆ ಅಳುತ್ತಿರುವೆ ಮಗು ಎಂದು ಕೇಳಿದರು. ನಡೆದ ಸಂಗತಿಯನ್ನೆಲ್ಲಾ ಹೇಳಿದ. ನೀರು ಸೇದಲು ಬಂದ ಮಹಿಳೆಯರು, ನೀರು ಸೇರಿಸಿ ಬಾವಿಕಟ್ಟೆಯ ಕಲ್ಲಿನ ಮೇಲೆ ಇಟ್ಟು ಎತ್ತಿಕೊಳ್ಳುತ್ತಿದ್ದರು. ಆ ಹುಡುಗ ಹತ್ತಿರ ಬಂದು ನೋಡಿ, ಬಾವಿ ಕಟ್ಟುವಾಗಲೇ ಕೊಡ ಇಡಲು ಕಲ್ಲಿನ ಮೇಲೆ ಗುಂಡಿ ಮಾಡಿದ್ದರೆ? ಎಂದು ಕೇಳಿದ. ಆಗ ಮಹಿಳೆಯರು, ನೋಡು ಮಗು ಅಸಾಧ್ಯ ಎನ್ನುವುದು ಯಾವುದು ಇಲ್ಲ, ಈ ಬಾವಿ ಕಟ್ಟೆಯಲ್ಲಿ ಕೊಡ ಇಡುವ ಕಲ್ಲನ್ನು ನೀನೇ ನೋಡಿದಿಯಲ್ಲ, ನಾವು ಮಣ್ಣಿನ ಮಡಿಕೆಯಿಂದ ನೀರು ಸೇದಿ ಪ್ರತಿ ದಿನ ಈ ಕಲ್ಲಿನ ಮೇಲೆ ಇಡುತ್ತಾ ಬಂದಿದ್ದೇವೆ ಅದು ಮಣ್ಣಿನ ಮಡಿಕೆಯ ಭಾರದಿಂದ ಕಲ್ಲು ಸವೆದು ಗುಂಡಿ ಯಾಗಿದೆ. ಯಾವದೇ ಮಡಿಕೆಗೆ ಕಲ್ಲಿನಿಂದ ಹೊಡೆದರೆ ಮಡಿಕೆ ಒಡೆದು ಚೂರಾಗುತ್ತದೆ, ಆದರೆ ಅದೇ ಮಣ್ಣಿನ ಮಡಿಕೆಯಲ್ಲಿ ನೀರು ಸೇದಿ ಪ್ರತಿನಿತ್ಯ ಕಲ್ಲಿನ ಮೇಲೆ ಇಡುವುದರಿಂದ ಕಲ್ಲೇ ಸವೆದು ಹೋಗಿದೆ. ಹೀಗಿರುವಾಗ, ನೀನು ಪ್ರಯತ್ನಪಟ್ಟರೆ ನಿನಗೆ ವಿದ್ಯೆ ಹಿಡಿದೇ ಹಿಡಿಯುತ್ತದೆ ಎಂದರು. 

        ಇದನ್ನು ಕೇಳಿದ ಬಾಲಕ ಹೌದಲ್ಲವೇ ? ಕಲ್ಲು ಹೊಡೆದರೆ ಒಡೆವ ಮಡಿಕೆ, ಆ ಕಲ್ಲನ್ನೇ ಸವೆಸಿ ಗುಂಡಿ ಮಾಡಿದೆ ಎಂದ ಮೇಲೆ ನಾನು ಯಾಕೆ ವಿದ್ಯೆ ಕಲಿಯಲು ಪ್ರಯತ್ನ ಪಡಬಾರದು? ನಾನು ದಡ್ಡನಾದರೇನಂತೆ ? ಪ್ರಯತ್ನ ಪಟ್ಟು ಬಿಡದೆ ಅಭ್ಯಾಸ ಮಾಡಿದರೆ,‌ ಗಟ್ಟಿಯಾದ ಚಪ್ಪಡಿ ಕಲ್ಲು ಸವೆದಂತೆ, ನಾನು ಪ್ರಯತ್ನ ಪಟ್ಟರೆ, ನನಗೂ ವಿದ್ಯೆ ಕಲಿಯಲು ಸಾಧ್ಯವಾಗುತ್ತದೆ. ಗುರುಗಳ ಬಳಿ ಹೊರಡಲು ಹೊರಟನು. ಆದರೆ ಗುರುಗಳು ವಿದ್ಯಾರೇಖೆ ಇಲ್ಲ ಎಂಬುದನ್ನು ನೆನಪಿಸಿ ಕೊಂಡ ಬಾಲಕನು, ನನ್ನ ಕೈಯಲ್ಲಿ ವಿದ್ಯಾ ರೇಖೆ ಇಲ್ಲದಿದ್ದರೆ ಏನಂತೆ, ನಾನೇ ನನ್ನ ಕೈಯ್ಯಾರೆ ವಿದ್ಯಾರೇಖೆ ಹಾಕುತ್ತೇನೆ ಎಂದುಕೊಂಡು ಭಾವಿಕಟ್ಟೆಯ ಬಳಿ ಬಿದ್ದಿದ್ದ ಚೂಪನೆ ಬೆಣಚು ಕಲ್ಲನ್ನು ತೆಗೆದುಕೊಂಡು ತನ್ನ ಬಲ ಅಂಗೈ ಮೇಲೆ ವಿದ್ಯಾರೇಖೆಯಂತೆ ಗೀರನ್ನು ಗೀಚಿಕೊಂಡ. 

         ರಕ್ತ ಸುರಿಯುತ್ತಿದ್ದ ಕೈಯಿಂದಲೇ ಶಾಲೆಗೆ ಓಡಿ ಬಂದು, ಗುರುಗಳ ಬಳಿ ಹೋದನು. ಗುರುಗಳೇ ನನಗೆ ವಿದ್ಯೆ ಹೇಳಿಕೊಡಿ ಎಂದನು. ಅದಕ್ಕೆ ಗುರುಗಳು ನಿನ್ನ ಕೈಯಲ್ಲಿ ವಿದ್ಯಾರೇಖೆ ಇಲ್ಲ ಎಂದರು. ಆಗ ಹುಡುಗ ತನ್ನ ಬೆನ್ನ ಹಿಂದೆ ಮುಚ್ಚಿಟ್ಟುಕೊಂಡಿದ್ದ ಕೈಯನ್ನು ಗುರುಗಳಿಗೆ ತೋರಿಸಿ ನೋಡಿ ಗುರುಗಳೇ ವಿದ್ಯಾ ರೇಖೆ ಇದೆ ಅಲ್ಲವೇ ಎಂದನು. ಬಾಲಕನ ಕೈ ನೋಡಿದ ಗುರುಗಳು ಆಘಾತಗೊಂಡರು. ನೋಡಿದರು ಎಳೆಯ ಕೈ ಮೇಲೆ ಕಲ್ಲನ್ನು ಊರಿ ಗೀಚಿ ಕೊಂಡಿದ್ದರಿಂದ ರಕ್ತ ಬರುತ್ತಿತ್ತು. ಆ ಬಾಲಕನ ವಿದ್ಯಾ ದಾಹವನ್ನು ಕಂಡ ಗುರುಗಳ ಕಣ್ತುಂಬಿ ಬಂದಿತು.  

       ಮಗು ನಿನ್ನ ವಿದ್ಯೆ ಕಲಿಯುವ ಬಯಕೆಯನ್ನು ನಾನು ಪೂರೈಸುತ್ತೇನೆ. ನಿನ್ನಂಥ ಶ್ರದ್ಧೆ ಇರುವ ವಿದ್ಯಾರ್ಥಿಗೆ ವಿದ್ಯೆ ಕಲಿಸಿದರೆ ನನ್ನ ಜನ್ಮ ಸಾರ್ಥಕವಾಗುತ್ತದೆ. ಎಂದು ಗುರುಗಳು ಹುಡುಗನನ್ನು ಅಪ್ಪಿ ಕೊಂಡರು. ನಂತರ ಮಗು ನಿನಗೆ   ದೈವದತ್ತವಾಗಿ ಹುಟ್ಟಿನಿಂದಲೇ ಬಂದ ವಿದ್ಯಾರೇಖೆ ಇಲ್ಲದಿರಬಹುದು. ಆದರೆ ಆ ಶಿವನನ್ನು ಕುರಿತು ತಪಸ್ಸು ಮಾಡು ನಿನಗೆ ಶಿವನು ಒಲಿಯುತ್ತಾನೆ ಎಂದು ಅವನಿಗೆ ಶಿವ ಮಂತ್ರವನ್ನು ಉಪದೇಶಿಸಿ ಆಶೀರ್ವಾದ ಮಾಡಿದರು. ಇಂಥ ಬಾಲಕನಿಗೆ ಆಶೀರ್ವಾದ ಮಾಡಿದ ಗುರುಗಳ ಹೆಸರು ‘ಉಪವರ್ಷ’ ಎಂದು. ಗುರುಗಳ ಆದೇಶದಂತೆ ಬಾಲಕನು ಶಿವನನ್ನು ಕುರಿತು ತಪಸ್ಸು ಮಾಡಿದ ಅವನ ತಪಸ್ಸಿಗೆ ಮೆಚ್ಚಿದ ಶಿವನು, ವ್ಯಾಕರಣ ಸೂತ್ರಕ್ಕೆ ಮೂಲವಾಗಿರುವ ‘ಮಾಹೇಶ್ವರ’ ಸೂತ್ರವನ್ನು ಉಪದೇಶಿಸಿದನು. ಏನೂ ಮಾತನಾಡುದೆ ಪರಮೇಶ್ವರ ತನ್ನ ಡಮರುಗವನ್ನು 14 ಸಾರಿ ಬಾರಿಸುತ್ತಾ 14 ನಾದಗಳನ್ನು ಹೊರಹೊಮ್ಮಿಸಿನಂತೆ, ಬಾಲಕ 14 ನಾದಗಳ ಅಕ್ಷರಗಳನ್ನು ಗ್ರಹಿಸಿ, ಅದರ ಮೇಲೆ ಸಂಸ್ಕೃತಕ್ಕೆ ವ್ಯಾಖ್ಯಾನ ರಚಿಸಿದನಂತೆ. 

       ಕೈಯಲ್ಲಿ ವಿದ್ಯಾರೇಖೆ ಇಲ್ಲದೆ, ಹಠದಿಂದ ತನ್ನ ಕೈಗೆ ತಾನೇ ವಿದ್ಯಾರೇಖೆ ಗೀಚಿಕೊಂಡು, ತನ್ನದೇ ಪರಿಶ್ರಮ ಹಾಗೂ ಸಂಕಲ್ಪದಿಂದ, ವಿದ್ಯೆಯನ್ನು ಕಲಿತನು. ಮುಂದೆ ಈ ಮೇಧಾವಿಯು ಸಂಸ್ಕೃತಕ್ಕೆ ಮೂಲಾಧಾರವಾಗಿರುವ ವ್ಯಾಕರಣ ಶಾಸ್ತ್ರವನ್ನು ಬರೆದು “ಪಾಣಿನಿ ಮಹರ್ಷಿ” ಎಂಬ ಖ್ಯಾತಿಯನ್ನು ಪಡೆದರು. ಇವರ ಹೆಸರು ಜಗತ್ತಿನಾದ್ಯಂತ ಚಿರಪರಿಚಿತವಾಗಿದೆ. ವೇದ, ಛಂದಸ್ಸು ,ಜ್ಯೋತಿಷ್ಯ, ಮುಂತಾದ ಮಹತ್ತರವಾದದನ್ನು ಅರಿಯಲು ಅಗತ್ಯವಾಗಿ ಬೇಕಾಗಿದ್ದ ಸಂಸ್ಕೃತಕ್ಕೆ ವ್ಯಾಕರಣವನ್ನು ಬರೆದು, ಪ್ರತಿಯೊಬ್ಬರು ಸರಳವಾಗಿ ಅಭ್ಯಾಸ ಮಾಡುವಂತೆ ಸರಳಿ ಗೊಳಿಸಿ, ಸೂತ್ರಗಳನ್ನು ಅರ್ಥೈಸಿಕೊಂಡು ಆನಂತರ ವ್ಯಾಕರಣ, ಮಹಾ ಭಾಷ್ಯ ರಚಿಸಿದ ಪ್ರಮುಖರಲ್ಲಿ ಪಾಣಿನಿ, ವರರುಚಿ, ಪತಂಜಲಿ, ಈ ಮೂವರನ್ನು ಸಂಸ್ಕೃತ ವ್ಯಾಕರಣ ಶಾಸ್ತ್ರದಲ್ಲಿ ದಿಗ್ಗಜ ಮುನಿತ್ರಯರೆಂದು ತಿಳಿಸುತ್ತಾರೆ.

ಪಾಣಿನಿ ಮಹರ್ಷಿ ತಾನು ಬರೆದ ಸಂಸ್ಕೃತ ವ್ಯಾಕರಣಕ್ಕೆ ವರರುಚಿ,ಪತಂಜಲಿ ಯರು ಭಾಷಾ ಬರೆಯುವಂತೆ ಮಾಡಿದ ಪಾಣಿನಿ ಮಹರ್ಷಿಗಳು ಮೊದಲನೆ ಯವರಾಗುತ್ತಾರೆ. ಸಂಸ್ಕೃತ ವ್ಯಾಕರಣದ ಮೂಲಪುರುಷ ಪಾಣಿನಿ ಮಹರ್ಷಿ ಎಂದು ಪ್ರಸಿದ್ಧರಾಗಿದ್ದಾರೆ, ವಿದ್ಯಾರೇಖೆ, ಹಾಕಿಕೊಂಡು ಛಲ ಮತ್ತು ಪರಿಶ್ರಮದಿಂದ ವಿದ್ಯೆ ಕಲಿಯಬಹುದೆಂದು ಸಾಧಿಸಿ, ತೋರಿಸಿದ ಮಹಾನ್ ಪುರುಷ “ಪಾಣಿನಿ ಮಹರ್ಷಿ” ಇವರು ಬರೆದ ವ್ಯಾಕರಣ ಗ್ರಂಥಕ್ಕೆ ‘ಅಷ್ಟಾಧ್ಯಾಯಿ’ ಎಂಬ ಹೇಳುತ್ತಾರೆ. ಯಾರ ಕೈಯಲ್ಲಿ ವಿದ್ಯಾರೇಕೆ ಇರಲಿಲ್ಲವೋ ಅಂತವರು ಬರೆದ ಸಂಸ್ಕೃತ ವ್ಯಾಕರಣ ಗ್ರಂಥ ಇಂದು ಸಂಸ್ಕೃತ ಸಾಹಿತ್ಯಕ್ಕೆ ಆಧಾರವಾಗಿದೆ. ಅತಿಕ್ಲಿಷ್ಟಕರವಾದ ಸಂಸ್ಕೃತವನ್ನು ಸರಳಿಗೊಳಿಸುವ ಸಲುವಾಗಿ, ಸಂಸ್ಕೃತ ವ್ಯಾಕರಣ ಶಾಸ್ತ್ರದಲ್ಲಿ ರಚನೆ ಮಾಡಿಕೊಟ್ಟ ಮಹಾನ್ ಮೇಧಾವಿ ‘ಪಾಣಿನಿ ಮಹರ್ಷಿ’ 

“ವಿದ್ಯೆಯೆಂಬುದು ಮಾನವನ ರೂಪವನ್ನು ಹೆಚ್ಚಿಸುವ ಭದ್ರವಾದ ಗುಪ್ತವಾದ ಸಂಪತ್ತು. ಐಶ್ವರ್ಯವನ್ನು ಯಶಸ್ಸನ್ನು ಮತ್ತು ಸುಖವನ್ನು ವೃದ್ಧಿಸುತ್ತದೆ. ವಿದೇಶದಲ್ಲಿ ಬಂಧುವಾಗಿರುತ್ತದೆ. ವಿದ್ಯೆಯು ಪರದೇವತೆಯಂತೆ ರಾಜರಿಂದ ಧನವು ಆರಾಧಿಸಲ್ಪಡುವುದಿಲ್ಲ, ಕೇವಲ ವಿದ್ಯೆ .ವಿದ್ಯೆ ಇಲ್ಲದವನು ಪಶುವಿನಂತೆ.” 


Spread the love

Leave a Comment

error: Content is protected !!